ಅಂತರಾಷ್ಟ್ರೀಯ

ವಿಂಬಲ್ಡನ್​ಗೆ ಆಟಗಾರ್ತಿಯರ ಡ್ರೆಸ್ ವಿವಾದದ ಬಿಸಿ!

Pinterest LinkedIn Tumblr

dress

ಲಂಡನ್: ಟೆನಿಸ್ ಆಟದ ಮಟ್ಟಿಗೆ ‘ವಿಶ್ವಕಪ್’ನಷ್ಟೇ ಮಹತ್ವ ಹೊಂದಿರುವ ವಿಂಬಲ್ಡನ್ ಟೂರ್ನಿ ಶತಮಾನದಷ್ಟು ಹಳೆಯದ್ದು ಮಾತ್ರವಲ್ಲದೆ ವಿಶಿಷ್ಟ ನೀತಿ ನಿಯಮ ಗಳಿಂದಾಗಿಯೂ ಇತರ ಮೂರು ಗ್ರಾಂಡ್ ಸ್ಲಾಂಗಳಿಗಿಂತ ಭಿನ್ನವಾದುದು. ಟೂರ್ನಿಯಲ್ಲಿ ಆಡುವವರೆಲ್ಲರೂ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸಬೇಕೆಂಬುದು ಇದರಲ್ಲಿ ಅತ್ಯಂತ ಕಟ್ಟುನಿಟ್ಟಾಗಿರುವ ನಿಯಮ. ಇದೀಗ ಸೋಮವಾರ ಆರಂಭಗೊಳ್ಳಲಿರುವ 130ನೇ ಆವೃತ್ತಿಗೆ ಮುನ್ನ ಆಟಗಾರ್ತಿಯರ ಸಮವಸ್ತ್ರ ವಿವಾದಕ್ಕೆ ಸಿಲುಕಿಕೊಂಡಿದೆ. ‘ನೈಕಿ’ ಸಂಸ್ಥೆ ತಾನು ಪ್ರಾಯೋಜಕತ್ವ ವಹಿಸಿಕೊಂಡಿರುವ ಆಟಗಾರ್ತಿಯರಿಗಾಗಿ ಸಿದ್ಧಪಡಿಸಿರುವ ಸಮವಸ್ತ್ರ ಅತಿಯಾಗಿ ಮೈತೋರಿಸುವಂತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಈ ದೂರಿಗೆ ಸ್ಪಂದಿಸಿ ‘ನೈಕಿ’ ಕಂಪನಿ ಈಗಾಗಲೆ ಈ ಸಮವಸ್ತ್ರಗಳನ್ನು ವಾಪಸ್ ಪಡೆದಿದ್ದು, ಆಟಗಾರ್ತಿಯರಿಗೆ ಒಪ್ಪಿಗೆಯಾಗುವಂತೆ ರೂಪಿಸುವುದಾಗಿ ತಿಳಿಸಿದೆ.

‘ಪ್ರೀಮಿಯರ್ ಸ್ಲಾಂ’ ಎಂಬ ಶ್ರೇಣಿಯ ಶ್ವೇತ ಸಮವಸ್ತ್ರ ಇದಾಗಿದ್ದು, ಆಟಗಾರ್ತಿಯರು ಆಡುವಾಗ ಅವರ ಮೈಪ್ರದರ್ಶನಕ್ಕೆ ಕಾರಣವಾಗು ತ್ತದೆ ಎಂದು ದೂರಲಾಗಿದೆ. ಮೊದಲಿಗೆ ಈ ವಿನ್ಯಾಸವನ್ನು ಆಲ್ ಇಂಗ್ಲೆಂಡ್ ಕ್ಲಬ್ ಅಂಗೀಕರಿಸಿತ್ತು. ಯಾಕೆಂದರೆ ಸಂಪೂರ್ಣ ಬಿಳಿ ಬಣ್ಣದ್ದಾಗಿರಬೇಕೆಂಬ ನೀತಿಸಂಹಿತೆಗೆ ಇದು ಒಪ್ಪಿಗೆಯಾಗಿತ್ತು. ಆದರೆ ಈ ಉಡುಪು ‘ಟೆನಿಸ್ ಆಟಗಾರ್ತಿಯರು ತೊಡುವುದಕ್ಕಿಂತ, ಮಹಿಳೆಯರು ನಿದ್ರಿಸುವ ವೇಳೆ ಧರಿಸುವಂತಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿತ್ತು. ಅಲ್ಲದೆ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಈ ಉಡುಪು ತೊಟ್ಟು ಆಡಿದ್ದ ಆಟಗಾರ್ತಿಯರು, ಬಟ್ಟೆ ಸೊಂಟಕ್ಕಿಂತ ಮೇಲಕ್ಕೆ ಹಾರುತ್ತಿದ್ದ ಮತ್ತು ಆಟಕ್ಕೆ ಅಡ್ಡಿಪಡಿಸುವ ಬಗ್ಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೈಕಿ ಸಂಸ್ಥೆ, ‘ಸಣ್ಣ ಬದಲಾವಣೆಗಾಗಿ ಆಟಗಾರ್ತಿಯರು ತಮ್ಮ ಸಮವಸ್ತ್ರವನ್ನು ವಿಂಬಲ್ಡನ್ನಲ್ಲಿರುವ ನಮ್ಮ ಕಚೇರಿಗೆ ಹಿಂದಿರುಗಿಸಬೇಕು. ಟೂರ್ನಿಯ ನಿಯಮದನ್ವಯ ಈ ಬದಲಾವಣೆ ಅಗತ್ಯವಾಗಿದೆ’ ಎಂದು ಸೂಚನೆ ಹೊರಡಿಸಿದೆ. ಕೆನಡ ತಾರೆ ಎಗುನಿ ಬೌಚಾರ್ಡ್, ಬ್ರಿಟನ್ನ ಲೌರಾ ರಾಬ್ಸನ್ ಸಹಿತ ಪ್ರಧಾನ ಸುತ್ತಿನಲ್ಲಿ ಆಡುವ ಸುಮಾರು 20 ಆಟಗಾರ್ತಿಯರ ಉಡುಪಿನ ವಿನ್ಯಾಸ ಬದಲಾಗಲಿದೆ ಎನ್ನಲಾಗಿದೆ.

ಮೊದಲ ವಾರ ಮಳೆಭೀತಿ

ವಿಂಬಲ್ಡನ್ ಗ್ರಾಸ್ ಕೋರ್ಟ್ ಟೆನಿಸ್ ಟೂರ್ನಿಯ ಮೊದಲ ವಾರದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ಭೀತಿ ಎದುರಾಗಿದೆ. ಟೂರ್ನಿಯ ಮೊದಲ ದಿನವಾದ ಸೋಮವಾರವೇ ಕೆಲ ಪಂದ್ಯಗಳಿಗೆ ಮಳೆ ಅಡಚಣೆ ತರುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೆ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದೆ. ಟೂರ್ನಿಯ 2 ಮತ್ತು 3ನೇ ದಿನದ ಪಂದ್ಯಗಳಿಗೆ ಮಳೆ ಹೆಚ್ಚು ಅಡಚಣೆ ತರುವ ನಿರೀಕ್ಷೆ ಇದ್ದು, 4ನೇ ದಿನದ ನಂತರ ಮಳೆ ಪ್ರಮಾಣ ಕಡಿಮೆಯಾಗಬಹುದು ಎನ್ನಲಾಗಿದೆ. ಆಲ್ ಇಂಗ್ಲೆಂಡ್ ಕ್ಲಬ್ನ ಸೆಂಟರ್ ಕೋರ್ಟ್ಗೆ ಮೇಲ್ಛಾವಣೆ ವ್ಯವಸ್ಥೆ ಇದೆ.

Comments are closed.