ರಾಷ್ಟ್ರೀಯ

ಯುವಕರು ‘ಉಗ್ರ’ರಾಗಲು ಬಾಬ್ರಿ, ಗೋಧ್ರಾ ಗಲಭೆಗಳೇ ಕಾರಣ

Pinterest LinkedIn Tumblr

babri_godhra1ನವದೆಹಲಿ (ಪಿಟಿಐ):1992 ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು 2002ರಲ್ಲಿ ನಡೆದ ಗೋಧ್ರಾ ಗಲಭೆ ಮೊದಲಾದವುಗಳಿಂದಾಗಿಯೇ ಭಾರತದಲ್ಲಿ ಅಲ್‍ಖೈದಾದಂತಹ ಉಗ್ರ ಸಂಘಟನೆಗಳತ್ತ ಯುವಕರು ಆಕರ್ಷಿತರಾಗಿದ್ದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

17 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ ದೆಹಲಿ ಪೊಲೀಸರ ವಿಶೇಷ ಪಡೆ, ಜಿಹಾದ್ ಉದ್ದೇಶದಿಂದ ಕೆಲವರು ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಜಮಾತ್–ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್, ಲಷ್ಕರೆ–ಎ–ತೊಯ್ಬಾ ಮುಖ್ಯಸ್ಥ ಜಾಕಿ ಉರ್ ರೆಹಮಾನ್ ಲಖ್ವಿ ಮತ್ತು ಇನ್ನೂ ಹಲವಾರು ಉಗ್ರರನ್ನು ಭೇಟಿಯಾಗಿದ್ದಾರೆ ಎಂದು ಹೇಳಿದೆ.

ಹಲವಾರು ಮಸೀದಿಗಳಲ್ಲಿ ಜಿಹಾದಿ ಭಾಷಣ ಮಾಡುತ್ತಿದ್ದ ಆರೋಪಿ ಸಯೇದ್ ಅನ್ಜಾರ್ ಷಾ ಅವರು, ತಲೆಮರೆಸಿಕೊಂಡಿರುವ ಆರೋಪಿ ಮೊಹಮ್ಮದ್ ಉಮರ್ ಅವರನ್ನು ಭೇಟಿಯಾಗಿ ಗೋಧ್ರಾ ಮತ್ತು ಬಾಬ್ರಿ ಮಸೀದಿ ವಿಷಯಗಳ ಬಗ್ಗೆ ಚರ್ಚಿಸಿರುವ ಬಗ್ಗೆ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಷಾ ಅವರ ನಿಲುವು ಬಗ್ಗೆ ಪ್ರಭಾವಿತರಾದ ಉಮರ್, ಷಾ ಅವರಿಗೆ ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ಪಡೆಯುವಂತೆ ಪ್ರೇರೇಪಿಸಿದ್ದರು. ಉಮರ್ ಅವರು ಪಾಕಿಸ್ತಾನದಿಂದಲೇ ಎಲ್ಲ ಕಾರ್ಯಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಅಬ್ದುರ್ ರೆಹಮಾನ್ ನೀಡಿದ ಮಾಹಿತಿಯಿಂದಾಗಿ ಭಾರತದಲ್ಲಿ ಅಡಗಿದ್ದ ಜೈಷೆ ಮೊಹಮ್ಮದ್ ಸಂಘಟನೆಯ ಸದಸ್ಯರಾದ ಸಲೀಂ, ಮನ್ಸೂರ್ ಮತ್ತು ಸಜ್ಜದ್ ಅವರನ್ನು ಬಂಧಿಸಲಾಗಿತ್ತು, ಈ ಮೂವರು 2001ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಶೂಟೌಟ್‍ನಲ್ಲಿ ಸಾವಿಗೀಡಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಉಗ್ರರು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸೇಡು ತೀರಿಸುವುದಕ್ಕಾಗಿ ಭಾರತಕ್ಕೆ ಬಂದಿದ್ದರು ಅಷ್ಟೇ ಅಲ್ಲದೆ ಇವರು ಅಯೋಧ್ಯೆಯಲ್ಲಿರುವ ರಾಮ ಮಂದಿರದ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದ್ದರು. ಅಷ್ಟು ಹೊತ್ತಿಗೆ ಶೂಟೌಟ್‍ನಲ್ಲಿ ಬಲಿಯಾದರು ಎಂದು ಪೊಲೀಸರು ಹೇಳಿದ್ದಾರೆ.

ಇದೀಗ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಬಂಧಿತ ಐದು ಶಂಕಿತ ಉಗ್ರರ ಹೆಸರನ್ನು ನಮೂದಿಸಲಾಗಿದೆ. ಇದರಲ್ಲಿ ಮಹಮದ್ ಆಸಿಫ್, ಝಫರ್ ಮಸೂದ್, ಮೊಹಮದ್ ಅಬ್ದುಲ್ ರೆಹಮಾನ್, ಸಯೇದ್ ಅನ್ಜಾರ್ ಷಾ, ಅಬ್ದುಲ್ ಸಮಿ ಎಂಬುವವರನ್ನು ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಅಂತೆಯೇ 17 ಮಂದಿ ಬಂಧಿತ ಶಂಕಿತ ಉಗ್ರರ ವಿರುದ್ಧ ಸೆಕ್ಷನ್ 18 (ಪಿತೂರಿ ನಡೆಸುವುದು), 18-ಬಿ (ಭಯೋತ್ಪಾದಕ ಚಟುವಟಿಕೆಗಾಗಿ ವ್ಯಕ್ತಿ ನೇಮಕ), 20 (ಭಯೋತ್ಪಾದಕ ಸಂಘಟನೆಯ ಸದಸ್ಯ)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

Comments are closed.