ರಾಷ್ಟ್ರೀಯ

ವಿಮಾನ ಟಿಕೆಟ್‌ ರದ್ದು ಶುಲ್ಕಕ್ಕೆ ಮಿತಿ, ಲಗೇಜ್‌ ಶುಲ್ಕ ಕಡಿತ?

Pinterest LinkedIn Tumblr

flightವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ. ಟಿಕೆಟ್‌ ರದ್ದು ಶುಲ್ಕಕ್ಕೆ ಮಿತಿ, ಪ್ರಯಾಣ ವಿಳಂಬಕ್ಕೆ ಪರಿಹಾರ ಹೆಚ್ಚಳ ಹಾಗೂ ಹೆಚ್ಚುವರಿ ಲಗೇಜ್‌ ಶುಲ್ಕಕ್ಕೆ ಕಡಿವಾಣ ಹಾಕುವ ಪ್ರಸ್ತಾವನೆಯನ್ನು ಸರಕಾರ ಶನಿವಾರ ಮುಂದಿಟ್ಟಿದೆ.

‘ಈ ಸಮಸ್ಯೆಗಳ ಬಗ್ಗೆ ಪ್ರಯಾಣಿಕರಿಂದ ಸಾಕಷ್ಟು ದೂರು ಬಂದಿರುವ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಗಳನ್ನು ಶಿಫಾರಸು ಮಾಡಿದೆ,’ ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಜಪತಿ ರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಯಾಣಿಕ ಸ್ನೇಹಿ ಪ್ರಸ್ತಾವನೆಗಳನ್ನು ಮುಂದಿಟ್ಟಿರುವ ನಾಗರಿಕ ವಿಮಾನಯಾನ ಸಚಿವಾಲಯ, ವಿಮಾನ ರದ್ದಾದಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಎಲ್ಲ ತೆರಿಗೆಗಳನ್ನು ಹಿಂದಿರುಗಿಸಬೇಕು ಎಂದಿದೆ.

ಹೊರಡುವ 24 ತಾಸಿನ ಮೊದಲು ವಿಮಾನ ರದ್ದು ಪಡಿಸಿದಲ್ಲಿ 10,000ರೂ. ವರೆಗೆ ಪರಿಹಾರ ನೀಡಬೇಕು. ಹಣವನ್ನು ವಾಪಸ್‌ ಪಡೆಯುವ ಅಥವಾ ಹಣ ಜಮೆ ಇರಿಸುವ ನಿರ್ಧಾರವನ್ನು ಪ್ರಯಾಣಿಕರಿಗೆ ಬಿಡಬೇಕು. ಹಣವನ್ನು 15 ದಿನದೊಳಗೆ ವಾಪಸ್‌ ಮಾಡಬೇಕು,’ ಎಂದು ಹೇಳಲಾಗಿದೆ.

15 ಕೆಜಿ ಮಿತಿ ಮೀರಿದ ಹಾಗೂ 20 ಕೆ.ಜಿಯೊಳಗಿನ ಪ್ರತಿ ಒಂದು ಕೆಜಿ ಲಗೇಜ್‌ಗೆ 100 ರೂ. ಶುಲ್ಕ ವಿಧಿಸಬೇಕು ಎಂದು ಹೇಳಲಾಗಿದೆ. ಸದ್ಯ 15 ಕೆಜಿ ಮಿತಿಯ ಲಗೇಜ್‌ ಮೀರಿದ ನಂತರ ಪ್ರತಿ ಕೆಜಿಗೆ 300 ರೂ. ಶುಲ್ಕ ವಿಧಿಸಲಾಗುತ್ತಿದೆ. ಏರ್‌ ಇಂಡಿಯಾ ಮಾತ್ರ 23 ಕೆಜಿವರೆಗೆ ಲಗೇಜ್‌ಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ.

ಹೆಚ್ಚುವರಿ ಬುಕ್ಕಿಂಗ್‌ನಿಂದ ರದ್ದಾಗುವ ಪ್ರಯಾಣಕ್ಕೆ ನಿರ್ದಿಷ್ಟ ಸಂದರ್ಭಗಳಲ್ಲಿ 20,000ರೂ.ವರೆಗೆ ಪರಿಹಾರ ನೀಡುವ ಪ್ರಸ್ತಾವನೆ ಇಟ್ಟಿದೆ. ಜತೆಗೆ, ಓಡಾಡಲು ಸಾಧ್ಯವಾಗದ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಒದಗಿಸುವ ಪ್ರಸ್ತಾವನೆ ಮಾಡಿದೆ.

ಈ ಎಲ್ಲ ಪ್ರಸ್ತಾವನೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸ್ವೀಕರಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ವಿಮಾನಯಾನ ಸಚಿವಾಲಯ ಹೇಳಿದೆ.

Comments are closed.