ರಾಷ್ಟ್ರೀಯ

ಕಾಶ್ಮೀರ ನಮಗಿರಲಿ, ಪಾಕ್‌ಗೆ ಅಲ್ಲ: ಐಸಿಸ್‌

Pinterest LinkedIn Tumblr

isisಹೊಸದಿಲ್ಲಿ: ಪಾಕಿಸ್ತಾನ ಅಥವಾ ಲಷ್ಕರೆ ತಯ್ಬಾದಂಥ ಜಿಹಾದಿ ಸಂಘಟನೆಗಳಿಗೆ ಕಾಶ್ಮೀರ ಸೇರಬೇಕಿಲ್ಲ. ಅಲ್ಲಿ ಕಲೀಫನ ಆಡಳಿತ ಇರಬೇಕು ಎಂದು ಇಸ್ಲಾಮಿಕ್‌ ಸ್ಟೇಟ್‌ ಸದಸ್ಯರು ಬಯಸಿದ್ದಾರೆ.

ಪಾಕಿಸ್ತಾನ ಹಾಗೂ ಜಿಹಾದಿ ಸಂಘಟನೆಗಳು ಧಾರ್ಮಿಕ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲ. ಹಾಗಾಗಿ ಕಾಶ್ಮೀರ ಕಲೀಫನ ಆಡಳಿತಕ್ಕೆ ಒಳಪಡುವುದು ಸೂಕ್ತ ಎಂಬುದು ಐಸಿಸ್‌ ಸದಸ್ಯರ ಅಭಿಪ್ರಾಯ.

ಕಲೀಫ ಅಬು ಬಕರ್‌ ಅಲ್‌ ಬಾಗ್ದಾದಿಯಿಂದ ಮಾತ್ರ ಕಾಶ್ಮೀರದ ಹಣೆ ಬರಹ ನಿರ್ಧರಿಸಲು ಸಾಧ್ಯ ಎಂದು ಭಾರತ ಸೇರಿದಂತೆ ನಾನಾ ದೇಶಗಳ ಐಎಸ್‌ ಸದಸ್ಯರು ನಡೆಸಿರುವ ವೆಬ್‌ ಚಾಟ್‌ ವಿವರವನ್ನು ಎನ್‌ಐಎ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಂಡಿಯನ್‌ ಆಯಿಲ್‌ನ ಸಹಾಯಕ ವ್ಯವಸ್ಥಾಪಕ ಮೊಹಮ್ಮದ್‌ ಸಿರಾಜುದ್ದೀನ್‌ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ.

‘ಕಾಶ್ಮೀರ ಐಎಸ್‌ ಕಾಶ್ಮೀರವಾಗಲಿ. ಕಾಶ್ಮೀರ ಇಸ್ಲಾಮಿಕ್‌ ಸ್ಟೇಟ್‌ ಆಗಲಿ.. ಇನ್ಶಾಅಲ್ಲಾ!!… ಎಂದು ಯುಎಇ ಮೂಲದ ಐಎಸ್‌ ನಿರ್ವಾಹಕ ಜುಂದುಲ್ಲಾ ಮಿನ್ನಾ ಚಾಟ್‌ನಲ್ಲಿ ಹೇಳಿದ್ದಾನೆ.

‘ಕಾಶ್ಮೀರಕ್ಕಾಗಿ ಸಂಘರ್ಷ ಆರಂಭವಾದರೆ ನಾವು ಭಾರತೀಯ ಸೇನೆ ಹಾಗೂ ರಾಷ್ಟ್ರೀಯತೆ ಸಾರಲು ಹುಟ್ಟಿಕೊಂಡಿರುವ ಲಷ್ಕರೆ ತಯ್ಬಾ, ಜೆಇಎಂ ಹಾಗೂ ಹಿಜ್ಬುಲ್‌ ಮುಜಾಹಿದ್ದೀನ್‌ ಮುಂತಾದ ಪಾಕಿಸ್ತಾನಿ ಜಿಹಾದಿ ಗುಂಪುಗಳ ವಿರುದ್ಧ ಹೋರಾಡಬೇಕು,’ ಎಂದು ಚಾಟ್‌ನಲ್ಲಿ ಸಿರಾಜುದ್ದೀನ್‌ ಹೇಳಿದ್ದಾನೆ ಎಂಬ ವಿವರವೂ ದೋಷಾರೋಪ ಪಟ್ಟಿಯಲ್ಲಿದೆ.

ವಿಹೆಚ್‌ಪಿ ನಾಯಕ ಅಶೋಕ್‌ ಸಿಂಘಾಲ್‌ ನಿಧನ ಸುದ್ದಿ ಐಎಸ್‌ ಸದಸ್ಯರಿಗೆ ಖುಷಿಯ ವಿಷಯವಾಗಿತ್ತು ಎಂಬ ಅಂಶವನ್ನೂ ದೋಷಾರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ. ‘ಸಿಂಘಾಲ್‌ ನಿಧನ ಸುದ್ದಿ ಹಂಚಿಕೊಳ್ಳುವಾಗ, ಸಿರಾಜುದ್ದೀನ್‌ ‘ಗುಡ್‌ ನ್ಯೂಸ್‌’ ಎಂದು ಕಮೆಂಟ್‌ ಮಾಡಿದ್ದ,’ ಎಂಬ ಅಂಶವೂ ಇದೆ.

ಭಾರತದ ಬಗ್ಗೆ ದ್ವೇಷ ಭಾವನೆ ಹೊಂದಿರುವ ಸಿರಾಜುದ್ದೀನ್‌ನನ್ನು ಎನ್‌ಐ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಂಧಿಸಿದೆ. ಕಾಶ್ಮೀರದಲ್ಲಿ ಐಎಸ್‌ ಆಡಳಿತ ಬಂದಾಗ ಬಳಸಬಹುದಾದ ಕರೆನ್ಸಿ ನೋಟ್‌ಅನ್ನು ಈತ ವಿನ್ಯಾಸಗೊಳಿಸಿದ್ದ. 20ರೂ. ಮುಖಬೆಲೆಯ ಆ ನೋಟಿನಲ್ಲಿ ‘ಐಎಸ್‌ ವೆಲ್‌ಕಮ್‌ ಇನ್‌ ಕಾಶ್ಮೀರ್’ ಎಂಬ ಬರಹವಿದೆ.

Comments are closed.