ರಾಷ್ಟ್ರೀಯ

ನಿಗೂಢ ಮತ್ಸ್ಯಪ್ರಸಾದಕ್ಕೆ ಜನಸಾಗರ; ಆಸ್ತಮಾ, ಹೃದ್ರೋಗಕ್ಕೆ ರಾಮಬಾಣ ?

Pinterest LinkedIn Tumblr

Fish-Prasadam-600ಹೈದರಾಬಾದ್‌ : ವಿವಿಧ ಬಗೆಯ ರೋಗ ರುಜಿನಗಳನ್ನು ಗುಣಪಡಿಸುವಲ್ಲಿ ಪವಾಡ ಸದೃಶ ಪ್ರಾಚೀನ ಔಷಧಗಳು ಮಾಂತ್ರಿಕ ವಾಗಿ ಕೆಲಸ ಮಾಡುತ್ತವೆ ಮತ್ತು ಅವುಗಳಲ್ಲಿ ಜನರಿಗೆ ಆಳವಾದ ನಂಬಿಕೆ, ವಿಶ್ವಾಸವಿದೆ; ಜನರು ಆ ಬಗೆಯ ಔಷಧಕ್ಕಾಗಿ ಮುಗಿಬೀಳುತ್ತಾರೆ ಎಂಬುದಕ್ಕೆ ಹೈದರಾಬಾದಿನ ನಾಂಪಲ್ಲಿಯ ಎಗ್ಸಿಬಿಷನ್‌ ಗ್ರೌಂಡ್‌ನ‌ಲ್ಲಿ ನಿನ್ನೆ ಬುಧವಾರ 40,000 ಕ್ಕೂ ಅಧಿಕ ಸಂಖ್ಯೆಯ ಜನರು ಜಮಾಯಿಸಿ ಕ್ಯೂನಲ್ಲಿ ನಿಂತು ಆಸ್ತಮಾ, ಹೃದ್ರೋಗ, ಉಸಿರಾಟದ ತೊಂದರೆ ಇತ್ಯಾದಿಗಳಿಗೆ ರಾಮಬಾಣ ಎನ್ನಲಾದ ಮತ್ಸ್ಯ ಪ್ರಸಾದ ಸ್ವೀಕರಿಸಿರುವುದೇ ಒಂದು ದೊಡ್ಡ ಸಾಕ್ಷಿಯಾಗಿದೆ.

ಆಂಧ್ರ ಪ್ರದೇಶ ಮಾತ್ರವಲ್ಲದೆ ದೇಶದ ಮೂಲೆ ಮೂಲೆಗಳ ಆಸ್ತಮಾ ರೋಗಿಗಳು, ಉಸಿರಾಟದ ತೊಂದರೆ ಇರುವವರು, ಹೃದ್ರೋಗಿಗಳು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಮಂಗಳವಾರವೇ ನಾಂಪಲ್ಲಿಯ ವಸ್ತುಪ್ರದರ್ಶನ ಮೈದಾನಿನಲ್ಲಿ ಜಮಾಯಿಸಿ, ಕ್ಯೂನಲ್ಲಿ ನಿಂತು ನಿಗೂಢವೂ ಪವಾಡ ಸದೃಶವೂ ಆಗಿರುವ ಮತ್ಸ್ಯ ಪ್ರಸಾದವನ್ನು ಸ್ವೀಕರಿಸಿದರು.

ಬಾತಿನಿ ಗೌಡ ಕುಟುಂಬದವರು ಉಚಿತವಾಗಿ ನೀಡುವ ಈ ರೋಗ ನಿವಾರಕ ಮತ್ಸ್ಯ ಪ್ರಸಾದವನ್ನು ಸ್ವೀಕರಿಸಲು ಜನರು ಹದಿನಾರು ತಾಸುಗಳಿಗಿಂತಲೂ ಅಧಿಕ ಹೊತ್ತು ಕ್ಯೂನಲ್ಲಿ ನಿಂತುಕೊಂಡರು.

“ಈ ಮತ್ಸ್ಯ ಪ್ರಸಾದ ನಿಜಕ್ಕೂ ಪವಾಡಸದ್ಯಶವಾದದ್ದು. ಇದು ಆಸ್ತಮಾ ರೋಗವನ್ನು ಅದ್ಭುತವಾಗಿ ಗುಣಪಡಿಸುತ್ತದೆ. ನಾನು ನನ್ನ ಜತೆಗೆ ನನ್ನ ಅಣ್ಣನನ್ನೂ ಇಲ್ಲಿಗೆ ಕರೆ ತಂದಿದ್ದೇನೆ. ಆತನೂ ನನ್ನಂತೆ ಆಸ್ತಮಾದಿಂದ ಬಳಲುತ್ತಿದ್ದಾನೆ’ ಎಂದು ಪೂರ್ವ ಗೋದಾವರಿಯ ನಿವಾಸಿಯಾಗಿರುವ ಮಂಜು ವಿ. ಎಂಬವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

ಮೃಗಶಿರಾ ಕಾರ್ತಿಯ ಮಳೆಗಾಲದ ಋತುವಿನ ಆರಂಭ ಕಾಲದಲ್ಲಿ ಮಾತ್ರವೇ ಬಾತಿನಿ ಗೌಡ ಕುಟುಂಬದವರು ವಿವಿಧ ಬಗೆಯ ರೋಗಪೀಡಿತರಿಗೆ ಕಳೆದ 160 ವರ್ಷಗಳಿಂದಲೂ ಈ ಪವಾಡ ಸದೃಶ ಮತ್ಸ್ಯ ಪ್ರಸಾದವನ್ನು ಹಂಚುತ್ತಾ ಬಂದಿದ್ದಾರೆ – ಆದರೆ ಉಚಿತವಾಗಿ !

1845ರಲ್ಲಿ ಬಾತಿನಿ ಕುಟುಂಬದ ಓರ್ವ ಹಿರಿಯರಿಗೆ ಸಾಧು ಒಬ್ಬರು ಮತ್ಸ್ಯ ಪ್ರಸಾದದ ಸೂತ್ರವನ್ನು ಕಲಿಸಿದ್ದರು. ಆದರೆ ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಈ ಪ್ರಸಾದವನ್ನು ಜನರಿಗೆ ಉಚಿತವಾಗಿ ಕೊಡಬೇಕೆಂಬ ಶರತ್ತನ್ನು ಆ ಸಾಧು ಹಾಕಿದ್ದರು; ಮಾತ್ರವಲ್ಲದೆ ಆ ಬಗ್ಗೆ ಅವರಿಂದ ಶಪಥವನ್ನು ಕೂಡ ತೆಗೆದುಕೊಂಡಿದ್ದರು !

ಆ ಪ್ರಕಾರ ಅಂದಿನಿಂದ ಇಂದಿನ ವರೆಗೂ ಹಲವು ರೋಗ ನಿವಾರಕವಾಗಿರುವ ಈ ಪವಾಡ ಸದೃಶ ನಿಗೂಢ ಮತ್ಸ್ಯ ಪ್ರಸಾದವನ್ನು ಮಾರ್ಗಶಿರಾ ಕಾರ್ತಿಯ (ಮಳೆಗಾಲ ಆರಂಭವಾಗುವ ಮುಹೂರ್ತ) ಸಂದರ್ಭದಲ್ಲಿ ಮಾತ್ರವೇ ಬಾತಿನಿ ಗೌಡ ಕುಟುಂಬದವರು ರೋಗಪೀಡಿತರಿಗೆ ನೀಡುತ್ತಾ ಬಂದಿದ್ದಾರೆ.

ಇಷ್ಟಕ್ಕೂ ಮತ್ಸ್ಯ ಪ್ರಸಾದ ಎಂದರೆ ಏನು ? ಅದು ಹೇಗಿರುತ್ತದೆ ಎನ್ನುವಿರಾ ? ಮತ್ಸ್ಯ ಪ್ರಸಾದವು ಹಳದಿ ಬಣ್ಣದ ಗಿಡಮೂಲಿಕೆಯ ಪೇಸ್ಟ್‌ ರೂಪದಲ್ಲಿದೆ. ಇದು ಯಾವೆಲ್ಲ ಆಯುರ್ವೇದೀಯ ಅಂಶಗಳನ್ನು ಒಳಗೊಂಡಿರುತ್ತದೆ ಎನ್ನುವುದು ಬಾತಿನಿ ಗೌಡ ಕುಟುಂಬದವರಿಗೆ ಮಾತ್ರವೇ ತಿಳಿದಿರುವ ರಹಸ್ಯವಾಗಿದೆ !

ಈ ಪೇಸ್ಟ್‌ ಅನ್ನು ಮೂರು ಸೆಂಟಿ ಮೀಟರ್‌ ಉದ್ದದ ಜೀವಂತ ಮ್ಯೂರೇಲ್‌ ಮರಿ ಮೀನಿನೊಂದಿಗೆ ಸೇರಿಸಿ ರೋಗಿಯ ಗಂಟಲಲೊಳಗೆ ಇಳಿ ಬಿಡಲಾಗುತ್ತದೆ. ಸಸ್ಯಾಹಾರಿಗಳಿಗೆ ಈ ಮತ್ಸ್ಯ ಪ್ರಸಾದವನ್ನು ಬೆಲ್ಲದೊಂದಿಗೆ ಸೇರಿಸಿ ಗಂಟಲಲೊಳಗೆ ಇಳಿ ಬಿಡಲಾಗುತ್ತದೆ.

ಕೆಲವು ವರ್ಷಗಳ ಹಿಂದಿನ ವರೆಗೂ ಈ ಔಷಧವನ್ನು ಮತ್ಸ್ಯ ಪ್ರಸಾದವೆಂದೇ ಕರೆಯಲಾಗುತ್ತಿತ್ತು. ಆಗ ಕೆಲವು ವ್ಯಕ್ತಿಗಳ ಒಂದು ಸಮೂಹ ಕೋರ್ಟ್‌ ಮೆಟ್ಟಲು ಹತ್ತಿ ಈ ಮತ್ಸ್ಯೌಷಧ ಅವೈಜ್ಞಾನಿಕವಾಗಿದ್ದು ಭಾರೀ ಪ್ರಮಾಣದ ಲೋಹಾಂಶಗಳನ್ನು ಒಳಗೊಂಡಿರುವುದರಿಂದ ಇದು ಮನುಷ್ಯನ ದೇಹಾರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರಬಲ್ಲುದು; ಆದುದರಿಂದ ಇದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.

ಆದರೆ ಈ ಮತ್ಸ್ಯೌಷಧವನ್ನು ಕೋರ್ಟ್‌ ಮೂಲಕ ಪ್ರಯೋಗಾಲಯದ ಪರೀಕ್ಷೆಗೆ ಗುರಿಪಡಿಸಿದಾಗ ಈ ಔಷಧ ನಿರಪಾಯಕಾರಿ ಪೇಸ್ಟ್‌; ಇದನ್ನು ಯಾರು ಬೇಕಾದರೂ ಸೇವಿಸಬಹುದು; ಹಾಗೆ ಸೇವಿಸಿದವರ ಆರೋಗ್ಯ ಸುರಕ್ಷೆ. ಇದರಿಂದ ಯಾವುದೇ ಅಪಾಯವಿಲ್ಲ ಎಂಬ ವೈದ್ಯಕೀಯ ಫ‌ಲಿತಾಂಶ ಒದಗಿ ಬಂದಿತ್ತು.

ನಿನ್ನೆ ಬುಧವಾರ ನಾಂಪಲ್ಲಿಯ ಮೈದಾನದಲ್ಲಿ 40,000 ಕ್ಕೂ ಅಧಿಕ ಜನರು ಮತ್ಸ್ಯ ಪ್ರಸಾದ ಸೇವನೆಗಾಗಿ ಜಮಾಯಿಸಿದಾಗ ಪೊಲೀಸರು ಕಟ್ಟುನಿಟ್ಟಿನ ಭದ್ರತೆಯನ್ನು ಒದಗಿಸಿದರು. ಮಹಿಳೆಯರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಇತ್ತು. ಮತ್ಸ್ಯೌಷಧ ನೀಡುವ 32 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಮೀನುಗಾರಿಕೆ ಇಲಾಖೆಯವರು 15,000 ಸಂಖ್ಯೆಯ ಮೀನಿನ ಮರಿಗಳನ್ನು ಒದಗಿಸಿದ್ದರು.

ಮಂಗಳವಾರವೇ ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಸಹಸ್ರಗಟ್ಟಲೆ ಜನರು ಅಂದೇ ಟೋಕನ್‌ಗಳನ್ನು ಪಡೆದುಕೊಂಡು ಕ್ಯೂನಲ್ಲಿ ನಿಂತು ಬುಧವಾರ ಮತ್ಸ್ಯೌಷಧ ಸ್ವೀಕರಿಸಿ ಧನ್ಯರಾದರು!
-ಉದಯವಾಣಿ

Comments are closed.