ಮನೋರಂಜನೆ

ಟೀಂ ಇಂಡಿಯಾ ಕೋಚ್ ಸ್ಥಾನ ಕನ್ನಡಿಗ ವೆಂಕಟೇಶ್ ಪ್ರಸಾದ್ ಗೆ ಸಿಗಲಿದೆಯೇ…?

Pinterest LinkedIn Tumblr

Venky

ನವದೆಹಲಿ: ಹಲವು ತಿಂಗಳುಗಳಿಂದ ಖಾಲಿ ಉಳಿದಿರುವ ಟೀಂ ಇಂಡಿಯಾದ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಮತ್ತು ಮಾಜಿ ಕ್ರಿಕೆಟಿಗ ಕರ್ನಾಟಕದ ವೆಂಕಟೇಶ್ ಪ್ರಸಾದ್ ಅರ್ಜಿ ಸಲ್ಲಿಸಿದ್ದಾರೆ.

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವುದನ್ನು ಟೀಮ್ ರವಿಶಾಸ್ತ್ರಿ ಅವರು ಸೋಮವಾರ ಖಚಿತ ಪಡಿಸಿದ್ದು, ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಈಗಾಗಲೆ ಅರ್ಜಿ ಸಲ್ಲಿಸಿರುವುದನ್ನು ದೃಢಪಡಿಸಿದ್ದಾರೆ. ಇವರೊಂದಿಗೆ ಇದೀಗ ಕೋಚ್ ಹುದ್ದೆಯ ರೇಸ್ ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಹಾಗೂ ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ರವಿಶಾಸ್ತ್ರಿ ಅವರು, ‘ನಾನು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಬಿಸಿಸಿಐ ಜಾಹೀರಾತಿನಲ್ಲಿ ಕೇಳಿದ ಎಲ್ಲ ಅರ್ಹತೆಗಳಿಗೆ ಸೂಕ್ತ ದಾಖಲೆಪತ್ರಗಳನ್ನು ಇ-ಮೇಲ್‌ನಲ್ಲಿ ಲಗತ್ತಿಸಿದ್ದೇನೆ’ ಎಂದು ತಿಳಿಸಿದ್ದಾರೆ. 18 ತಿಂಗಳ ಕಾಲ ಟೀಮ್ ಇಂಡಿಯಾ ಡೈರೆಕ್ಟರ್ ಆಗಿದ್ದ ರವಿಶಾಸ್ತ್ರಿ ಅವಧಿ ಕಳೆದ ಟಿ20 ವಿಶ್ವಕಪ್‌ನೊಂದಿಗೆ ಮುಕ್ತಾಯವಾಗಿತ್ತು. 54 ವರ್ಷದ ಅವರು ಭಾರತ ಪರ 80 ಟೆಸ್ಟ್ ಮತ್ತು 150 ಏಕದಿನ ಪಂದ್ಯ ಆಡಿದ ಅನುಭವಿಯೂ ಆಗಿದ್ದಾರೆ. ಭಾರತ ಪರ 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯ ಆಡಿರುವ 46 ವರ್ಷದ ವೆಂಕಟೇಶ್ ಪ್ರಸಾದ್ ಈ ಮುನ್ನ 2007ರಿಂದ 2009ರವರೆಗೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವರು ಈ ಹುದ್ದೆಯಲ್ಲಿದ್ದಾಗಲೇ ಭಾರತ ತಂಡ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿತ್ತು.

24ಕ್ಕೆ ಕೋಚ್ ನೇಮಕ ಸಾಧ್ಯತೆ?
ಟೀಮ್ ಇಂಡಿಯಾದ ಮುಖ್ಯ ಕೋಚ್ ಆಯ್ಕೆ ಬಗ್ಗೆ ಚರ್ಚಿಸಲು ಬಿಸಿಸಿಐ ಇದೇ ಜೂನ್ 24ರಂದು ಹಿಮಾಚಲ ಪ್ರದೇಶದ ಧರ್ಮ ಶಾಲಾದಲ್ಲಿ ಸಭೆ ಸೇರಲಿದ್ದು, ಮಂಡಳಿ ಅಧ್ಯಕ್ಷರಾದ ಬಳಿಕ ಅನುರಾಗ್ ಠಾಕೂರ್ ಅವರ ತಂಡ ಇದೇ ಮೊದಲ ಬಾರಿಗೆ ಸಭೆ ಸೇರುತ್ತಿದೆ. ಈ ಹಿಂದಿನ ಆಡಳಿತಾವಧಿಯಲ್ಲಿ ಮಂಡಳಿ ಸಭೆ ಚೆನ್ನೈ, ಕೋಲ್ಕತಾ ಮತ್ತು ಮುಂಬೈನಲ್ಲಿ ನಡೆದಿದ್ದರೆ, ಈಗ ಠಾಕೂರ್ ತಮ್ಮ ತವರಾದ ಧರ್ಮಶಾಲಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಭೆಯ ಸ್ಪಷ್ಟ ಉದ್ದೇಶ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲವಾದರೂ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡದ ಕೋಚ್ ಆಯ್ಕೆ ಸಭೆಯ ಪ್ರಮುಖ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇದೇ ವೇಳೆ ಐಸಿಸಿಯ ‘ಬಿಗ್ ತ್ರಿ’ ವಿಚಾರ ಹಿಂತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Comments are closed.