ರಾಷ್ಟ್ರೀಯ

ಸತತ 14 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ತೀರ್ಪು ಪ್ರಕಟ: 24 ಮಂದಿ ತಪ್ಪಿತಸ್ಥರು

Pinterest LinkedIn Tumblr

Gulbarg Society Massacre

ಅಹ್ಮದಾಬಾದ್: 2002ರ ಗುಜರಾತ್ ಹಿಂಸಾಚಾರ ವೇಳೆ 69 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ತೀರ್ಪು ಗುರುವಾರ ಪ್ರಕಟವಾಗಿದ್ದು, ಪ್ರಕರಣದಲ್ಲಿ ಬಂಧಿತರಾಗಿದ್ದ 66 ಮಂದಿಯ ಪೈಕಿ 24 ಮಂದಿಯ ಆರೋಪ ಸಾಬೀತಾಗಿದೆ ಎಂದು ಅಹ್ಮದಾಬಾದ್ ವಿಶೇಷ ನ್ಯಾಯಾಲಯದ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಪಿಬಿ ದೇಸಾಯಿ ಅವರು ತಮ್ಮ ಸುಧೀರ್ಘ ತೀರ್ಪು ಪ್ರಕಟಿಸಿದ್ದು, 66 ಮಂದಿ ಆರೋಪಿಗಳ ಪೈಕಿ 24 ಮಂದಿಯ ಆರೋಪ ಸಾಬೀತಾಗಿದೆ ಎಂದು ಹೇಳಿದ್ದಾರೆ. ಈ ಪೈಕಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 36 ಜನರನ್ನು ಖುಲಾಸೆ ಗೊಳಿಸಲಾಗಿದ್ದು, 11 ಆರೋಪಿಗಳ ವಿರುದ್ಧದ ಕೊಲೆ ಆರೋಪ ಸಾಬೀತಾಗಿದೆ. ಉಳಿದ 13 ಆರೋಪಿಗಳ ವಿರುದ್ಧ ಇತರೆ ಆರೋಪಗಳು ಸಾಬೀತಾಗಿದ್ದು, ಎಲ್ಲ ಆರೋಪಿಗಳಿಗೂ ಮುಂದಿನ ಸೋಮವಾರ ಅಂದರೆ ಜೂನ್ 6ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.

ಸೋಮವಾರ ಎರಡೂ ಕಡೆಯ ವಕೀಲರಿಂದ ವಾದ ಆಲಿಸುವ ನ್ಯಾಯಮೂರ್ತಿಗಳು ಬಳಿಕ ಶಿಕ್ಷೆ ಪ್ರಮಾಣದ ತೀರ್ಪು ಪ್ರಕಟಿಸಲಿದ್ದಾರೆ. ಕಾನೂನು ತಜ್ಞರ ಪ್ರಕಾರ ಪ್ರಸ್ತುತ ಕೊಲೆ ಆರೋಪದಲ್ಲಿ ತಪ್ಪಿತಸ್ಥರಾಗಿರುವ 13 ಮಂದಿ ಅಜೀವ ಕಾರಾಗೃಹ ಜೈಲು ಶಿಕ್ಷೆ ವಿಧಿಸುವ ಅವಕಾಶವಿದ್ದು, ಇತರೆ ಆರೋಪ ಸಾಬೀತಾದ 13 ಮಂದಿಗೆ ಸಾಮಾನ್ಯ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ನಡೆದ ಗೋದ್ರೋತ್ತರ ಹತ್ಯಾಕಾಂಡಗಳಲ್ಲಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಮುಖ ಪ್ರಕರಣವಾಗಿದೆ. ಈ ಹತ್ಯಾಕಾಂಡದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು 69 ಮಂದಿಯನ್ನು ಧಾರುಣವಾಗಿ ಕೊಲ್ಲಲಾಗಿತ್ತು. ಈವರೆಗೂ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನಾಲ್ಕು ಮಂದಿ ನ್ಯಾಯಾಧೀಶರ ಬದಲಾವಣೆಯಾಗಿದ್ದು, ಇಂದು ತೀರ್ಪು ನೀಡಿರುವ ನ್ಯಾ. ಪಿಬಿ ದೇಸಾಯಿ 5ನೇ ನ್ಯಾಯಾಧೀಶರಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ದೇಸಾಯಿ ಅವರು ಪ್ರಕರಣದ ವಿಚಾರಣೆ ಆರಂಭಿಸಿದ್ದರು.

Comments are closed.