
ಮಂಗಳೂರು, ಜೂ.2: ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ನಡುವಿನ ವೇತನ ಹಾಗೂ ಭತ್ತೆ ತಾರತಮ್ಯ ವಿರೋಧಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಗುರುವಾರ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಇಂದು ಬಹುತೇಕ ನೌಕರರು ಗೈರು ಹಾಜರಾಗಿದ್ದಾರೆ.
ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಗಳೂರಿನ ಪ್ರಕಾಶ್ ನಾಯಕ್ ರವರ ನೇತ್ರತ್ವದಲ್ಲಿ ದ.ಕ. ಜಿಲ್ಲೆಯಲ್ಲಿ ರಾಜ್ಯ ಸರಕಾರಿ ನೌಕರರು ಗುರುವಾರ ಮುಷ್ಕರ ನಡೆಸಿದರು.ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಪ್ರಧಾನ ಕಾರ್ಯದರ್ಶಿ ಉದಯ ರಂಜನ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಮೂರು-ನಾಲ್ಕು ವರ್ಷದಿಂದ ಸಮಾನ ವೇತನ, ಭತ್ತೆಗಾಗಿ ನಿರಂತರವಾಗಿ ಸಲ್ಲಿಸಿದ ಬೇಡಿಕೆಗೆ ರಾಜ್ಯ ಸರಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸದ ಕಾರಣ ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ದ.ಕ., ಉಡುಪಿ ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ, ಕಂದಾಯ ಸೇರಿದಂತೆ 60 ಇಲಾಖೆಗಳು ಬೆಂಬಲ ಸೂಚಿಸಿವೆ.
ಮಾತ್ರವಲ್ಲದೇ ಮುಷ್ಕರಕ್ಕೆ ದ.ಕ. ಜಿಲ್ಲಾ ಡಿ ವರ್ಗ ಸರಕಾರಿ ನೌಕರರ ಸಂಘ ಸಂಪೂರ್ಣ ಬೆಂಬಲ ಸೂಚಿಸಿದ್ದು, ಜಿಲ್ಲೆಯ ಡಿ ಗ್ರೂಪ್ ನೌಕರರು ಕಚೇರಿಗಳಿಗೆ ಗೈರು ಹಾಜರಾಗಿದ್ದರು. ಬಳಿಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮೂಲಕ ಮನವಿ ಸಲ್ಲಿಸಿದರು.


ಮಂಗಳೂರಿನ ಎಸ್.ಕೆ.ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ಕೂಡಾ ಮುಷ್ಕರ ಕರೆಗೆ ಬೆಂಬಲ ಸೂಚಿಸಿದ್ದು, ಕೆಲಸಕ್ಕೆ ಗೈರು ಹಾಜರಾಗಿ ಮಂಗಳೂರು ಮಹಾನಗರ ಪಾಲಿಕೆಯೆದುರು ಧರಣಿ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನಪಾ ಆಯುಕ್ತರ ಮೂಲಕ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿತು.
ವಿವಿಧ ಸರಕಾರಿ ಕಚೇರಿಗಳಲ್ಲಿನ ಸಿಬ್ಬಂದಿ ಕೂಡಾ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಹೆಚ್ಚಿನ ಸರಕಾರಿ ಕಚೇರಿಗಳು ಬಹುತೇಕ ಖಾಲಿಯಾಗಿದ್ದವು. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಆದರೆ ಜಿಲ್ಲೆಯ ಯಾವೂದೇ ಶಾಲಾ ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಆಗಿಲ್ಲ. ಆದರೆ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ನೌಕರರ ಸಂಘಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
Comments are closed.