ಅಂತರಾಷ್ಟ್ರೀಯ

ಭಾರತ ಚಾಬಾಹರ್‌ ಬಂದರು ಅಭಿವೃದ್ಧಿ ಪಡಿಸುತ್ತಿರುವುದೇಕೆ?

Pinterest LinkedIn Tumblr

chahಪಾಕಿಸ್ತಾನದ ನೆಲವನ್ನು ಬಳಸಿಕೊಳ್ಳದೇ ಆಫ್ಘಾನಿಸ್ತಾನ ಮತ್ತು ಯುರೋಪಿಗೆ ಸಂಪರ್ಕ ಕಲ್ಪಿಸುವ ಚಾಬಾಹರ್‌ ಬಂದರನ್ನು ಅಭಿವೃದ್ಧಿ ಪಡಿಸುವ ಕುರಿತ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಇರಾನ್‌, ಅಫ್ಘಾನಿಸ್ತಾನ ಸಹಿ ಹಾಕಿವೆ. ಈ ಬಂದರಿನ ಅಭಿವೃದ್ಧಿಗಾಗಿ ಭಾರತ 3370 ಕೋಟಿ ರೂ. (500 ದಶಲಕ್ಷ ಡಾಲರ್‌) ವೆಚ್ಚ ಮಾಡಲಿದೆ. ಭಾರತ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಮೊದಲ ವಿದೇಶಿ ಬಂದರು ಚಾಬಾಹರ್‌. ಈ ಹಿನ್ನೆಲೆಯಲ್ಲಿ ಬಂದರನ್ನು ಅಭಿವೃದ್ಧಿ ಪಡಿಸುವುದರಿಂದ ಏನು ಲಾಭ? ಪಾಕಿಸ್ತಾನ ಚೀನಾದ ನೆರವಿನಿಂದ ನಿರ್ಮಿಸುತ್ತಿರುವ ಗ್ವಾದಾರ್‌ ಬಂದರಿಗೆ ಸಡ್ಡು ಹೊಡೆಯಲು ಭಾರತ ಚಾಬಾಹರ್‌ ಬಂದರನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆಯೇ? ಎಂಬ ಮಾಹಿತಿಗಳು ಇಲ್ಲಿವೆ.

ಚಾಬಾಹರ್‌ ಎಲ್ಲಿದೆ?
ಈ ಬಂದರು ಒಮಾನ್‌ಕೊಲ್ಲಿಯಲ್ಲಿ ಇದ್ದು, ಇರಾನಿನ ಆಗ್ನೇಯ ಭಾಗದಲ್ಲಿದೆ. ಬಂದರಿನ ಉತ್ತರಕ್ಕೆ ಆಫ್ಘಾನಿಸ್ತಾನ, ಈಶಾನ್ಯದಲ್ಲಿ ಪಾಕಿಸ್ತಾನ ಮತ್ತು ಪೂರ್ವದಲ್ಲಿ ಭಾರತ ಇದೆ. ಸಮುದ್ರದೊಂದಿಗೆ ಸಂಪರ್ಕ ಕಲ್ಪಿಸುವ ಇರಾನಿನ ಭವಿಷ್ಯದ ಪ್ರಮುಖ ಬಂದರಾಗುವ ಅರ್ಹತೆಗಳು ಇದಕ್ಕಿವೆ. ಚಾಬಾಹರ್‌ ಇರುವ ಸ್ಥಳ ಭಾರತಕ್ಕೆ ರಾಜತಾಂತ್ರಿಕವಾಗಿ ಮಹತ್ವದ್ದು. ಏಕೆಂದರೆ ಈ ಬಂದರು ಹಿಂದು ಮಹಾಸಾಗರ- ಅರಬ್ಬೀ ಸಮುದ್ರದಿಂದ ಆಫ್ಘಾನಿಸ್ತಾನ, ಕೇಂದ್ರ ಏಷ್ಯಾ ಮತ್ತು ಯುರೋಪ್‌ವ್ಯಾಪಾರಿ ಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಪಾಕಿಸ್ತಾನದ ಭೂ ಮಾರ್ಗವನ್ನು ಬಳಸದೇ ಸಮುದ್ರ- ಭೂ ಮಾರ್ಗದ ಮೂಲಕ ಸರಕುಗಳನ್ನು ಸಾಗಿಸಬಹುದಾಗಿದೆ.

ಬಂದರಿನ ಅಭಿವೃದ್ಧಿಗೆ ಭಾರತದಿಂದ ದಶಕಗಳ ಯತ್ನ
1947ರ ವಿಭಜನೆ ಬಳಿಕ ಆಫ್ಘಾನಿಸ್ತಾನದ ಜತೆಗಿನ ವ್ಯಾಪಾರಿ ಮಾರ್ಗವನ್ನು ಪಾಕಿಸ್ತಾನ ತಡೆಹಿಡಿದಿದೆ. ಭಾರತದಿಂದ ಯಾವುದೇ ಸರಕು ಸಾಗಣೆ ಲಾರಿಗಳು ಪಾಕಿಸ್ತಾನದ ಮೂಲಕ ಆಫ್ಘಾನಿಸ್ತಾನಕ್ಕೆ ಹೋಗುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಆಫ‌^ನ್‌ ಲಾರಿಗಳು ಮಾತ್ರ ಭಾರತಕ್ಕೆ ಬರಲು ಪಾಕ್‌ ಅವಕಾಶ ನೀಡುತ್ತಿದೆ. ಕೇಂದ್ರ ಏಷ್ಯಾ ಮತ್ತು ಆಫ್ಘಾನಿಸ್ತಾನದ ಜತೆಗಿನ ವ್ಯಾಪಾರಕ್ಕಾಗಿ ಪರ್ಯಾಯ ಮಾರ್ಗವೊಂದನ್ನು ಕಂಡುಕೊಳ್ಳುವುದು ಭಾರತಕ್ಕೆ ಅನಿವಾರ್ಯವಾಗಿದೆ. ಚಾಬಾಹರ್‌ ಬಂದರು ಈ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಈ ಬಂದರು ಅಭಿವೃದ್ಧಿಗೆ ಭಾರತ 1990ರಿಂದಲೇ ಯತ್ನ ನಡೆಸುತ್ತಾ ಬಂದಿದೆ.

1990ರಲ್ಲಿ ತಾಲಿಬಾನ್‌ ವಿರುದ್ಧ ಹೋರಾಡಲು ರಚಿಸಿದ ನಾರ್ಥನ್‌ ಅಲಯನ್ಸ್‌ (ಉತ್ತರ ಮೈತ್ರಿ)ಗೆ ಭಾರತ ಮತ್ತು ಇರಾನ್‌ ಬೆಂಬಲ ವ್ಯಕ್ತಪಡಿಸಿದ್ದವು. ಈ ಒಂದು ಮೈತ್ರಿ ಭಾರತ ಮತ್ತು ಇರಾನ್‌ ನಡುವೆ ಸಂಬಂಧ ಬೆಳೆಯಲು ಸಹಾಯಕವಾಯಿತು. 2003ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಚಾಬಾಹರ್‌ ನಲ್ಲಿ ಬಂದರು ನಿರ್ಮಾಣವನ್ನು ಘೋಷಿಸಿದ್ದರು. ಆದರೆ, ಪಾಶ್ಚಾತ್ಯ ದೇಶಗಳು ಇರಾನ್‌ನ ಮೇಲೆ ದಿಗ್ಬಂಧನ ಹೇರಿದ್ದರಿಂದ ಭಾರತದ ಯತ್ನಕ್ಕೆ ಹಿನ್ನಡೆಯಾಯಿತು. ಇರಾನ್‌ ಮೇಲಿನ ದಿಗ್ಬಂಧನ 2016ರ ಜ.1ರಂದು ಹಿಂತೆಗೆದುಕೊಳ್ಳಲಾಯಿತು. ಇದರಿಂದಾಗಿ ಚಾಬಾಹರ್‌ ನಿರ್ಮಾಣ ಅವಕಾಶ ಭಾರತಕ್ಕೆ ಮತ್ತೆ ಲಭ್ಯವಾಗಿದೆ. ಮೇ 23ರಂದು ಇರಾನ್‌ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಚಾಬಾಹರ್‌ ಬಂದರನ್ನು 3370 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಪಾಕ್‌- ಚೀನಾದ ಗ್ವಾದಾರ್‌ಗೆ ಸಡ್ಡು?
ಪಾಕಿಸ್ತಾನ ತನ್ನ ಬಲೋಚಿಸ್ತಾನ ಪ್ರಾಂತ್ಯದಲ್ಲಿ ಚೀನಾದ ನೆರವಿನೊಂದಿಗೆ ಗ್ವಾದಾರ್‌ ಬಂದರನ್ನು ನಿರ್ಮಿಸುತ್ತಿದೆ. ಈ ಯೋಜನೆಯಿಂದ ಪಶ್ಚಿಮ ಯುರೇಷಿಯಾ ಮತ್ತು ಪೂರ್ವ ಆಫ್ರಿಕಾದೊಂದಿಗೆ ವಾಣಿಜ್ಯ ಸಂಪರ್ಕ ಕಲ್ಪಿಸಲು ಈ ಬಂದರು ಚೀನಾಕ್ಕೆ ನೆರವು ನೀಡಲಿದೆ. ಚೀನಾದ ಮಹತ್ವಾಕಾಂಕ್ಷಿ “ಒನ್‌ ಬೆಲ್ಟ್ ಒನ್‌ ರೋಡ್‌’ ಯೋಜನೆಯ ಭಾಗವಾಗಿ ಗ್ವಾದಾರ್‌ ಬಂದರು ನಿರ್ಮಾಣವಾಗುತ್ತಿದೆ. ಇದರಿಂದ ಚೀನಾಕ್ಕೆ ಗಲ್ಫ್ ರಾಷ್ಟ್ರಗಳ ಜತೆ ಸಮುದ್ರದ ಮೂಲಕ ಸಂಪರ್ಕ ಸಾಧ್ಯವಾಗಲಿದೆ.

ರಾಜತಾಂತ್ರಿಕವಾಗಿ ಮತ್ತು ಆರ್ಥಿಕ ಹತೋಟಿ ಸಾಧಿಸುವುದಕ್ಕೂ ಗ್ವಾದಾರ್‌ ಬಂದರು ಚೀನಾಕ್ಕೆ ನೆರವು ನೀಡಲಿದೆ. ಒಂದು ವೇಳೆ ಗ್ವಾದಾರ್‌ ಬಂದರು ಪೂರ್ಣಗೊಂಡರೆ ಪಾಕ್‌ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ. ಅಪಾಯಕಾರಿ ಸಂಗತಿ ಏನೆಂದರೆ ಗ್ವಾದಾರ್‌ ಬಂದರಿನ ಮೂಲಕ ಚೀನಾ ಹಿಂದು ಮಹಾಸಾಗರದಲ್ಲಿ ನೌಕಾಪಡೆ ಕಳುಹಿಸುವುದಕ್ಕೂ ಸಾಧ್ಯವಾಗಲಿದೆ. ಚೀನಾ ಚಾಬಾಹರ್‌ ಮೇಲೂ ಕಣ್ಣು ಹಾಕಿತ್ತು. ಅಲ್ಲಿ ಕೈಗಾರಿಕಾ ಪಟ್ಟಣ ನಿರ್ಮಿಸಿ ಆರ್ಥಿಕ ನಿಯಂತ್ರಣ ಸಾಧಿಸುವ ಯೋಜನೆಯನ್ನೂ ಹಾಕಿಕೊಂಡಿತ್ತು. ಭಾರತ ಸಕಾಲದಲ್ಲಿ ಎಚ್ಚೆತ್ತು ಕೆಲವು ತಿಂಗಳಿನಿಂದ ಇರಾನ್‌ ಜತೆ ಮಾತುಕತೆ ನಡೆಸಿತ್ತು. ಚೀನಾಕ್ಕೆ ಸಡ್ಡು ಹೊಡೆಯುವ ಸಲುವಾಗಿ ಭಾರತ ಇರಾನ್‌ ಜತೆ ಚಾಬಾಹರ್‌ ಬಂದರು ಅಭಿವೃದ್ಧಿ ಪಡಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ. ಇದು ಭಾರತದ ಮಟ್ಟಿಗೆ ರಾಜತಾಂತ್ರಿಕ ಯಶಸ್ಸು ಎಂದೇ ವಿಶ್ಲೇಷಿಸಲಾಗುತ್ತಿದೆ.

ಭಾರತಕ್ಕೇನು ಲಾಭ?
ಆಫ್ಘಾನಿಸ್ತಾನದಲ್ಲಿ ವಾಣಿಜ್ಯ ಪ್ರಭಾವ ಬೀರಲು ಚಾಬಾಹರ್‌ ಬಂದರು ಭಾರತಕ್ಕೆ ನೆರವಾಗಲಿದೆ. ಸದ್ಯ ತನ್ನ ನೆಲದ ಮೇಲೆ ಆಫ್ಘಾನಿಸ್ತಾನಕ್ಕೆ ಸರಕು ಸಾಗಿಸಲು ಭಾರತಕ್ಕೆ ಪಾಕಿಸ್ತಾನ ಅವಕಾಶ ನೀಡುತ್ತಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಪರ್ಯಾಯ ಮಾರ್ಗದ ಮೂಲಕ ಆಫ್ಘಾನಿಸ್ತಾನ ಮತ್ತು ಯುರಪಿನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ. ಮುಂಬೈ, ರಷ್ಯಾದ ಮಾಸ್ಕೋ, ಟೆಹರಾನ್‌ನಂತಹ ನಗರಗಳ ನಡುವೆ ವ್ಯಾಪಾರ ಸಂಬಂಧ ವೃದ್ಧಿಗೂ ಸಹಾಯಕವಾಗಲಿದೆ. ಈ ಬಂದರಿನ ಮೂಲಕ ಆಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಳ್ಳುವುದು ಕೂಡ ಭಾರತದ ಉದ್ದೇಶವಾಗಿದೆ.
-ಉದಯವಾಣಿ

Comments are closed.