ಕರ್ನಾಟಕ

ರಾಜ್ಯದಲ್ಲೂ ಬ್ರೆಡ್‌, ಬನ್‌ ಪರೀಕ್ಷೆ

Pinterest LinkedIn Tumblr

breedಬೆಂಗಳೂರು: ಪ್ರತಿನಿತ್ಯ ಸೇವಿಸುವ ಬ್ರೆಡ್‌, ಬನ್‌, ಪಿಜ್ಜಾ, ಬರ್ಗರ್‌ಗಳಲ್ಲಿ ಕ್ಯಾನ್ಸರ್‌ಕಾರಕ ಬ್ರೋಮೇಟ್‌ ಅಂಶಗಳಿರುವ ಆಘಾತಕಾರಿ ಅಂಶವನ್ನು ವಿಜ್ಞಾನ ಮತ್ತು ಪರಿಸರ ಕೇಂದ್ರ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಅವುಗಳ ಮಾದರಿಗಳನ್ನು ಪರೀಕ್ಷೆ ನಡೆಸುವಂತೆ ಆಹಾರ ಸುರಕ್ಷತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಬ್ರೆಡ್‌ ಪದಾರ್ಥಗಳಲ್ಲಿ ರೋಗಕಾರಕ ಅಂಶಗಳು ಇರುವ ಕುರಿತು ಪರೀಕ್ಷೆ ನಡೆಸುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರದ ಆಹಾರ ಸುರಕ್ಷತೆ ಪ್ರಾಧಿಕಾರ ಸೂಚನೆ ನೀಡಬೇಕಾಗಿತ್ತು. ಆದರೆ, ಕೇಂದ್ರದಿಂದ ಯಾವುದೇ ಸೂಚನೆ ಬಾರದ ಕಾರಣ ರಾಜ್ಯ ಆರೋಗ್ಯ ಇಲಾಖೆಯೇ ಸ್ವಯಂ ಪ್ರೇರಿತವಾಗಿ ಬ್ರೆಡ್‌ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗೊಳಪಡಿಸಲು ನಿರ್ಧರಿಸಿದೆ.

ರಾಜ್ಯದ ಆಹಾರ ಸುರಕ್ಷತೆ ಅಧಿಕಾರಿಗಳಿಗೆ ಈ ಕುರಿತು ಆದೇಶ ನೀಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್‌, ಸರ್ಕಾರಿ ಸ್ವಾಮ್ಯದ ಪ್ರಯೋಗಾಲಯದಲ್ಲಿ ಬ್ರೆಡ್‌ ಮತ್ತಿತರ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗೊಳಪಡಿಸಿ ಶೀಘ್ರದಲ್ಲಿಯೇ ವರದಿ ನೀಡುವಂತೆ ತಿಳಿಸಿದ್ದಾರೆ. ಪ್ರಯೋಗಾಲಯ ನೀಡುವ ವರದಿಯನ್ನು ಮತ್ತೂಮ್ಮೆ ರಾಷ್ಟ್ರೀಯ ಮಾನ್ಯತೆ ಪಡೆದಿರುವ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುವುದು. ತರುವಾಯ ಎರಡು ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, ಬ್ರೆಡ್‌ ಮತ್ತಿತರ ಪದಾರ್ಥಗಳಲ್ಲಿ ಬ್ರೋಮೇಟ್‌ ಹಾಗೂ ಕ್ಯಾನ್ಸರ್‌ ರೋಗಕಾರಕ ಅಂಶಗಳಿರುವ ಕುರಿತು ವಿಜ್ಞಾನ ಮತ್ತು ಪರಿಸರ ಕೇಂದ್ರ ಮಾಹಿತಿ ನೀಡಿ ವಾರ ಕಳೆದರೂ ಪರೀಕ್ಷೆ ನಡೆಸುವಂತೆ ಕೇಂದ್ರದಿಂದ ಯಾವುದೇ ಮಾಹಿತಿ ಬಂದಿಲ್ಲ. ಆದರೂ, ಜನರ ಆರೋಗ್ಯದ ದೃಷ್ಟಿಯಿಂದ ಸ್ವಯಂ ಪ್ರೇರಿತವಾಗಿ ಪರೀಕ್ಷೆಗೆ ಮುಂದಾಗಿದ್ದೇವೆ. ಪರೀಕ್ಷೆಯ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದೆಹಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ 38 ಪ್ರಸಿದ್ಧ ಬನ್‌, ಪಾವ್‌, ಪಿಜ್ಜಾ, ಬರ್ಗರ್‌ಗಳಲ್ಲಿ ಬೇರೆ ದೇಶಗಳಲ್ಲಿ
ನಿಷೇಧಿಸಿರುವ ಶೇ. 84ರಷ್ಟು ರಾಸಾಯನಿಕ ಬಳಕೆ ಪತ್ತೆಯಾಗಿದೆ.
-ಉದಯವಾಣಿ

Comments are closed.