ಅಂತರಾಷ್ಟ್ರೀಯ

ಸ್ಪೆಲ್‌ಬಿ ಸ್ಪರ್ಧೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು

Pinterest LinkedIn Tumblr

Jairam+Jagadeesh+Hathwar

ವಾಷಿಂಗ್ಟನ್: ವಿಶ್ವದ ಪ್ರಮುಖ ಸ್ಪರ್ಧೆ ಎಂದೇ ಪರಿಗಣಿಸಲ್ಪಡುವ ಸ್ಪೆಲ್‌ಬಿ (ಕಾಗುಣಿತ) ಸ್ಪರ್ಧೆಯಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಗೆಲ್ಲುವುದರ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಜಯರಾಮ್ ಜಗದೀಶ್ ಹತ್ವಾರ್ (13) ಮತ್ತು ನಿಹಾರ್ ಸಾಯಿರೆಡ್ಡಿ ಜಂಗಾ (11) ಎಂಬ ವಿದ್ಯಾರ್ಥಿಗಳು ಅತಿ ಕಿರಿಯ ವಯಸ್ಸಿನಲ್ಲೇ ಸ್ಪೆಲ್‌ಬಿ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ತೀವ್ರ ಸ್ಪರ್ಧೆಯಿಂದ ಕೂಡಿದ್ದ ಇದರಲ್ಲಿ ಒಟ್ಟು 10 ಸುತ್ತುಗಳಿದ್ದವು. ಏಳನೆ ಸುತ್ತಿನವರೆಗೂ ಹತ್ವಾರ್ ಮತ್ತು ನಿಹಾರ್ ಕಠಿಣ ಸ್ಪರ್ಧೆಯನ್ನು ಎದುರಿಸಿದರು. ಅಂತಿಮ ಸುತ್ತು ಬರುವವರೆಗೂ ಈ ಇಬ್ಬರು ವಿದ್ಯಾರ್ಥಿಗಳು ಇತರರನ್ನು ಹಿಂದಿಕ್ಕಿ ಅಂತಿಮವಾಗಿ ಗೆಲುವಿನ ನಗೆ ಬೀರಿದರು. ನನಗೆ ಏನನ್ನೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ನನ್ನ ಮಗ ಐದನೆ ತರಗತಿ ಓದುತ್ತಿದ್ದಾನೆ. ಇಷ್ಟೊಂದು ಕಠಿಣ ಸ್ಪರ್ಧೆಯಲ್ಲಿ ಗೆಲ್ಲುತ್ತಾನೆಂದು ನಾನು ಕನಸಿನಲ್ಲಿಯೂ ನಿರೀಕ್ಷೆ ಮಾಡಿರಲಿಲ್ಲ ಎಂದು ನಿಹಾರ್ ತಾಯಿ ಭಾವುಕರಾದರು.

ನನ್ನ ಗೆಲುವಿಗೆ ತಾಯಿಯೇ ಪ್ರೇರಣೆ ಎಂದು ನಿಹಾರ್ ಹೇಳಿದ್ದಾನೆ. ಕಳೆದ ಬಾರಿ 8ನೆ ಸ್ಥಾನ ಪಡೆದಿದ್ದ ಮತ್ತೋರ್ವ ಭಾರತೀಯ ಕ್ಯಾಲಿಫೋರ್ನಿಯಾದ ಸ್ನೇಹ ಗಣೇಶ್‌ಕುಮಾರ್ ಈ ಬಾರಿ ಮೂರನೆ ಸ್ಥಾನ ಪಡೆದಿದ್ದಾರೆ. ಭಾರತ-ಅಮೆರಿಕ ಮೂಲದವರಾದ ರೋಟ್ವಿಕ್ ಗಂಧಶ್ರೀ, ಶ್ರೀನಿಕೇತ್ ವೋಗತಿ, ಜೇಶುಮ್ ಪಲುರು ಮತ್ತು ಸ್ಮೃತಿ ಉಪಾಧ್ಯಾಯಲು ಸಹ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ನನ್ನ ಅಣ್ಣ ಕೂಡ ಸ್ಪೆಲ್‌ಬಿಯಲ್ಲಿ ಈ ಹಿಂದೆ ಪ್ರಶಸ್ತಿ ಪಡೆದಿದ್ದರು. ಆತನೇ ನನಗೆ ಸ್ಫೂರ್ತಿ. ಮನೆಯಲ್ಲಿ ತಂದೆ-ತಾಯಿಯರು ಉತ್ತಮ ಪ್ರೋತ್ಸಾಹ ನೀಡಿದ್ದರಿಂದ ಗೆಲ್ಲಲು ಸಾಧ್ಯವಾಯಿತು. ಆದರೆ, ಕಿರಿಯ ವಯಸ್ಸಿನಲ್ಲಿ ದಾಖಲೆ ನಿರ್ಮಿಸುತ್ತೇನೆಂಬ ನಿರೀಕ್ಷೆ ಇರಲಿಲ್ಲ ಎಂದು ಜಯರಾಮ್ ಜಗದೀಶ್ ಹತ್ವಾರ್ ಹೇಳಿದ್ದಾನೆ.

Comments are closed.