ಕರಾವಳಿ

ಇನ್ನು ಮುಂದೆ ಅಪ್ರಾಪ್ತರು ಮದ್ಯ, ತಂಬಾಕು ಉತ್ಪನ್ನ ಸೇವಿಸಿದರೆ FIR ದಾಖಲು

Pinterest LinkedIn Tumblr

gutka

ನವದೆಹಲಿ: ಅಪ್ರಾಪ್ತ ವಯಸ್ಕರು ಮದ್ಯ, ಮಾದಕ ವಸ್ತು, ಸಿಗರೇಟ್, ಪಾನ್‌ಮಸಾಲಾ ಅಥವಾ ಇನ್ಯಾವುದೇ ತಂಬಾಕು ಉತ್ಪನ್ನಗಳನ್ನು ಹೊಂದಿದ್ದರೆ ಅಥವಾ ಅದರ ಪ್ರಭಾವಕ್ಕೆ ಒಳಗಾಗಿದ್ದರೆ ಪೊಲೀಸರು ಪ್ರಕರಣ ದಾಖಲಿಸುವುದನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅಪ್ರಾಪ್ತ ವಯಸ್ಸಿನವರಿಗೆ ಇಂಥ ವಸ್ತುಗಳನ್ನು ಮಾರಾಟ ಮಾಡಲು ಅಥವಾ ಆಮಿಷ ಒಡ್ಡಲು ಯತ್ನಿಸುವ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಅಪ್ರಾಪ್ತ ವಯಸ್ಸಿನವರು ಹೇಗೆ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ, ಯಾರು ಇವರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಲು ಮುಂದಾಗಿದೆ.

ಬಾಲ ನ್ಯಾಯ (ಕಾಳಜಿ ಹಾಗೂ ಮಕ್ಕಳ ಸಂರಕ್ಷಣೆ) ಕಾಯ್ದೆ- 2015ರ ಅನ್ವಯ ಅಪ್ರಾಪ್ತ ವಯಸ್ಸಿನವರಿಗೆ ನೀಡುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ ಗರಿಷ್ಠ ಏಳು ವರ್ಷ ಜೈಲು ಹಾಗೂ ಮೂರು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ. ಇದೀಗ ಉದ್ದೇಶಿತ ಕರಡು ನಿಯಮಾವಳಿಯಲ್ಲಿ, ಎಲ್ಲ ತಂಬಾಕು ಉತ್ಪನ್ನಗಳು ಹಾಗೂ ಮದ್ಯದ ಕವರ್‌ಗಳ ಮೇಲೆ, ಮಕ್ಕಳಿಗೆ ಇದನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಏಳು ವರ್ಷ ಜೈಲು ಹಾಗೂ ಒಂದು ಲಕ್ಷ ರೂಪಾಯಿ ದಂಡಕ್ಕೆ ಕಾರಣವಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ಪ್ರದರ್ಶಿಸುವಂತೆ ಕಡ್ಡಾಯ ಮಾಡಲು ನಿರ್ಧರಿಸಿದೆ.

ಪ್ರಮುಖ ಜಾಗದಲ್ಲೇ ಇದನ್ನು ಪ್ರದರ್ಶಿಸಲು ಕೂಡ ಕರಡು ನಿಯಮಾವಳಿ ಸೂಚಿಸುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕರಡು ನಿಯಮಾವಳಿಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

Comments are closed.