ಮನೋರಂಜನೆ

ಕೋಲ್ಕತ್ತ ನೈಟ್‌ರೈಡರ್ಸ್‌ನ್ನು ಸೋಲಿಸಿದ ಸನ್‌ರೈಸರ್ಸ್ ಕ್ವಾಲಿಫೈಯರ್‌ಗೆ

Pinterest LinkedIn Tumblr

sunrisers-hyderabad-kolkat

ನವದೆಹಲಿ (ಪಿಟಿಐ): ಮೊಯಿಸೆಸ್ ಹೆನ್ರಿಕ್ಸ್ ಅವರ ಆಲ್‌ರೌಂಡ್ ಆಟ ಮತ್ತು ಭುವನೇಶ್ವರ್ ಕುಮಾರ್ ಅವರ ಶಿಸ್ತಿನ ಬೌಲಿಂಗ್‌ನಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಬುಧವಾರ ಐಪಿಎಲ್‌ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪ್ರವೇಶಿಸಿತು.

ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಎಲಿಮಿನೇಟರ್‌ ನಲ್ಲಿ ಸನ್‌ರೈಸರ್ಸ್ ತಂಡವು 22 ರನ್‌ಗಳಿಂದ ಗೌತಮ್ ಗಂಭೀರ್ ನೇತೃತ್ವದ ರೈಡರ್ಸ್ ತಂಡವನ್ನು ಸೋಲಿಸಿತು. ಸನ್‌ರೈಸರ್ಸ್ ತಂಡವು ಹೋದ ವರ್ಷ ಪ್ಲೇ ಆಫ್ ಪ್ರವೇಶಿಸಿತ್ತು.

ಎರಡು ಬಾರಿ (2012 ಮತ್ತು 2014) ಚಾಂಪಿಯನ್ ಆಗಿದ್ದ ಕೋಲ್ಕತ್ತ ತಂಡ ಈ ಬಾರಿ ನಿರಾಸೆಗೊಂಡಿತು. ಹೋದ ವರ್ಷ ಲೀಗ್ ಹಂತದಲ್ಲಿ ನಿರ್ಗಮಿಸಿತ್ತು.

ಮೇ 27ರಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸನ್‌ರೈಸರ್ಸ್ ಎದುರಿಸಲಿದೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್‌ನಲ್ಲಿ ಲಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಎದುರು ಸೋತಿತ್ತು.

‌ಭುವನೇಶ್ವರ್ ಕೈಚಳಕ: ಟಾಸ್‌ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿತು. ನಂತರ ಗುರಿ ಬೆನ್ನತ್ತಿದ ನೈಟ್‌ ರೈಡರ್ಸ್ ತಂಡದ ಬ್ಯಾಟಿಂಗ್ ಪಡೆಗೆ ಉತ್ತರಪ್ರದೇಶದ ವೇಗಿ ಭುವನೇಶ್ವರ್ ಕುಮಾರ್ ಅಡ್ಡಗಾಲು ಹಾಕಿದರು.

ಮನೀಷ್ ಪಾಂಡೆ (36 ರನ್), ಆರ್. ಸತೀಶ್ (8 ರನ್), ಜಾಸನ್ ಹೋಲ್ಡರ್ (6 ರನ್) ಅವರ ವಿಕೆಟ್‌ಗಳನ್ನು ಕಬಳಿಸಿದರು. ಅವರು ನಾಲ್ಕು ಓವರ್‌ಗಳಲ್ಲಿ ಕೊಟ್ಟಿದ್ದು19 ರನ್‌ಗಳನ್ನು ಮಾತ್ರ. ಅವರಿಗೆ ಮೊಯಿಸೆಸ್ ಹೆನ್ರಿಕ್ಸ್ (17ಕ್ಕೆ2) ತಕ್ಕ ಜೊತೆ ನೀಡಿದರು. ಅವರು ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು.

ಸನ್‌ರೈಸರ್ಸ್ ತಂಡದ ಆರಂಭಿಕ ಜೋಡಿ ಡೇವಿಡ್ ವಾರ್ನರ್ (28 ರನ್) ಮತ್ತು ಶಿಖರ್ ಧವನ್ (10 ರನ್) ಅವರು ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ವೇಗಿ ಮಾರ್ನೆ ಮಾರ್ಕೆಲ್ ಅವರ ಎಸೆತಕ್ಕೆ ಶಿಖರ್ ಧವನ್ ಕ್ಲೀನ್ ಬೌಲ್ಡ್ ಆದರು.

ವಾರ್ನರ್ ಜೊತೆಗೂಡಿದ ಮೊಯಿಸೆಸ್ ಹೆನ್ರಿಕ್ಸ್ (31; 21ಎ, 1 ಬೌಂ, 2ಸಿ) ಎರಡನೇ ವಿಕೆಟ್ ಜೊತೆಯಾಟದಲ್ಲಿ 59 ರನ್‌ಗಳನ್ನು ಪೇರಿಸಿದರು.

ಯುವಿ ಮಿಂಚು: ಕೆಕೆಆರ್ ಯುವ ಬೌಲರ್ ಕುಲದೀಪ್ ಯಾದವ್ (35ಕ್ಕೆ3) ಅವರ ಬೌಲಿಂಗ್‌ನಿಂದಾಗಿ ದಿಢೀರ್ ಕುಸಿತ ಕಂಡಿದ್ದ ಸನ್‌ರೈಸರ್ಸ್ ತಂಡಕ್ಕೆ ಯುವರಾಜ್ ಸಿಂಗ್(44; 30ಎ, 8ಬೌಂ, 1ಸಿ) ಆಸರೆಯಾದರು.

ಆಕರ್ಷಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ದೀಪಕ್ ಹೂಡಾ (21 ರನ್ ) ಜೊತೆಗೂಡಿ ಅವರು 4ನೇ ವಿಕೆಟ್‌ಗೆ 49 ರನ್‌ ಸೇರಿಸಿದರು.

ಒಂದು ಆಕರ್ಷಕ ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಬಾರಿಸಿದ ಯುವರಾಜ್ ಸಿಂಗ್ 44 ರನ್‌ ಗಳಿಸಿದರು. ಆದರೆ ಆರು ರನ್‌ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. ತಂಡದ ಮೊತ್ತ 145 ಆಗಿದ್ದಾಗ ಯುವರಾಜ್ ಸಿಂಗ್ ಅವರು ಜಾಸನ್ ಹೋಲ್ಡರ್ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು.

16ನೇ ಓವರ್‌ನಲ್ಲಿ ದೀಪಕ್ ಹೂಡಾ ರನ್‌ಔಟ್ ಆದರು. ನಂತರ ಬಂದ ಬೆನ್ ಕಟಿಂಗ್ ಕುಲದೀಪ್ ಯಾದವ್ ಎಸೆತದಲ್ಲಿ ವಿಕೆಟ್‌ಕೀಪರ್ ರಾಬಿನ್ ಉತ್ತಪ್ಪಗೆ ಕ್ಯಾಚಿತ್ತರು. ನಮನ್ ಓಜಾ, ಭುವನೇಶ್ವರ್ ಕುಮಾರ್ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಆದರೆ ಬಿಪುಲ್ ಶರ್ಮಾ (ಔಟಾಗದೆ 14) ಅಲ್ಪ ಕಾಣಿಕೆ ನೀಡಿ ತಂಡವು ಹೋರಾಟದ ಮೊತ್ತ ಗಳಿಸಲು ನೆರವಾದರು.

ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್ ಹೈದರಾಬಾದ್ 8 ಕ್ಕೆ 162 (20 ಓವರ್‌ಗಳಲ್ಲಿ)

ಡೇವಿಡ್ ವಾರ್ನರ್ ಬಿ ಕುಲದೀಪ್ ಯಾದವ್ 28
ಶಿಖರ್ ಧವನ್ ಬಿ ಮಾರ್ನೆ ಮಾರ್ಕೆಲ್ 10
ಮೊಯಿಸೆಸ್ ಹೆನ್ರಿಕ್ಸ್ ಸಿ ಮತ್ತು ಬಿ ಕುಲದೀಪ್ ಯಾದವ್ 31
ಯುವರಾಜ್ ಸಿಂಗ್ ಬಿ ಜಾಸನ್ ಹೋಲ್ಡರ್ 44
ದೀಪಕ್ ಹೂಡಾ ರನ್‌ಔಟ್ (ಕುಲದೀಪ್ ಯಾದವ್) 21
ಬೆನ್ ಕಟಿಂಗ್ ಸ್ಟಂಪ್ಡ್ ರಾಬಿನ್ ಉತ್ತಪ್ಪ ಬಿ ಕುಲದೀಪ್ ಯಾದವ್ 00
ನಮನ್ ಓಜಾ ಸಿ ರಾಬಿನ್ ಉತ್ತಪ್ಪ ಬಿ ಜಾಸನ್ ಹೋಲ್ಡರ್ 07
ಭುವನೇಶ್ವರ್ ಕುಮಾರ್ ಸಿ ಮನೀಷ್ ಪಾಂಡೆ ಬಿ ಮಾರ್ನೆ ಮಾರ್ಕೆಲ್ 01
ಬಿಪುಲ್ ಶರ್ಮಾ ಔಟಾಗದೆ 14
ಬರೀಂದರ್ ಸರಾನ್ ಔಟಾಗದೆ 00
ಇತರೆ: (ಬೈ 1, ಲೆಗ್‌ಬೈ 1, ವೈಡ್ 4) 06
ವಿಕೆಟ್‌ ಪತನ: 1–12 (ಧವನ್; 1.6), 2–71 (ಹೆನ್ರಿಕ್ಸ್; 9.4), 3–71 (ವಾರ್ನರ್; 9.5), 4–120 (ಹೂಡಾ; 15.5), 5–124 (ಕಟಿಂಗ್; 16.1), 6–145 (ಯುವರಾಜ್; 18.3), 7–147 (ಓಜಾ; 18.5), 8–161 (ಕುಮಾರ್; 19.5).
ಬೌಲಿಂಗ್‌: ಯೂಸುಫ್ ಪಠಾಣ್ 3–0–17–0, ಮಾರ್ನೆ ಮಾರ್ಕೆಲ್ 4–0–31–2, ಸುನಿಲ್ ನಾರಾಯಣ್ 4–0–35–0 (ವೈಡ್ 2), ಜಾಸನ್ ಹೋಲ್ಡರ್ 4–0–33–2 (ವೈಡ್ 2), ಕುಲದೀಪ್ ಯಾದವ್ 4–0–35–3, ಆರ್. ಸತೀಶ್ 1–0–9–0.

ಕೋಲ್ಕತ್ತ ನೈಟ್ ರೈಡರ್ಸ್ 8 ಕ್ಕೆ 140 (20 ಓವರ್‌ಗಳಲ್ಲಿ)

ರಾಬಿನ್ ಉತ್ತಪ್ಪ ಸಿ ಮೊಯಿಸೆಸ್ ಹೆನ್ರಿಕ್ಸ್ ಬಿ ಬರೀಂದರ್ ಸರಾನ್ 11
ಗೌತಮ್ ಗಂಭೀರ್ ಸಿ ಶಂಕರ್ (ಬದಲೀ ಫೀಲ್ಡರ್) ಬಿ ಬೆನ್ ಕಟಿಂಗ್ 28
ಕಾಲಿನ್ ಮನ್ರೊ ರನ್‌ಔಟ್ (ಯುವರಾಜ್‌ಸಿಂಗ್) 16
ಮನೀಷ್ ಪಾಂಡೆ ಸಿ ದೀಪಕ್ ಹೂಡಾ ಬಿ ಭುವನೇಶ್ವರ್‌ ಕುಮಾರ್ 36
ಯೂಸುಫ್ ಪಠಾಣ್ ಸಿ ಭುವನೇಶ್ವರ್ ಕುಮಾರ್ ಬಿ ಮೊಯಿಸೆಸ್ ಹೆನ್ರಿಕ್ಸ್ 02
ಸೂರ್ಯಕುಮಾರ್ ಯಾದವ್ ಸಿ ಶಿಖರ್ ಧವನ್ ಬಿ ಮೊಯಿಸೆಸ್ ಹೆನ್ರಿಕ್ಸ್ 23
ಆರ್. ಸತೀಶ್ ಬಿ ಭುವನೇಶ್ವರ್ ಕುಮಾರ್ 08
ಜಾಸನ್ ಹೋಲ್ಡರ್ ಸಿ ಬೆನ್ ಕಟಿಂಗ್ ಬಿ ಭುವನೇಶ್ವರ್ ಕುಮಾರ್ 06
ಸುನಿಲ್ ನಾರಾಯಣ್ ಔಟಾಗದೆ 01
ಮಾರ್ನೆ ಮಾರ್ಕೆಲ್ ಔಟಾಗದೆ 00
ಇತರೆ:( ಲೆಗ್‌ಬೈ 9) 09
ವಿಕೆಟ್‌ ಪತನ: 1–15 (ಉತ್ತಪ್ಪ; 1.5), 2–53 (ಮನ್ರೊ; 6.6), 3–63 (ಗಂಭೀರ್; 9.1), 4–69 (ಪಠಾಣ್; 10.5), 5–115 (ಯಾದವ್; 15.5), 6–125 (ಪಾಂಡೆ; 17.2), 7–139 (ಸತೀಶ್; 19.2), 8–140 (ಹೋಲ್ಡರ್; 19.5).
ಬೌಲಿಂಗ್‌: ಭುವನೇಶ್ವರ್ ಕುಮಾರ್ 4–0–19–3, ಬರೀಂದರ್ ಸರಾನ್ 3–0–29–1, ದೀಪಕ್ ಹೂಡಾ 1–0–8–0, ಮುಸ್ತಫಿಜರ್ ರೆಹಮಾನ್ 4–0–28–0, ಮೊಯಿಸೆಸ್ ಹೆನ್ರಿಕ್ಸ್ 3–0–17–2, ಬೆನ್ ಕಟಿಂಗ್ 3–0–14–1, ಬಿಪುಲ್ ಶರ್ಮಾ 2–0–16–0.

ಫಲಿತಾಂಶ: ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 22 ರನ್‌ ಜಯ.
ಪಂದ್ಯಶ್ರೇಷ್ಠ: ಮೊಯಿಸಸ್‌ ಹೆನ್ರಿಕ್ಸ್‌.

Comments are closed.