ರಾಷ್ಟ್ರೀಯ

ವೈದ್ಯಕೀಯ ಪವಾಡ ಸಂಭವಿಸಿತು, ಮಹೇಂದ್ರನ ಕತ್ತು ಸರಿಯಾಯಿತು..!

Pinterest LinkedIn Tumblr

Boy-Web

ನವದೆಹಲಿ: ಅಪೋಲೋ ಆಸ್ಪತ್ರೆಯ ಬೆನ್ನಹುರಿ ಸರ್ಜನ್ ಡಾ. ರಾಜಗೋಪಾಲನ್ ಕೃಷ್ಣನ್ ಅವರು 13 ವರ್ಷದ ಮಹೇಂದ್ರ ಅಹಿರ್ವಾರ್ ಎಂಬ ಬಾಲಕನಿಗೆ ಹೊಸ ಬದುಕು ನೀಡಿದ್ದಾರೆ. ಅವರು ನಡೆಸಿದ ಅಪೂರ್ವ ಶಸ್ತ್ರಚಿಕಿತ್ಸೆಯಿಂದಾಗಿ 180 ಡಿಗ್ರಿ ಕೋನದಲ್ಲಿ ಕೆಳಕ್ಕೆ ವಾಲಿದ್ದ ಈ ಬಾಲಕನ ಕತ್ತು ಎಲ್ಲರಂತೆ ತಲೆಯ ಮೇಲಕ್ಕೆ ಬಂದಿದೆ.

ಸುಮಾರು 10 ಗಂಟೆಗಳ ಈ ಅಪೂರ್ವ ಶಸ್ತ್ರಚಿಕಿತ್ಸೆಯಲ್ಲಿ ಕೃಷ್ಣನ್ ಮತ್ತು ಅವರ ತಂಡವು ಮಹೇಂದ್ರನ ಕತ್ತಿನ ಮುಂಭಾಗವನ್ನು ಸಂಪೂರ್ಣವಾಗಿ ಬಿಡಿಸಿ ಕತ್ತಿನ ಡಿಸ್ಕ್ಗಳನ್ನು ತೆಗೆದು ಆತನ ಮೂತ್ರಪಿಂಡದ ಕುಳಿಯಿಂದ ತೆಗೆದ ಮೂಳೆಯನ್ನು ಕತ್ತಿಗೆ ಕಸಿ ಮಾಡಿ ಕತ್ತು ನೇರವಾಗಿ ನಿಲ್ಲುವಂತೆ ಮಾಡಲು ಲೋಹದ ಪ್ಲೇಟ್ ಜೋಡಿಸುವ ಕೆಲಸ ಮಾಡಿದರು. ಶಸ್ತ್ರ ಚಿಕಿತ್ಸೆಯ ಬಳಿಕ ಬಾಲಕ ಈಗ ಎಲ್ಲರಂತಾಗಿದ್ದಾನೆ.

ಮಹೇಂದ್ರನಿಗೆ ಇದ್ದದ್ದು ‘ಕಂಜೆನಿಟಲ್ ಮ್ಯೋಪತಿ’ ಎಂಬ ಅಪರೂಪದಲ್ಲಿ ಅಪರೂಪವಾದ ಸಮಸ್ಯೆ. 12 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದ ಮಹೇಂದ್ರನ ಕತ್ತಿಗೆ ಎಲ್ಲರಂತೆ ನೆಟ್ಟಗೆ ನಿಲ್ಲುವ ಶಕ್ತಿ ಇರಲಿಲ್ಲ. ಹೀಗಾಗಿ ಆತನ ತಲೆ 180 ಡಿಗ್ರಿ ಕೆಳಕ್ಕೆ ವಾಲಿ ಬಲಭುಜ ಇಲ್ಲವೇ ಎದೆಯ ಮುಂಭಾಗದಲ್ಲಿ ಜೋತಾಡುತ್ತಿತ್ತು. ಮಹೇಶನ ತಂದೆ ಮುಖೇಶ್ ಅಹಿರ್ವಾರ್ (41) ಮತ್ತು ತಾಯಿ ಸುಮಿತ್ರಾ (36) ಅಹಿರ್ವಾರ್ ಮತ್ತು ಕುಟುಂಬ ಆತನ ಸಲುವಾಗಿ ಸುತ್ತದ ಆಸ್ಪತ್ರೆಗಳು ಇರಲಿಲ್ಲ. ಆದರೆ ಸಮರ್ಪಕ ನೆರವು ಸಿಗದೆ ಬಾಲಕ ನಿರಂತರ ನೋವು ಅನುಭವಿಸುತ್ತಲೇ ಬದುಕಬೇಕಾಗಿ ಬಂದಿತ್ತು. ಎಲ್ಲೂ ಯಾರೊಂದಿಗೂ ಬೆರೆಯಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಮಾಜಿ ಎನ್ಎಚ್ಎಸ್ ಸರ್ಜನ್ ಹಾಗೂ ಇಬ್ಬರು ಮಕ್ಕಳ ತಾಯಿ ಲಿವರ್ಪೂಲ್ನ ಜೂಲಿ ಜಾನ್ಸನ್ ಅವರು ಮಹೇಂದ್ರನ ಪಾಲಿಗೆ ದೇವತೆಯಾಗಿ ಬಂದರು. ಅಂತರ್ಜಾಲದಲ್ಲಿ ಆತನ ಕಥೆಯನ್ನು ಚಿತ್ರಸಹಿತವಾಗಿ ಪ್ರಕಟಿಸಿದ ಆಕೆಯ ಮನವಿಗೆ ಸ್ಪಂದಿಸಿ ದೇಣಿಯ ಮಹಾಪೂರ ಹರಿದು ಬಂತು. ಶಸ್ತ್ರಚಿಕಿತ್ಸೆಗೆ ಬೇಕಾದ 12,000 ಪೌಂಡ್ (ಸುಮಾರು 12 ಲಕ್ಷ ರೂಪಾಯಿ) ಸಂಗ್ರಹವಾಯಿತು. ಬಳಿಕ ಡಾ. ಕೃಷ್ಣನ್ ಮತ್ತು ತಂಡ ಶಸ್ತ್ರಚಿಕಿತ್ಸೆ ನೆರವೇರಿಸಿತು. ಈಗ ಗಾಲಿ ಕುರ್ಚಿ ಬಳಸಿ ಸಂಚರಿಸುವ ಸಾಮರ್ಥ್ಯ ಪಡೆದಿರುವ ಮಹೇಂದ್ರ ಗೆಳೆಯರೊಂದಿಗೆ ಟಿವಿ, ಸಿನಿಮಾ ನೋಡಲು ಸಮರ್ಥನಾಗಿದ್ದಾನೆ. ಗಟ್ಟಿಯಾಗಿ ಮಾತನಾಡುವ ಶಕ್ತಿಯೂ ಬಂದಿದೆ.

Comments are closed.