ರಾಷ್ಟ್ರೀಯ

ಮೈತ್ರಿಗೆ ಬಿಜೆಪಿ ಒಲವು : ಸ್ವಂತ ಬಲ ಇಲ್ಲದ ಕಡೆ ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆ

Pinterest LinkedIn Tumblr

venkaiah-naydu-1

ನವದೆಹಲಿ, ಮೇ ೨೨ – ಮುಂಬರುವ ದಿನಗಳಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಬಿಜೆಪಿ, ತನ್ನ ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂಬ ವಸ್ತುಸ್ಥಿತಿ ಅರಿವಾದರೆ, ಅಂತಹ ರಾಜ್ಯಗಳಲ್ಲಿ ಇತರೆ ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ ಎಂಬ ಇಂಗಿತವನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ವೆಂಕಯ್ಯನಾಯ್ಡು ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ಬಂದಿದೆ.
`ಎಲ್ಲೆಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಾಧ್ಯತೆ ಇದೆಯೋ ಅಂತಹ ಕಡೆಗಳಲ್ಲಿ ಇತರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಬೇಕು, ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ವಿಷಯಾಧಾರಿತ ಕಾರ್ಯತಂತ್ರ ರೂಪಿಸಿ ಚುನಾವಣೆಗಳನ್ನು ಎದುರಿಸಬೇಕು’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶದಿಂದ ಕಲಿತ ಪಾಠ ಏನು ಎಂಬ ಪ್ರಶ್ನೆಗೆ ಸಚಿವರ ಉತ್ತರ ಇದಾಗಿತ್ತು.
ಅಸ್ಸಾಂನಲ್ಲಿ ಕಾಂಗ್ರೆಸ್, ಇತರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಇದ್ದುದರಿಂದ ಪರಾಭವ ಅನುಭವಿಸಿದೆ ಎಂಬ ವಾದ ಒಪ್ಪದ ನಾಯ್ಡು, ಕೇವಲ ಹೊಂದಾಣಿಕೆಯಿಂದಲೇ ಉತ್ತಮ ಫಲಿತಾಂಶ ಬರುವುದಿಲ್ಲ, ಸರ್ಕಾರಗಳ ಕಾರ್ಯ ಪ್ರಗತಿ ಹಾಗೂ ನಾಯಕತ್ವ ವಿಚಾರಗಳೂ ಮುಖ್ಯವಾಗುತ್ತವೆ ಎಂದು ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದು, ಆ ಪಕ್ಷದ ಸೋಲಿಗೆ ಕಾರಣ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿರುವ ಪ್ರತಿಕ್ರಿಯೆಯನ್ನು ಅವರು ಒಪ್ಪಲಿಲ್ಲ.
`ನರೇಂದ್ರಮೋದಿ ಅವರ ಅಭಿವೃದ್ಧಿ ಕಾರ್ಯಸೂಚಿಗೆ’ ಅನುಮೋದನೆ ಎಂಬಂತೆ ಚುನಾವಣಾ ಫಲಿತಾಂಶಗಳು ಬಂದಿವೆ’ ಎಂದು ಸಮರ್ಥಿಸಿಕೊಂಡ ಬಿಜೆಪಿ ಹಿರಿಯ ಮುಖಂಡರೂ ಆಗಿರುವ ನಾಯ್ಡು, ಪಂಚರಾಜ್ಯಗಳ ಚುನಾವಣೆಗಳಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬದಿಗೆ ಸರಿಸಿದ್ದಾರೆ ಎಂದು ಹೇಳಿದರು.
ಅಸ್ಸಾಂನಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಹಿಂದುತ್ವವಾದಿಗಳ ಬಲ ವೃದ್ಧಿಯಾಗುವ ಸಾಧ್ಯತೆ ಇದೆ ಎಂಬ ವಾದವನ್ನು ಅವರು ತಳ್ಳಿ ಹಾಕಿದರು.
ಚುನಾವಣೆ ಸಂದರ್ಭದಲ್ಲಿ, ಬಾಂಗ್ಲಾದಿಂದ ರಾಜ್ಯಕ್ಕೆ ನುಸುಳುವ ಮುಸ್ಲಿಮರನ್ನು ನಿಗ್ರಹಿಸಲಾಗುವುದು ಎಂದು ಬಿಜೆಪಿ ಜನತೆಗೆ ಭರವಸೆ ನೀಡಿತ್ತು.
ಮೋದಿ ಸರ್ಕಾರದ ಅಭಿವೃದ್ಧಿ ಮಂತ್ರದಿಂದಲೇ ಅಸ್ಸಾಂನಲ್ಲಿ ಗೆಲುವು ಹಾಗೂ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಮತಗಳಿಕೆಯ ಪಾಲು ಹೆಚ್ಚಾಗಿದೆ ಎಂದು ಪದೇ ಪದೇ ಹೇಳಿದ ಸಚಿವರು, ಮೋದಿ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ `ಬದಲಾವಣೆ’ ಕಂಡುಬರುತ್ತಿದೆ ಎಂದು ಸಮರ್ಥಿಸಿಕೊಂಡರು.

Comments are closed.