ಮನೋರಂಜನೆ

ಡೆಲ್ಲಿ ತಂಡಕ್ಕೆ ಮತ್ತೆ ಚಿಗುರಿದ ಪ್ಲೇ ಆಫ್‌ಕನಸು: ರೋಚಕ ಪಂದ್ಯದಲ್ಲಿ ಹೈದರಾಬಾದ್ ನ್ನು ಸೋಲಿಸಿದ ಕರ್ನಾಟಕದ ಆಟಗಾರ

Pinterest LinkedIn Tumblr

winning dd

ರಾಯಪುರ: ಕರುಣ್ ನಾಯರ್ ದಿಟ್ಟ ಬ್ಯಾಟಿಂಗ್‌ನಿಂದಾಗಿ ಡೆಲ್ಲಿ ಡೇರ್‌ಡೆವಿಲ್ಸ್‌ತಂಡದ ಪ್ಲೇ ಆಫ್‌ಕನಸು ಮತ್ತೆ ಚಿಗುರಿತು. ಶುಕ್ರವಾರ ರಾತ್ರಿ ನಡೆದ ರೋಚಕ ಹಣಾಹಣಿಯಲ್ಲಿ ಕರ್ನಾಟಕದ ಕರುಣ್ (ಔಟಾಗದೆ 83; 59ಎ, 8ಬೌಂ, 3ಸಿ) ಅವರ ಬ್ಯಾಟಿಂಗ್ ನೆರವಿನಿಂದ ಡೇರ್‌ಡೆವಿಲ್ಸ್ ತಂಡವು 6 ವಿಕೆಟ್‌ಗಳಿಂದ ಸನ್‌ರೈಸರ್ಸ್‌ಹೈದರಾಬಾದ್ ತಂಡವನ್ನು ಸೋಲಿಸಿತು.

ಮೊದಲು ಬ್ಯಾಟಿಂಗ್‌ಮಾಡಿದ್ದ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 158 ರನ್‌ಗಳಿಸಿತ್ತು. ಡೆಲ್ಲಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 161 ರನ್ ಗಳಿಸಿ ಗೆದ್ದಿತು. ವಿಜಯಕ್ಕೆ ಕೊನೆಯ ಎಸೆತದಲ್ಲಿ ಎರಡು ರನ್ ಅವಶ್ಯವಿದ್ದಾಗ ಭುವನೇಶ್ವರ ಎಸೆತ ವನ್ನು ಕರುಣ್ ಬೌಂಡರಿ ಹೊಡೆದರು. ಮಿಸ್‌ಫೀಲ್ಡ್ ಮಾಡಿದ ಡೇವಿಡ್ ವಾರ್ನರ್ ತೀವ್ರ ನಿರಾಸೆಗೊಂಡರು.

ಆರನೇ ಸ್ಥಾನದಲ್ಲಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ಈ ಪಂದ್ಯದಲ್ಲಿ ಸೋತರೆ ಪ್ಲೇ ಆಫ್‌ಪ್ರವೇಶದ ಅವಕಾಶವನ್ನು ಕಳೆದುಕೊಳ್ಳುತ್ತಿತ್ತು. ಆದರೆ, ಈ ಜಯದಿಂದ ನಾಕೌಟ್‌ಕನಸು ಜೀವಂತವಾಗಿದೆ. ಮೇ 22 ರಂದು ಆರ್‌ಸಿಬಿ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿದೆ. ಆ ಪಂದ್ಯವು ಎರಡೂ ತಂಡಗಳಿಗೂ ಮಹತ್ವದ್ದಾಗಲಿದೆ.

ಕರುಣ್ ದಿಟ್ಟ ಹೋರಾಟ: ಸನ್‌ರೈಸರ್ಸ್ ತಂಡವು ಪಾಯಿಂಟ್ಸ್‌ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಲು ಪ್ರಮುಖ ಕಾರಣರಾಗಿದ್ದ ಬೌಲರ್‌ಗಳ ಆಟ ಶುಕ್ರವಾರ ನಡೆಯಲಿಲ್ಲ. ಅದರಲ್ಲೂ ಕರುಣ್ ನಾಯರ್ ಅವರ ಅಮೋಘ ಅಟದ ಮುಂದೆ ಮುಸ್ತಫಿಜರ್ ರಹಮಾನ್, ಭುವನೇಶ್ವರ ಕುಮಾರ್, ಮೊಯಿಸೆಸ್ ಹೆನ್ರಿಕ್ಸ್, ಬರೀಂದರ್ ಸ್ರಾನ್‌ಅವರ ತಂತ್ರಗಳು ವಿಫಲವಾದವು.

ಎರಡನೇ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್ ಔಟಾದರು. ನಂತರ ಬಂದ ನಾಯರ್ ರಿಷಭ್ ಪಂತ್ ಜೊತೆಗೂಡಿ ಎರಡನೇ ವಿಕೆಟ್‌ಗೆ 73 ರನ್‌ಗಳಿಸಿದರು. ನಂತರ ಡುಮಿನಿ (17) ಜೊತೆಗೆ 35 ರನ್ ಗಳಿಸಿದರು. ಬ್ರಾಥ್‌ವೈಟ್‌10 ರನ್‌ಗಳಿಸಿ ಔಟಾ ದರು. ಆದರೆ, ಎದೆಗುಂದದ ನಾಯರ್ ತಂಡವನ್ನು ಸಂಜು ಸ್ಯಾಮ್ಸನ್ ಜೊತೆ ಗೆಲುವಿನ ದಡ ಮುಟ್ಟಿಸಿದರು. ಸನ್‌ರೈಸರ್ಸ್‌ತಂಡದಲ್ಲಿ ಅನುಭವಿ ಎಡಗೈ ವೇಗಿ ಆಶಿಶ್ ನೆಹ್ರಾ ಅವರ ಅನುಪಸ್ಥಿತಿ ಎದ್ದುಕಂಡಿತು.

ವಾರ್ನರ್ ಅರ್ಧಶತಕ: ಆರ್‌ಸಿಬಿ ಎದುರಿನ ಮುಂದಿನ ಪಂದ್ಯದಲ್ಲಿ ಜಯಿಸಲೇಬೇಕಾದ ಅನಿವಾರ್ಯತೆ ಯಲ್ಲಿರುವ ಡೆಲ್ಲಿ ತಂಡವು ಇಲ್ಲಿ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿತು. ಇದರಿಂದಾಗಿ ಸನ್‌ರೈಸರ್ಸ್ ತಂಡದ ಬ್ಯಾಟಿಂಗ್ ಅಬ್ಬರದಿಂದ ಕೂಡಿರಲಿಲ್ಲ. ಆದರೆ, ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಆಡಿರುವ ಆರಂಭಿಕ ಬ್ಯಾಟ್ಸ್‌ಮನ್ ವಾರ್ನರ್ ಮಾತ್ರ ಒಂಚೂರೂ ವಿಚಲಿತರಾಗಲಿಲ್ಲ. ಡೆಲ್ಲಿ ನಾಯಕ ಜಹೀರ್ ಖಾನ್ ಸೇರಿದಂತೆ ಎಲ್ಲ ಬೌಲರ್‌ಗಳನ್ನು ದಂಡಿಸಿದರು.

ಶಿಖರ್ ಧವನ್ ಜೊತೆಗೆ ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಜೊತೆಯಾಟದಲ್ಲಿ ಇಬ್ಬರೂ 46 ರನ್ ಗಳಿಸಿದರು. ಆರನೇ ಓವರ್‌ನಲ್ಲಿ ನೇರ ಹೊಡೆತಕ್ಕೆ ರಭಸದಿಂದ ನುಗ್ಗಿದ ಚೆಂಡಿಗೆ ಡೈವ್ ಮಾಡಿ ತಡೆದ ಬೌಲರ್ ಬ್ರಾಥ್‌ವೈಟ್ ಚುರುಕಾಗಿ ಥ್ರೋ ಮಾಡಿದರು. ಇನ್ನೂ ಕ್ರೀಸ್ ಮುಟ್ಟದ ಧವನ್ ರನ್‌ಔಟ್ ಆದರು.

ನಂತರದ ಓವರ್‌ನಲ್ಲಿ ದೀಪಕ್ ಹೂಡಾ ಕೂಡ ರನ್‌ಔಟ್ ಆದರು. ಅನುಭವಿ ಆಲ್‌ರೌಂಡರ್ ಯುವರಾಜ್ ಸಿಂಗ್ (10; 11ಎ, 1ಬೌಂ) ಅವರು ವಾರ್ನರ್ ಜೊತೆಗೆ ಇನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದ್ದರು. ಆದರೆ, ಮತ್ತೆ ಮಿಂಚಿದ ವಿಂಡೀಸ್ ಆಟಗಾರ ಬ್ರಾಥ್‌ವೈಟ್ ಎಸೆತದಲ್ಲಿ ಯುವಿ ಕ್ಲೀನ್‌ಬೌಲ್ಡ್ ಆದರು.

ನಂತರ ಕ್ರೀಸ್‌ಗೆ ಬಂದ ಮೊಯಿಸೆಸ್ ಹೆನ್ರಿಕ್ಸ್‌ಕೇವಲ 18 ರನ್‌ಗಳಿಸಿದರು. ಆದರೆ, ಅವರು ವಾರ್ನರ್‌ಗೆ ಉತ್ತಮ ಜೊತೆ ನೀಡಿದರು. ಇದರಿಂದಾಗಿ 4ನೇ ವಿಕೆಟ್‌ಗೆ 39 ರನ್‌ಗಳನ್ನು ಪೇರಿಸಿದರು. ಹೆನ್ರಿಕ್ಸ್‌ಡುಮಿನಿ ಬೌಲಿಂಗ್‌ನಲ್ಲಿ ಪವನ್‌ನೇಗಿಗೆ ಕ್ಯಾಚಿತ್ತರು. ವಾರ್ನರ್ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

16ನೇ ಓವರ್‌ನಲ್ಲಿ ಬ್ರಾಥ್ ವೈಟ್ ಎಸೆತವನ್ನು ಬೌಂಡರಿಗೆರೆ ದಾಟಿಸುವ ಯತ್ನದಲ್ಲಿ ವಾರ್ನರ್ ಅವರು ಅಮಿತ್ ಮಿಶ್ರಾಗೆ ಕ್ಯಾಚ್ ಕೊಟ್ಟರು. ಅಲ್ಲಿಗೆ ಅವರ ಇನಿಂಗ್ಸ್‌ಗೆ ತೆರೆ ಬಿತ್ತು. ಎಯಾನ್ ಮಾರ್ಗನ್ (14), ನಮನ್ ಓಜಾ (ಔಟಾಗದೆ 16), ಕೊನೆಯ ಎಸೆತದಲ್ಲಿ ರನ್‌ಔಟ್ ಆದ ಭುವನೇಶ್ವರ (13) ಅಲ್ಪ ಕಾಣಿಕೆ ನೀಡಿದರು. ಡೆಲ್ಲಿ ತಂಡದ ನಾಥನ್ ಕೌಲ್ಟರ್ ನೈಲ್ ಮತ್ತು ಜೆ.ಪಿ. ಡುಮಿನಿ ತಲಾ ಒಂದು ವಿಕೆಟ್ ಪಡೆದರು.

ಕರುಣ್ ನಾಯರ್:
-83* ರನ್‌
-59 ಎಸೆತ
-8 ಬೌಂಡರಿ
-3ಸಿಕ್ಸರ್‌

** ** **
ನಮ್ಮ ತಂಡ ಉತ್ತಮವಾಗಿ ಬ್ಯಾಟ್‌ಮಾಡಿತ್ತು. ಆದರೆ ಕೆಟ್ಟ ಫೀಲ್ಡಿಂಗ್‌ನಿಂದಾಗಿ ಸೋಲು ಕಾಣಬೇಕಾಯಿತು. ಇದಕ್ಕೆ ನಾನೇ ಹೊಣೆ.
-ಡೇವಿಡ್‌ವಾರ್ನರ್‌

** ** **
ಪಂದ್ಯ ರೋಚಕ ಘಟ್ಟ ತಲುಪಿದ್ದ ಕಾರಣ ಡಗ್‌ಔಟ್‌ನಲ್ಲಿ ಭಾರಿ ಕುತೂಹಲವಿತ್ತು. ಫಲಿತಾಂಶ ಏನಾಗ ಲಿದೆಯೋ ಎನ್ನುವ ಆತಂಕವೂ ಇತ್ತು. ಜಯ ಲಭಿಸಿದ್ದರಿಂದ ಖುಷಿಯಾಗಿದೆ.
-ಜಹೀರ್‌ಖಾನ್‌

*
ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್ ಹೈದರಾಬಾದ್ 7ಕ್ಕೆ 158 (20 ಓವರ್‌ಗಳಲ್ಲಿ)
ಡೇವಿಡ್ ವಾರ್ನರ್ ಸಿ ಅಮಿತ್ ಮಿಶ್ರಾ ಬಿ ಕಾರ್ಲೋಸ್ ಬ್ರಾಥ್‌ವೈಟ್ 73
ಶಿಖರ್ ಧವನ್ ರನ್‌ಔಟ್ (ಬ್ರಾಥ್‌ವೈಟ್) 10
ದೀಪಕ್ ಹೂಡಾ ರನ್‌ಔಟ್ (ಮಿಶ್ರಾ) 01
ಯುವರಾಜ್ ಸಿಂಗ್ ಬಿ ಕಾರ್ಲೋಸ್ ಬ್ರಾಥ್‌ವೈಟ್ 10
ಮೊಯಿಸಸ್ ಹೆನ್ರಿಕ್ಸ್ ಸಿ ಪವನ್ ನೇಗಿ ಬಿ ಜೆ.ಪಿ. ಡುಮಿನಿ 18
ಏಯಾನ್ ಮಾರ್ಗನ್ ಸಿ ಕಾರ್ಲೋಸ್ ಬ್ರಾಥ್‌ವೈಟ್ ಬಿ ಕೌಲ್ಟರ್ ನೈಲ್ 14
ನಮನ್ ಓಜಾ ಔಟಾಗದೆ 16
ಭುವನೇಶ್ವರ್ ಕುಮಾರ್ ರನ್‌ಔಟ್ (ನಾಯರ್/ಕ್ವಿಂಟನ್ ಡಿ ಕಾಕ್) 13

ಇತರೆ: (ಬೈ 1, ಲೆಗ್‌ಬೈ 1, ವೈಡ್ 1) 03

ವಿಕೆಟ್‌ಪತನ: 1–46 (ಧವನ್; 5.6), 2–48 (ಹೂಡಾ; 6.4), 3–66 (ಯುವರಾಜ್; 9.3), 4–105 (ಹೆನ್ರಿಕ್ಸ್ ; 13.3), 5–117 (ವಾರ್ನರ್; 15.2), 6–132 (ಮಾರ್ಗನ್; 17.3), 7–158 (ಭುವನೇಶ್ವರ್; 19.6)

ಬೌಲಿಂಗ್‌: ಜಹೀರ್ ಖಾನ್ 4–0–26–0, ಜಯಂತ್ ಯಾದವ್ 4–0–37–0, ನಾಥನ್ ಕೌಲ್ಟರ್ ನೈಲ್ 4–0–36–1, ಕಾರ್ಲೋಸ್ ಬ್ರಾಥ್‌ವೈಟ್ 4–0–27–2 (ವೈಡ್ 1), ಅಮಿತ್ ಮಿಶ್ರಾ 3–0–21–0, ಜೆ.ಪಿ. ಡುಮಿನಿ 1–0–9–1

ಡೆಲ್ಲಿ ಡೇರ್‌ಡೆವಿಲ್ಸ್‌ 4ಕ್ಕೆ 161 (20 ಓವರ್‌ಗಳಲ್ಲಿ)
ಕ್ವಿಂಟನ್‌ಡಿ ಕಾಕ್‌ಸಿ. ನಮನ್‌ಓಜಾ ಬಿ. ಬರೀಂದರ್‌ಸ್ರಾನ್‌ 02
ರಿಷಬ್‌ಪಂಥ್‌ರನ್‌ಔಟ್‌ (ಭುವನೇಶ್ವರ ಕುಮಾರ್‌) 32
ಕರುಣ್‌ನಾಯರ್ ಔಟಾಗದೆ 83
ಜೆ.ಪಿ ಡುಮಿನಿ ಸಿ. ಡೇವಿಡ್‌ವಾರ್ನರ್‌ಬಿ. ಬರೀಂದರ್‌ಸ್ರಾನ್‌ 17
ಕಾರ್ಲೊಸ್‌ಬ್ರಾಥ್‌ವೈಟ್‌ಸಿ. ಬರೀಂದರ್‌ ಬಿ. ಮುಸ್ತಫಿಜರ್‌ರಹಮಾನ್‌ 10
ಸಂಜು ಸ್ಯಾಮ್ಸನ್‌ಔಟಾಗದೆ 03

ಇತರೆ: (ಲೆಗ್‌ಬೈ–4, ವೈಡ್‌–10) 14

ವಿಕೆಟ್‌ಪತನ: 1–9 (ಡಿ ಕಾಕ್‌; 1.5), 2–82 (ಪಂಥ್‌; 11.4), 3–117 (ಡುಮಿನಿ; 16.1), 4–143 (ಬ್ರಾಥ್‌ವೈಟ್‌; 18.2).

ಬೌಲಿಂಗ್‌: ಭುವನೇಶ್ವರ ಕುಮಾರ್ 4–0–33–0, ಬರೀಂದರ್‌ಸ್ರಾನ್‌4–0–34–2, ಮುಸ್ತಫಿಜರ್ ರಹಮಾನ್‌4–0–24–1, ಮೊಯ್ಸಿಸ್‌ಹೆನ್ರಿಕ್ಸ್‌2–0–18–0, ದೀಪಕ್‌ಹೂಡಾ 2–0–16–0, ಕರಣ್‌ಶರ್ಮಾ 3–0–25–0, ಯುವರಾಜ್‌ಸಿಂಗ್ 1–0–7–0.

ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ 6 ವಿಕೆಟ್‌ಜಯ.

ಪಂದ್ಯ ಶ್ರೇಷ್ಠ: ಕರುಣ್‌ನಾಯರ್‌

Comments are closed.