ರಾಷ್ಟ್ರೀಯ

ದೆಹಲಿ ಚಾಲಕ ರಹಿತ ರೈಲು ಹೇಗಿದೆ ಗೊತ್ತಾ?

Pinterest LinkedIn Tumblr

trai

ದೆಹಲಿ ಮೆಟ್ರೋ ನಿಗಮ ದೇಶದಲ್ಲೇ ಮೊದಲ ಬಾರಿಗೆ ದಾಖಲೆಯೊಂದನ್ನು ಬರೆದಿದೆ. ಮೊನ್ನೆಯಷ್ಟೇ ಚಾಲಕ ರಹಿತ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದೆ. ಒಟ್ಟು 6 ಇಂತಹ ರೈಲುಗಳಿಗೆ ಚಾಲನೆ ನೀಡಲಾಗಿದ್ದು, ಭಾರತೀಯ ರೈಲ್ವೇ ಇತಿಹಾಸದಲ್ಲಿ ಮಹತ್ವದ ವಿದ್ಯಮಾನವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಚಾಲಕ ರೈಲಿನ ವಿಶೇಷತೆ, ಹೇಗೆ ಕೆಲಸ ಮಾಡುತ್ತದೆ? ಸೌಲಭ್ಯಗಳೇನಿವೆ ಎಂಬ ಮಾಹಿತಿಗಳು ಇಲ್ಲಿವೆ.

ಕೊರಿಯಾದಿಂದ ಬಂದ ರೈಲು
ದೆಹಲಿ ಮೆಟ್ರೋ ಚಾಲಕ ರಹಿತ ರೈಲನ್ನು ಆರಂಭದಲ್ಲಿ ದ.ಕೊರಿಯಾದಿಂದ ಆಮದು ಮಾಡಿದೆ. ಅಲ್ಲಿನ ಹುಂಡೈ ರೊಟೊಮ್‌ ಕಂಪನಿ ಚಾಲಕ ರಹಿತ ರೈಲಿನ ವಿನ್ಯಾಸ, ತಂತ್ರಜ್ಞಾನಗಳನ್ನು ತಯಾರು ಮಾಡಿದೆ. ಕಳೆದ ವರ್ಷವೇ ಗುಜರಾತಿನ ಮುಂದ್ರಾ ಬಂದರಿನ ಮೂಲಕ 6 ರೈಲ್ವೇ ಕೋಚ್‌ಗಳು ದೆಹಲಿಗೆ ಬಂದು ತಲುಪಿದ್ದವು. ಒಪ್ಪಂದ ಪ್ರಕಾರ ಒಟ್ಟು 20 ರೈಲುಗಳನ್ನು ಹ್ಯುಂಡೈ ಕಂಪನಿ ತಯಾರು ಮಾಡಿದೆ. ಸುಮಾರು 60 ರೈಲುಗಳನ್ನು ಬೆಂಗಳೂರು ಮೂಲದ ಬಿಇಎಮ್‌ಎಲ್‌ ತಯಾರು ಮಾಡಲಿದೆ.

ದೆಹಲಿ ಮೆಟ್ರೋದ ಹೊಸ ಮಾರ್ಗದಲ್ಲಿ ಓಡಾಟ
ದೆಹಲಿ ಮೆಟ್ರೋದ ಹೊಸ ಮಾರ್ಗದಲ್ಲಿ ಈ ರೈಲು ಓಡಾಡಲಿದೆ. ಮೂರನೇ ಹಂತದ 58 ಕಿ.ಮೀ. ಉದ್ದದ ಮಜಿಲಿಸ್‌-ಶಿವವಿಹಾರ್‌ (7ನೇ ಲೇನ್‌) ಮತ್ತು 38 ಕಿ.ಮೀ. ಉದ್ದದ ಜನಕಪುರಿ ಪಶ್ಚಿಮ- ಬೊಟಾನಿಕಲ್‌ ಗಾರ್ಡನ್‌ (8ನೇ ಲೇನ್‌) ಮಾರ್ಗಗಳಲ್ಲಿ ಚಾಲಕ ರಹಿತ ರೈಲು ಓಡಾಡಲಿದೆ. ಆರಂಭದಲ್ಲಿ ಪ್ರಾಯೋಗಿಕ ಸಂಚಾರ ನಡೆಸುತ್ತಿರುವಾಗ, ಚಾಲಕರೂ ಇರಲಿದ್ದು, ಚಾಲನೆಯ ಮೇಲುಸ್ತವಾರಿ ನೋಡಲಿದ್ದಾರೆ. 2016 ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಚಾಲಕ ರಹಿತವಾಗಿ ಇದರ ಓಡಾಟ ನೆರವೇರಲಿದೆ.

ಸಂಪೂರ್ಣ ಪರಿಸರ ಸ್ನೇಹಿ
ಇತರ ಮೆಟ್ರೋ ರೈಲುಗಳಿಗಿಂತಲೂ ಚಾಲಕ ರಹಿತ ರೈಲು ಹೆಚ್ಚು ಪರಿಸರ ಸ್ನೇಹಿಯಾಗಿದೆ. ಶೇ.10ರಷ್ಟು ಕಡಿಮೆ ವಿದ್ಯುತ್‌ ಬಳಕೆ ಮಾಡುತ್ತಿದೆ. ಜೊತೆಗೆ ವೇಗವೂ ಹೆಚ್ಚು. ಗರಿಷ್ಠ 95 ಕಿ.ಮೀ. ವೇಗದ ವರೆಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ದೆಹಲಿ ಮೆಟ್ರೋ ವೇಗವನ್ನು ಗರಿಷ್ಠ 85 ಕಿ.ಮೀ.ಗೆ ನಿಗದಿ ಮಾಡಿದೆ.

ಚಾಲಕ ರಹಿತ ರೈಲಲ್ಲಿ ಸ್ಮಾರ್ಟ್‌ ಬೋಗಿಗಳು
ದೆಹಲಿಯ ಹೊಸ ಚಾಲಕ ರಹಿತ ರೈಲಿನಲ್ಲಿ ಸ್ಮಾರ್ಟ್‌ ಬೋಗಿಗಳೇ ಇರಲಿವೆ. ರೈಲಿನ ಹೊರಗೆ, ಒಳಗೆ ಮಾಹಿತಿ ನೀಡುವ ಎಲ್‌ಸಿಡಿ ಪರದೆಗಳು, ಹಲವು ಸೀಸಿಟೀವಿಗಳು ಇರಲಿವೆ. ಪ್ರತಿ ಬೋಗಿಗಳಲ್ಲಿ ರೈಲು ಮಾರ್ಗದ ಕುರಿತ ನಕ್ಷೆ ತೋರಿಸುವ ವ್ಯವಸ್ಥೆ ಇರುತ್ತದೆ. ಬೋಗಿಗಳಲ್ಲಿ ಚಾರ್ಜಿಂಗ್‌ ವ್ಯವಸ್ಥೆ, ಯುಎಸ್‌ಬಿ ವ್ಯವಸ್ಥೆ, ದೃಶ್ಯ-ಶ್ರಾವ್ಯ ಸೂಚನೆಗಳು ಇರಲಿವೆ. ಒಂದು ಬೋಗಿಗಳಲ್ಲಿ 380 ಮಂದಿ ಪ್ರಯಾಣಿಕರಿಗೆ ಅವಕಾಶವಿದ್ದು 6 ಬೋಗಿಗಳಲ್ಲಿ 2,280 ಮಂದಿ ಪ್ರಯಾಣಿಸಬಹುದು.

ಚಾಲಕ ರಹಿತ ರೈಲು ಹೇಗೆ ಓಡುತ್ತೆ?
ಚಾಲಕ ರಹಿತ ರೈಲು ಯುಟಿಒ (ಅನ್‌ಎಟೆಂಡೆಡ್‌ ಟ್ರೈನ್‌ ಆಪರೇಷನ್‌) ಯಾರ ಹಸ್ತಕ್ಷೇಪವೂ ಇಲ್ಲದೇ ಓಡುವ ಮಾದರಿಯಲ್ಲಿರಲಿದೆ. ಚಾಲಕ ರಹಿತ ರೈಲುಗಳಿಗೆ ದೆಹಲಿ ಮೆಟ್ರೋ ನಿಗಮ ಪ್ರತ್ಯೇಕ ನಿಯಂತ್ರಣ ವಿಭಾಗ (ಆಪರೇಷನ್ಸ್‌ ಕಂಟ್ರೋಲ್‌ ಸೆಂಟರ್ (ಒಸಿಸಿ) ತೆರೆದಿದೆ. ಇದರಲ್ಲಿನ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆ (ಕಮ್ಯುನಿಕೇಷನ್‌ ಬೇಸ್ಡ್ ಟ್ರೈನ್‌ ಕಂಟ್ರೋಲ್‌ (ಸಿಬಿಟಿಸಿ) ಮೂಲಕ ರೈಲುಗಳ ನಿಯಂತ್ರಣ ಮಾಡಲಾಗುತ್ತದೆ. ಪ್ರತಿ ರೈಲುಗಳಲ್ಲಿ ಜಿಪಿಎಸ್‌, ತುರ್ತು ಸಂದರ್ಭ ನಿಯಂತ್ರಣ ಇತ್ಯಾದಿ ಇರಲಿದ್ದು, ನಿಯಂತ್ರಣ ಕೇಂದ್ರವನ್ನು ಅದು ಸಂಪರ್ಕಿಸುತ್ತಿರುತ್ತದೆ.

ದೆಹಲಿ ಚಾಲಕ ರೈಲು ವಿಶೇಷತೆಗಳು
„ ದ.ಕೊರಿಯಾದ ಹ್ಯುಂಡೈ ರೊಟೆಮ್‌ನಿಂದ ತಯಾರಿಕೆ
„ ಶೇ.10 ರಷ್ಟು ಕಡಿಮೆ ವಿದ್ಯುತ್‌ ವೆಚ್ಚ
„ ವಿದ್ಯುತ್‌ ಮಿತವ್ಯಯಕಾರಿ ಎಲ್‌ಇಡಿಲೈಟಿಂಗ್‌, ಎ.ಸಿ.
„ ತ್ವರಿತವಾಗಿ ವೇಗ ವೃದ್ಧಿ, ನಿಯಂತ್ರಣ
„ ರೈಲಿನ ಎದುರು ಮಾರ್ಗ ಪತ್ತೆಯ ಕ್ಯಾಮೆರಾ
„ ಪ್ರಯಾಣಿಕರಿಗೆ ಸಂಪೂರ್ಣ ಎಲ್‌ಸಿಡಿ ಪರದೆಯ ಮೂಲಕ ಮಾಹಿತಿ
„ ಚಾಲಕ ಕ್ಯಾಬಿನ್‌ ಇಲ್ಲದ್ದರಿಂದ ಹೆಚ್ಚುವರಿ 40 ಪ್ರಯಾಣಿಕರಿಗೆ ಅವಕಾಶ
„ 35 ಕಿ.ಮೀ. ಸಾಮಾನ್ಯ ವೇಗ
„ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆ „
8.5 ಕೋಟಿ ರೂ. ಪ್ರತಿ ಬೋಗಿಯ ಮೌಲ್ಯ.
-ಉದಯವಾಣಿ

Comments are closed.