ಕರ್ನಾಟಕ

ನಾಯಕರ ವೈಯಕ್ತಿಕ ಇಮೇಜ್‌ಗೆ ಗೆಲುವು; ಸಿದ್ದು ಕಲಿಯಬೇಕಾದ ಪಾಠ

Pinterest LinkedIn Tumblr

si

ಬಂಗಾಳ ಹಾಗೂ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಗೆದ್ದ ರೀತಿಯನ್ನೂ, ಅಸ್ಸಾಂ ಹಾಗೂ ಕೇರಳದಲ್ಲಿ ಕಾಂಗ್ರೆಸ್‌ ಸೋತ ರೀತಿಯನ್ನೂ ನೋಡಿ ಸಿದ್ದರಾಮಯ್ಯ ಎಚ್ಚೆತ್ತುಕೊಂಡರೆ ಇನ್ನೆರಡು ವರ್ಷದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಈಗಿರುವುದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಚುನಾವಣೆಗೆ ಹೋಗಬಹುದು.

ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಾಗಲೆಲ್ಲ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಮುಖ್ಯತೆ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಹೆಚ್ಚುತ್ತ ಬಂದಿದೆ. ಈ ಬಾರಿಯ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಇನ್ನೊಂದು ದೊಡ್ಡ ರಾಜ್ಯವಾದ ಅಸ್ಸಾಂನಲ್ಲಿ ಅಧಿಕಾರ ಕಳೆದುಕೊಂಡಿರುವುದರಿಂದ ದೇಶದಲ್ಲಿ ಆ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ 7ಕ್ಕೆ ಕುಸಿದಿದೆ ಮತ್ತು ಪಟ್ಟಿಯಲ್ಲಿ ಕರ್ನಾಟಕವೇ ಅತಿ ದೊಡ್ಡದು. ಇನ್ನುಳಿದ ಆರೂ ರಾಜ್ಯಗಳು ಸಣ್ಣಪುಟ್ಟ ರಾಜ್ಯಗಳು. ಅವುಗಳಲ್ಲಿ 3 ಈಶಾನ್ಯ ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ. ಆದರೆ, ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರುವ ಅತಿದೊಡ್ಡ ರಾಜ್ಯದ ಮುಖ್ಯಮಂತ್ರಿ ಎಂಬ ಏಕೈಕ ಧನಾತ್ಮಕ ಸಂಗತಿಯೊಂದಿಗೆ ಸಿದ್ದರಾಮಯ್ಯ ಪರವಾದ ಈ ವಿಶ್ಲೇಷಣೆ ಮುಗಿಯುತ್ತದೆ. ಇನ್ನುಳಿದ ಎಲ್ಲಾ ಸಂಗತಿಗಳೂ ಸಿದ್ದರಾಮಯ್ಯ ಕಲಿಯಬೇಕಾದ ಪಾಠದ ಕುರಿತಾಗಿಯೇ ಗೋಚರಿಸುತ್ತಿವೆ. ನಿನ್ನೆಯ ಫ‌ಲಿತಾಂಶದಲ್ಲಿ ಗಮನಿಸಬೇಕಾದ ಪ್ರಮುಖ ವಿದ್ಯಮಾನವೆಂದರೆ ಎಲ್ಲಾ ರಾಜ್ಯಗಳಲ್ಲೂ ಸ್ಥಳೀಯ ರಾಜಕೀಯ ಶಕ್ತಿ, ಆಯಾ ರಾಜ್ಯಗಳ ರಾಜಕೀಯ ನಾಯಕರ ವೈಯಕ್ತಿಕ ಇಮೇಜ್‌, ಅವರ ಸರ್ಕಾರ ಅಥವಾ ಪಕ್ಷ ಅಲ್ಲಿನ ಮತದಾರರೊಂದಿಗೆ ಹೊಂದಿರುವ ಸಮೀಪದ ಬಾಂಧವ್ಯ ಮತ್ತು ಸ್ಥಳೀಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿದ ರೀತಿಯೇ ಜಯ ಗಳಿಸಿದೆ. ಮುಖ್ಯವಾಗಿ ರಾಷ್ಟ್ರೀಯ ರಾಜಕಾರಣವನ್ನು ರಾಜ್ಯ ರಾಜಕಾರಣದೊಂದಿಗೆ ತಳುಕು ಹಾಕದೆ ಇರುವವರು ಎಲ್ಲಾ ರಾಜ್ಯಗಳಲ್ಲಿ
ಗೆದ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮತ್ತು ತಮಿಳುನಾಡಿನಲ್ಲಿ ಜನರು ಪ್ರಾದೇಶಿಕ ಪಕ್ಷಗಳನ್ನೇ ಮತ್ತೂಮ್ಮೆ ಗೆಲ್ಲಿಸಿದ್ದಾರೆ.

ಅಸ್ಸಾಂ ಹಾಗೂ ಕೇರಳದಲ್ಲಿ ಜನರು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸನ್ನು ಸೋಲಿಸಿದ್ದಾರೆ. ಅಸ್ಸಾಂನಲ್ಲಿ ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಗೆದ್ದಿದ್ದರೂ ಅದು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು ಮತ್ತು ಸ್ಥಳೀಯ ವಿದ್ಯಮಾನ ಹಾಗೂ ನಾಯಕತ್ವಕ್ಕೇ ಹೆಚ್ಚು ಒತ್ತು ನೀಡಿತ್ತು. ಈ ಎಲ್ಲ ಸಂಗತಿಗಳು ಕರ್ನಾಟಕದಲ್ಲಿನ ಕಾಂಗ್ರೆಸ್‌ ಸರ್ಕಾರ ಪ್ರತಿಯೊಂದಕ್ಕೂ ಹೈಕಮಾಂಡ್‌ನ‌ ಮರ್ಜಿ ಕಾಯುವುದು ಹಾಗೂ ಇಲ್ಲಿನ ಪ್ರಾದೇಶಿಕ ರಾಜಕಾರಣವನ್ನು ರಾಷ್ಟ್ರ ರಾಜಕಾರಣದ ರೀತಿಯಲ್ಲೇ ನಡೆಸುತ್ತಿರುವುದಕ್ಕೆ ವ್ಯತಿರಿಕ್ತವಾಗಿದೆ.

ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಸಣ್ಣ ಪ್ರಮಾಣದ ಆಡಳಿತವಿರೋಧಿ ಅಲೆಯಿದ್ದ ಹೊರತಾಗಿಯೂ ಆಡಳಿತಾರೂಢ ಸ್ಥಳೀಯ ಪಕ್ಷಗಳೇ ಏಕೆ ಗೆದ್ದಿವೆ ಅಂದರೆ ಆ ಸರ್ಕಾರಗಳು ತಾವು ಘೋಷಿಸಿದ್ದ ಯೋಜನೆಗಳನ್ನು ಜನರಿಗೆ ತಲುಪುವ ರೀತಿಯಲ್ಲಿ ಜಾರಿಗೆ ತಂದಿದ್ದವು. ಹಾಗೂ ಆ ಕುರಿತು ಜನಾಭಿಪ್ರಾಯವನ್ನೂ ರೂಪಿಸುವಲ್ಲಿ ಯಶಸ್ವಿಯಾಗಿದ್ದವು. ಸಿದ್ದರಾಮಯ್ಯ ಕೂಡ ಸಾಕಷ್ಟು ಯೋಜನೆಗಳನ್ನೇನೋ ಘೋಷಿಸಿದ್ದಾರೆ, ಆದರೆ ಅವು ತಳಮಟ್ಟದಲ್ಲಿ ಎಷ್ಟು ಜನರನ್ನು ತಲುಪಿವೆ ಎಂಬುದು 3 ವರ್ಷ ಕಳೆದ ಮೇಲೂ ಪ್ರಶ್ನಾರ್ಹವಾಗಿದೆ. ಯೋಜನೆ ಘೋಷಿಸುವುದಕ್ಕಿಂತ ಅದರ ಜಾರಿ ಮುಖ್ಯ. ಬಂಗಾಳ ಹಾಗೂ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಗೆದ್ದ ರೀತಿಯನ್ನೂ, ಅಸ್ಸಾಂ ಹಾಗೂ ಕೇರಳದಲ್ಲಿ ಕಾಂಗ್ರೆಸ್‌ ಪಕ್ಷ ಸೋತ ರೀತಿಯನ್ನೂ ನೋಡಿ ಸಿದ್ದರಾಮಯ್ಯ ಎಚ್ಚೆತ್ತುಕೊಂಡರೆ ಇನ್ನೆರಡು ವರ್ಷದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಈಗಿರುವುದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಚುನಾವಣೆಗೆ ಹೋಗಬಹುದು.

ರಾಜ್ಯಗಳ ಚುನಾವಣೆಯಲ್ಲಿ ರಾಷ್ಟ್ರೀಯ ಶೈಲಿಯ ರಾಜಕಾರಣ ನಡೆಯುವುದಿಲ್ಲ ಎಂಬುದನ್ನು ಬಿಜೆಪಿಯೀಗ ಅರಿತುಕೊಂಡಿದೆ. ಆದ್ದರಿಂದಲೇ ಅಸ್ಸಾಂನಲ್ಲಿ ಸ್ಥಳೀಯ ನಾಯಕರು ಹಾಗೂ ರಾಜಕೀಯ ವಿದ್ಯಮಾನಗಳಿಗೆ ಒತ್ತು ನೀಡಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಕಾಂಗ್ರೆಸ್‌ನಲ್ಲೀಗ ಸಿದ್ದರಾಮಯ್ಯ ಅತಿ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ ಹೈಕಮಾಂಡ್‌ನ‌ ಮೇಲೆ ಪ್ರಭಾವ ಬೀರಿ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹಾಗೂ ಅದಕ್ಕೂ ಮುಂಚಿನ ದೈನಂದಿನ ಆಳ್ವಿಕೆಯಲ್ಲಿ ಸ್ಥಳೀಯ ವಿದ್ಯಮಾನಗಳಿಗೆ ಪ್ರಾಮುಖ್ಯತೆ ನೀಡುವಂತೆ ಮನವೊಲಿಸಲು ಸಾಧ್ಯವಿದೆ. ಆ ಕೆಲಸ ಮಾಡದಿದ್ದರೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ಗೂ ನಷ್ಟ, ಸ್ಥಳೀಯವಾಗಿ ಸಿದ್ದರಾಮಯ್ಯ ಅವರಿಗೂ ಕಷ್ಟ.
-ಉದಯವಾಣಿ

Comments are closed.