ಕರ್ನಾಟಕ

ರಾಜ್ಯ ಬಿಜೆಪಿಯಲ್ಲಿ ಬಿಎಸ್‌ವೈಗೆ ಮತ್ತಷ್ಟು ಬಲ

Pinterest LinkedIn Tumblr

yeddyurappa-15ಬೆಂಗಳೂರು: ಪಂಚ ರಾಜ್ಯಗಳ ಚುನಾವಣಾ ಫ‌ಲಿತಾಂಶ ಹೊರಬೀಳುತ್ತಿದ್ದಂತೆಯೇ ಕರ್ನಾಟಕ ಬಿಜೆಪಿಯಲ್ಲಿ ಹರ್ಷದ ಹೊನಲು ಹರಿದಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತಿತರ ನಾಯಕರು ಆತ್ಮವಿಶ್ವಾಸದ ನಗೆ ಬೀರಿದ್ದಾರೆ.

ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ನೀಡಿದರೆ ಮಾತ್ರ ಚುನಾವಣೆಗಳನ್ನು ಸುಲಭವಾಗಿ ಎದುರಿಸಬಹುದು ಎಂಬ ಸಂದೇಶವನ್ನು ಬಿಜೆಪಿ ಮಟ್ಟಿಗೆ ಈ ಫ‌ಲಿತಾಂಶ ಪುಷ್ಟೀಕರಿಸಿರುವುದು ರಾಜ್ಯ ನಾಯಕರಿಗೂ ಸಹಜವಾಗಿಯೇ ಖುಷಿ ತಂದಿದೆ. ನಗರದ ಮಲ್ಲೇಶ್ವರದಲ್ಲಿನ ಪಕ್ಷದ ಕೇಂದ್ರ ಕಚೇರಿ ಮುಂಭಾಗ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ.

ಹಾಗೆ ನೋಡಿದರೆ ದೆಹಲಿ ಮತ್ತು ಬಿಹಾರ ಚುನಾವಣೆಗಳ ಫ‌ಲಿತಾಂಶ ಹೊರಬೀಳುವವರೆಗೆ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಸ್ಥಳೀಯ ಪ್ರಭಾವಿ ನಾಯಕರನ್ನು ದೂರವಿರಿಸಿ ಹೊಸ ನಾಯಕತ್ವದ ಪ್ರಯೋಗ ಮಾಡುವ ಹುಮ್ಮಸ್ಸು ಹೆಚ್ಚಾಗಿತ್ತು. ಆದರೆ, ಆ ಎರಡು ರಾಜ್ಯಗಳ ಫ‌ಲಿತಾಂಶ ಹೊರಬಿದ್ದ ನಂತರ ರಾಷ್ಟ್ರೀಯ ನಾಯಕರು ತಮ್ಮ ತಪ್ಪನ್ನು ಒಪ್ಪಿಕೊಂಡರು. ಅದರ ಪರಿಣಾಮವೇ ರಾಜ್ಯದಲ್ಲೂ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ಸಿಗುವಂತಾಯಿತು. ಒಂದು ವೇಳೆ ಹೊಸ ಪ್ರಯೋಗ ಯಶಸ್ವಿಯಾಗಿದ್ದರೆ ಯಡಿಯೂರಪ್ಪ ಸೇರಿದಂತೆ ವಿವಿಧ ರಾಜ್ಯಗಳ ಸ್ಥಳೀಯ ಪ್ರಭಾವಿ ನಾಯಕರು ತೆರೆಮರೆಗೆ ಸರಿಯಬೇಕಾಗುತ್ತಿತ್ತೇನೊ.

ಮುಂಬರುವ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಗುರಿ ಮತ್ತು ಜವಾಬ್ದಾರಿಯೊಂದಿಗೇ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವ ನಿರ್ಧಾರವನ್ನು ಬಿಜೆಪಿ ವರಿಷ್ಠರು ಕೈಗೊಂಡಿದ್ದರು. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಮುಖ್ಯಮಂತ್ರಿಯೂ ಯಡಿಯೂರಪ್ಪ ಅವರೇ ಎಂಬುದನ್ನೂ ಆಖೈರುಗೊಳಿಸಲಾಗಿದೆ.

ಇಷ್ಟೆಲ್ಲ ಜವಾಬ್ದಾರಿ ನೀಡಿದ ಮೇಲೆ ಯಡಿಯೂರಪ್ಪ ಅವರಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಕೈಗೊಳ್ಳಬೇಕಾದ ನಿರ್ಧಾರಗಳಿಗೂ ವರಿಷ್ಠರ ಬೆಂಬಲವಿದೆ. ಯಡಿಯೂರಪ್ಪ ಅವರು ತಮಗೆ ಅನುಕೂಲವಾಗುವಂತೆ ಪಕ್ಷದ ಸಂಘಟನೆ ವಿಚಾರದಲ್ಲಿ ತೀರ್ಮಾನಗಳನ್ನು ಕೈಗೊಳ್ಳಲು ಈ ಫ‌ಲಿತಾಂಶ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದೆ. ಯಡಿಯೂರಪ್ಪ ಅವರ ನಿರ್ಧಾರಗಳನ್ನು ಪ್ರಶ್ನಿಸುವ ಅಥವಾ ವಿರೋಧಿಸುವ ಧೈರ್ಯವೂ ರಾಜ್ಯ ನಾಯಕರಿಗೆ ಬರಲಾರದು. ಹಾಗೊಂದು ವೇಳೆ ಪ್ರಯತ್ನ ಮಾಡಿದರೂ ಅದರಲ್ಲಿ ಯಶಸ್ಸು ಸಿಗುವ ಸಾಧ್ಯತೆ ಕಡಮೆಯೇ ಸರಿ.

ರಾಜ್ಯ ನಾಯಕರ ಒಳವಿರೋಧದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವ ಗಟ್ಟಿ ನಿರ್ಧಾರ ಕೈಗೊಂಡರು. ಮೋದಿ ಮತ್ತು ಅಮಿತ್‌ ಶಾ ಬಲಗೊಂಡಷ್ಟೂ ಯಡಿಯೂರಪ್ಪ ಅವರೂ ಬಲಗೊಳ್ಳುತ್ತಾರೆ. ಈ ಪಂಚ ರಾಜ್ಯಗಳ ಚುನಾವಣಾ ಫ‌ಲಿತಾಂಶದ ನಂತರ ಮೋದಿ ಮತ್ತು ಶಾ ಗಟ್ಟಿಯಾಗಿದ್ದಾರೆ. ಹೀಗಾಗಿ ಇದು ಯಡಿಯೂರಪ್ಪ ಅವರಿಗೂ ಆನೆ ಬಲ ತಂದಂತಾಗಿದೆ.
-ಉದಯವಾಣಿ

Comments are closed.