
ನವದೆಹಲಿ: ಐಪಿಎಲ್ 9ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ಎಂಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಟೂರ್ನಿಯಿಂದ ಹೊರಬಂದಿದ್ದು, ಈ ನಡುವೆ ಧೋನಿ ಮುಂದಿನ 8 ತಿಂಗಳು ಕ್ರಿಕೆಟ್ ಆಡದೇ ಸುಮ್ಮನೆ ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಐಪಿಎಲ್ ನಂತರ ಭಾರತ ಕ್ರಿಕೆಟ್ ತಂಡ ಜೂನ್ 11 ರಿಂದ 20ರವರೆಗೆ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಈ ನಡುವೆ ಪ್ರವಾಸದಲ್ಲಿ ಧೋನಿ ಪ್ರವಾಸದಲ್ಲಿ ಭಾಗವಹಿಸುತ್ತಾರೋ, ಇಲ್ಲವೋ ಎಂಬ ಗೊಂದಲವಿದೆ. ಇನ್ನು ಜಿಂಬಾಬ್ವೆ ಪ್ರವಾಸ ಮುಕ್ತಾಯದ ಬಳಿಕ ಟೀಂ ಇಂಡಿಯಾ ಮುಂದಿನ 8 ತಿಂಗಳಲ್ಲಿ 17 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಟೆಸ್ಟ್ ಕ್ರಿಕೆಟ್ ಗೆ ಧೋನಿ ವಿದಾಯ ಹೇಳಿರುವುದೇ ಮುಂದಿನ 8 ತಿಂಗಳು ಕ್ರಿಕೆಟ್ ನಿಂದ ದೂರವಿರಬೇಕಾಗಿ ಬಂದಿದೆ.
ಇನ್ನು ಜಿಂಬಾಬ್ವೆ ಪ್ರವಾಸ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ತೀರ್ಮಾನಿಸಿದೆ. ಈಗಾಗಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ವಿಶ್ರಾಂತಿ ಪಡೆಯುವುದು ಖಚಿತವಾಗಿದೆ. ಜಿಂಬಾಬ್ವೆ ವಿರುದ್ಧ ಸೀಮಿತ ಓವರ್ ಗಳ ಪಂದ್ಯಗಳನ್ನು ಭಾರತ ಆಡಲಿದ್ದು, ನಾಯಕ ಧೋನಿ ಏನು ಮಾಡುತ್ತಾರೆನ್ನುವುದನ್ನು ಅವರೇ ನಿರ್ಧರಿಸಲಿ, ಅವರ ಮೇಲೆ ವಿಶ್ರಾಂತಿಯ ಒತ್ತಡ ಹೇರುವುದಿಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ಹೇಳಿದ್ದಾರೆ ಎನ್ನಲಾಗಿದೆ.
Comments are closed.