ರಾಷ್ಟ್ರೀಯ

ತಮಿಳುನಾಡಿನಲ್ಲಿ ಈ ಬಾರಿ ಜಯಲಲಿತಾಗೆ ಜನ ಅಧಿಕಾರ ಕೊಡಲು ಕಾರಣ…! ಇಲ್ಲಿದೆ ಓದಿ…

Pinterest LinkedIn Tumblr

jaya

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಕೇವಲ ಆ ರಾಜ್ಯದ ಜನತೆಗಷ್ಟೇ ಅಲ್ಲ, ಇಡೀ ದೇಶದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನ ಅಲಿಖಿತ ಸಂಪ್ರದಾಯದಂತೆ ಒಮ್ಮೆ ಡಿಎಂಕೆ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಎಐಎಡಿಎಂಕೆ ಅಧಿಕಾರಕ್ಕೆ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಸತತ 2ನೇ ಬಾರಿಗೆ ತಮಿಳುನಾಡಿನ ಜನತೆ ಅಮ್ಮ ಅವರ ಕೈ ಹಿಡಿದಿದ್ದಾರೆ. ಇಷ್ಟಕ್ಕೂ ತಮಿಳು ಜನತೆ ತಾವೇ ಹಾಕಿಕೊಂಡಿದ್ದ ಸಂಪ್ರದಾಯ ಮುರಿದು ಜಯಲಲಿತಾ ಅವರ ಎಐಎಡಿಎಂಕೆ ಪಕ್ಷಕ್ಕೆ 2ನೇ ಬಾರಿಗೆ ಅಧಿಕಾರ ನೀಡಿದ್ದೇಕೆ?

1.ಉಚಿತ ಸೇವೆಗಳು
ತಮಿಳುನಾಡಿನ ರಾಜಕೀಯ ಇತಿಹಾಸವನ್ನು ಒಮ್ಮೆ ಕೆದಕಿದರೆ, ಅಲ್ಲಿ ಉಚಿತ ಸೇವೆಗಳ ದೊಡ್ಡ ಇತಿಹಾಸವೇ ತೆರೆದುಕೊಳ್ಳುತ್ತದೆ. ಪ್ರಸ್ತುತ ತಮಿಳುನಾಡು ಚುನಾವಣೆಯಲ್ಲೂ ಇದೇ ಪ್ರಮುಖ ಪಾತ್ರವಹಿಸಿದ್ದು, 10ನೇ ತರಗತಿ ಪಾಸಾದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್, ಮಹಿಳೆಯರಿಗೆ ಚಿನ್ನ, ಉಚಿತ ನೀರು, ಹಾಲು ಮತ್ತು ಸಬ್ಸಿಡಿ ಸಹಿತ ಆಹಾರ ಪದಾರ್ಥಗಳು ಹೀಗೆ ಜಯಾ ಸರ್ಕಾರ ಘೋಷಣೆ ಮಾಡಿದ ಉಚಿತ ಸೇವೆಗಳು ಮತಗಳಿಕೆ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

2.ಮಧ್ಯ ಮಾರಾಟ ನಿಷೇಧಕ್ಕೆ ವ್ಯವಸ್ಥಿತ ಯೋಜನೆ
ತಮಿಳುನಾಡಿನ ಮಹಿಳಾ ಮತದಾರರನ್ನು ಹಿನ್ನಲೆಯಾಗಿಟ್ಟುಕೊಂಡು ಎಐಎಡಿಎಂಕೆ ಸರ್ಕಾರ ಮಧ್ಯಮಾರಾಟ ನಿಷೇಧಕ್ಕೆ ಚಿಂತನೆ ನಡೆಸಿತ್ತಾದರೂ, ಪುರುಷ ಮತಬ್ಯಾಂಕ್ ವಿಭಜನೆಯಾಗುವ ಆತಂಕ ಸರ್ಕಾರವನ್ನು ಕಾಡುತಿತ್ತು. ಹೀಗಾಗಿ ವ್ಯವಸ್ಥಿತ ಯೋಜನೆ ರೂಪಿಸಿದ ಜಯಲಲಿತಾ ಸರ್ಕಾರ ತನ್ನದೇ ಆದ ಸರ್ಕಾರಿ ವೈನ್ ಶಾಪ್ ಗಳನ್ನು ತೆರೆದು ಕಾಳಸಂತೆಯಲ್ಲಿ ಮಧ್ಯಮಾರಾಟವಾಗುವುದನ್ನು ತಪ್ಪಿಸಿತು. ಇದರಿಂದ ದುಬಾರಿ ಬೆಲೆ ನೀಡಿ ಮಧ್ಯ ಸೇವಿಸುತ್ತಿದ್ದ ಮಂದಿ ಕಡಿಮೆ ಬೆಲೆಗೆ ಸರ್ಕಾರ ಅಂಗಡಿಗಳಲ್ಲಿಯೇ ಮಧ್ಯ ಖರೀದಿಗೆ ಮುಂದಾದರು. ಜಯಲಲಿತಾ ಅವರ ಸರ್ಕಾರದ ಈ ಕ್ರಮ ಅತ್ತ ಮಹಿಳಾ ಮತದಾರರಿಗೂ ಮತ್ತು ಇತ್ತ ಕುಡಿತದ ದಾಸರಾಗಿರುವ ಪುರುಷ ಮತದಾರರಿಗೂ ಸಂತುಷ್ಟಿ ನೀಡಿದೆ ಎಂದು ಹೇಳಲಾಗುತ್ತಿದೆ.

3.ಜಯಾ ಕೈ ಹಿಡಿದ ಮಹಿಳಾ ಪರ ಪ್ರಣಾಳಿಕೆ
ಇನ್ನು ತಮಿಳುನಾಡು ಪುರುಷ ಪ್ರಧಾನ ರಾಜ್ಯ ರಾಜಕೀಯದಲ್ಲಿ ಮಹಿಳಾ ಪರ ಅಲೆ ಎದ್ದಿದ್ದೇ ಜಯಲಲಿತಾ ಅವರ ರಾಜಕೀಯ ಪ್ರವೇಶದಿಂದಾಗಿ. ಪುರುಷ ಪ್ರಧಾನ ರಾಜಕೀಯದಲ್ಲಿ ಅವರನ್ನು ಎದುರಿಸಿ ಅಧಿಕಾರ ಹಿಡಿದ ರಾಜ್ಯದ ಪ್ರಭಾವಿ ಮಹಿಳಾ ಸಿಎಂ ಜಯಲಲಿತಾ. ಹೀಗಾಗಿ ತಮಿಳುನಾಡಿನ ಮಹಿಳೆಯರ ಪಾಲಿಗೆ ಜಯಲಲಿತಾ ಐಕಾನ್ ಆಗಿದ್ದರು. ಅಂತೆಯೇ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಮಹಿಳಾ ಪ್ರಧಾನ ಅಂಶಗಳನ್ನೇ ಜಯಲಲಿತಾ ಅವರು ಹೇಳಿದ್ದು, ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು, ಮೊಪೆಡ್ ಗಳ ಮೇಲೆ ಶೇ.50 ರಷ್ಟು ರಿಯಾಯಿತಿ. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್, ಮಿಕ್ಸಿ, ಟಿವಿ ಹಾಗೂ ಮಹಿಳೆಯರಿಗೆ ಚಿನ್ನ, ಯುವಕರಿಗೆ ಉಚಿತ ಆ್ಯಂಡ್ರಾಯ್ಡ್ ಫೋನ್, 10 ಜಿಬಿ ಉಚಿತ ಇಂಟರ್ ನೆಟ್ ನೀಡುವ ಭರವಸೆಗಳನ್ನು ಜಯಲಲಿತಾ ಅವರು ನೀಡಿದ್ದರು. ಇದು ಮಹಿಳಾ ಮತಗಳು ಜಯಾ ಅವರಿಗೆ ಬೀಳುವಂತೆ ಮಾಡಿವೆ ಹೇಳಲಾಗುತ್ತಿದೆ.

4.ಸರ್ಕಾರ ವಿರೋಧಿ ಚಟುವಕೆಗಳೇ ಇಲ್ಲ
ಜಯಲಲಿತಾ ಅವರ ಈ ಹಿಂದಿನ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಯಾವುದೇ ಹಂತದಲ್ಲೂ ತಮಿಳುನಾಡಿನಲ್ಲಿ ಆ್ಯಂಟಿ ಗವರ್ನಮೆಂಟ್ (ಸರ್ಕಾರ ವಿರೋಧಿ) ಪರಿಸ್ಥಿತಿ ಉದ್ಭವಿಸಲೇ ಇಲ್ಲ. ಸ್ವತಃ ಸಿಎಂ ಆಗಿದ್ದ ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಸಂಬಂಧ ಜೈಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಪ್ರತಿಪಕ್ಷ ಡಿಎಂಕೆ ಜಯ ಅವರ ಅನುಪಸ್ಥಿತಿಯ ಲಾಭ ಪಡೆದು ರಾಜ್ಯದಲ್ಲಿ ಸರ್ಕಾರಿ ವಿರೋಧಿ ಅಲೆ ಸೃಷ್ಟಿಸುವ ಪ್ರಯತ್ನ ನಡೆಸಿತ್ತಾದರೂ, ತಾವು ಸರ್ಕಾರದಿಂದ ದೂರ ಉಳಿದಿದ್ದರೂ ತಮ್ಮ ಪರಮಾಪ್ತರನ್ನು ಸಿಎಂ ಗಾದಿಗೇರಿಸುವ ಮೂಲಕ ಜಯ ಹೊರಗಿದ್ದೇ ಸರ್ಕಾರದ ನಡೆಸುತ್ತಿದ್ದರು. ಜಯ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ಆಪ್ತ ಪನ್ನೀರ್ ಸೆಲ್ವಂ ನಾಮಕಾವಾಸ್ತೆ ಸಿಎಂ ಆಗಿದ್ದರೂ, ಪ್ರಮುಖ ನಿರ್ಣಯಗಳನ್ನು ಜಯಲಲಿತಾ ಅವರ ಮೂಲಕವೇ ತೆಗೆದುಕೊಳ್ಳುತ್ತಿದ್ದರು. ಅಲ್ಲದೆ ಸಿಎಂ ಆಗಿದ್ದರೂ ಒಂದೇ ಒಂದು ದಿನಕ್ಕೂ ಪನ್ನೀರ್ ಸೆಲ್ವಂ ಅವರು ಸಿಎಂ ಕುರ್ಚಿಯ ಮೇಲೆ ಕುಳಿತಿರಲಿಲ್ಲ. ಕುರ್ಚಿಯ ಮೇಲೆ ಟವಲ್ ಹಾಕಿ ತಾವು ಬೇರೊಂದು ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದು ಜಯಲಲಿತಾ ಅವರ ಮೇಲೆ ಪನ್ನೀರ್ ಸೆಲ್ವಂ ಗೆ ಇರುವ ಅಪಾರ ಅಭಿಮಾನದ ಪ್ರತೀಕವಾಗಿತ್ತು. ಈ ಎಲ್ಲ ಬೆಳವಣಿಗೆಗಳು ತಮಿಳುನಾಡಿನ ಜನತೆಯ ಮೇಲೆ ಗಂಭೀರ ಪರಿಣಾಮ ಬೀರಿ ಜಯಾ ಅವರ ಮೇಲೆ ವಿಶ್ವಾಸ ಹೆಚ್ಚಲು ಕಾರಣ ಎಂದು ಹೇಳಲಾಗುತ್ತಿದೆ.

5.ಜನರ ವಿಶ್ವಾಸಾರ್ಹತೆ ಗಳಿಸುವಲ್ಲಿ ವಿಫಲವಾದ ಡಿಎಂಕೆ
ಜನರ ವಿಶ್ವಾಸಾರ್ಹತೆ ಗಳಿಸುವಲ್ಲಿ ಎಂ ಕರುಣಾನಿಧಿ ನೇತೃತ್ವದ ಡಿಎಂಕೆ ಪಕ್ಷ ವಿಫಲವಾಗಿದ್ದೇ ಜಯಲಲಿತಾ ಅವರ ಗೆಲುವಿಗೆ ಮತ್ತು ಡಿಎಂಕೆ ಪಕ್ಷದ ಸೋಲಿಗೆ ಪ್ರಮುಖ ಕಾರಣ. ಐದು ವರ್ಷಗಳ ಅಧಿಕಾರ ನಡೆಸಿದ್ದ ಎಐಎಡಿಎಂಕೆ ಅಧಿಕಾರಾವಧಿಯಲ್ಲಿ ಡಿಎಂಕೆ ಪಕ್ಷ ಯಾವುದೇ ಹಂತದಲ್ಲೂ ಪ್ರಬಲ ಪ್ರತಿಪಕ್ಷವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳಲೇ ಇಲ್ಲ. ಪಕ್ಷದಲ್ಲಿನ ಆಂತರಿಕ ಕಚ್ಚಾಟ ಮತ್ತು 90 ವರ್ಷ ದಾಟಿದರೂ ತಾವೇ ಸಿಎಂ ಅಭ್ಯರ್ಥಿ ಎಂದು ಕರುಣಾನಿಧಿ ಅವರು ಘೋಷಿಸಿಕೊಂಡಿದ್ದು, ಡಿಎಂಕೆ ಪಕ್ಷಕ್ಕೆ ಪ್ರಮುಖ ಹಿನ್ನಡೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಡಿಎಂಕೆ ಪಕ್ಷದ ದುರ್ಬಲ ಪ್ರಣಾಳಿಕೆ, ಅತಿಯಾದ ಆಮಿಷಗಳು ಈಡೇರಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಭರವಸೆಗಳನ್ನು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು, ಡಿಎಂಕೆ ಸೋಲಿಗೆ ಕಾರಣ ಎಂದು ಹೇಳಬಹುದು. ಇದಲ್ಲದೆ ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, 2ಜಿ ಹಗರಣ ಕರಿನೆರಳು ಡಿಎಂಕೆ ಸೋಲಿನಲ್ಲಿ ಪಾತ್ರವಹಿಸಿವೆ ಎಂದು ಹೇಳಲಾಗುತ್ತಿದೆ.

6.ತೃತೀಯರಂಗದಿಂದ ಮತಗಳ ವಿಭಜನೆ
ಇನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ್ದ ನಟ ವಿಜಯ್ ಕಾಂತ್ ಅವರ ಡಿಎಂಡಿಕೆ ಪಕ್ಷ ಈ ಬಾರಿಯೂ ಅದೇ ಸಾಧನೆ ಮಾಡುವ ಹುಮ್ಮಸ್ಸು ತೋರಿತ್ತು. ಇದೇ ಕಾರಣಕ್ಕಾಗಿ ತನ್ನ ಈ ಹಿಂದಿನ ಮೈತ್ರೀಕೂಟವನ್ನು ತೊರೆದು ತೃತೀಯ ರಂಗದ ರಚನೆ ಮಾಡಿತ್ತು. ಸಿಪಿಐ, ಸಿಪಿಐಎಂ ಪಕ್ಷಗಳನ್ನೊಳಗೊಂಡಂತೆ ಡಿಎಂಡಿಕೆ ಐದು ಪಕ್ಷಗಳ ಮೈತ್ರೀಕೂಟವನ್ನು ರಚನೆ ಮಾಡಿತ್ತು. ಇದರಿಂದ ಸಾಕಷ್ಟು ಮತಗಳು ವಿಭಜನೆಯಾಗಿದ್ದವು. ಚುನಾವಣೆಯಲ್ಲಿ ಡಿಎಂಡಿಕೆ ನೇತೃತ್ವದ ತೃತೀಯರಂಗ ಒಂದೂ ಸ್ಥಾನ ಗೆಲ್ಲದೇ ನೆಲಕಚ್ಚಿದೆಯಾದರೂ ಮತಗಳಿಕೆ ಪ್ರಮಾಣದಲ್ಲಿ ತೃತೀಯ ಸ್ಥಾನದಲ್ಲಿದೆ. ಹೀಗಾಗಿ ಜಯಲಲಿತಾ ಅವರ ಸಂಪ್ರದಾಯಿಕ ಮತಗಳು ಎಐಎಡಿಎಂಕೆಗೆ ಬಿದ್ದಿದ್ದು, ಆ ಪಕ್ಷ ಗೆಲ್ಲಲು ಸಾಧ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

7.ಎಐಎಡಿಎಂಕೆ ಏಕಾಂಗಿ ಹೋರಾಟ
2016ರ ವಿಧಾನಸಭಾ ಚುನಾವಣೆ ಎಐಡಿಎಂಕೆ ವರ್ಸಸ್ ಡಿಎಂಕೆ ಎನ್ನುವ ಬದಲಿಗೆ ಜಯಲಲಿತಾ ವರ್ಸಸ್ ಡಿಎಂಕೆ ಎಂದಾಗಿತ್ತು. ಚುನಾವಣಾ ಪೂರ್ವದಲ್ಲಿ ಮೈತ್ರಿಕೂಟ ರಚನೆಗೆ ಎಐಎಡಿಎಂಕೆ ನಾಯಕರು ಪ್ರಯತ್ನಿಸಿದ್ದರಾದರೂ ಅಂತಿಮ ಸಮಯದಲ್ಲಿ ಜಯಲಲಿತಾ ಅವರ ಪಕ್ಷ ಏಕಾಂಗಿಯಾಗಿ ಜನತೆ ಮುಂದೆ ಹೋಗಲು ನಿರ್ಧರಿಸಿತು. ಅದೂ ಕೂಡ ಜಯಲಲಿತಾ ಅವರ ಹೆಸರನೊಂದಿಗೆ. ಈ ಹಿಂದೆ ಐದು ವರ್ಷಗಳ ಅಧಿಕಾರವಧಿಯಲ್ಲಿನ ಸರ್ಕಾರದ ಯಶಸ್ಸನ್ನು ಜನತೆಗೆ ಅರ್ಥೈಸುವಲ್ಲಿ ಎಐಎಡಿಎಂಕೆ ಸಫಲವಾಗಿತ್ತು. ಅಲ್ಲದೆ ಸಿಎಂ ಜಯಲಲಿತಾ ಅವರು ಕೂಡ ನಾನೇ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇನೆ ಎಂದು ತಿಳಿದು ಮತನೀಡಿ, ನಿಮ್ಮ ಅಗತ್ಯತೆಗಳನ್ನು ನಾನು ಪೂರೈಸುತ್ತೇನೆ ಎಂಬ ಅವರ ಮಾತುಗಳು ಮತದಾರರ ಮೇಲೆ ಗಂಭೀರ ಪರಿಣಾಮ ಬೀರಿದೆ.

8.ಎಐಎಡಿಎಂಕೆಯ ವಿಶಿಷ್ಠ ಪ್ರಣಾಳಿಕೆ
ಇಡೀ ಚುನಾವಣೆಯಲ್ಲಿ ಗಮನ ಸೆಳೆದ ಪ್ರಮುಖ ಅಂಶವೆಂದರೆ ಅದು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು. ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಜಯಲಲಿತಾ ಹಲವು ಉಚಿಟ ಪದಾರ್ಥಗಳ ಘೋಷಣೆ ಮಾಡಿದ್ದರು. ಟಿವಿ, ಮಿಕ್ಸಿ, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಹೀಗೆ ನಾನಾ ಬಗೆಯ ಭರವಸೆಗಳನ್ನು ಜಯಲಲಿತಾ ಅವರು ನೀಡಿದ್ದರು. ಇಂತಹುದೇ ಇಂತಹುದೇ ಭರವಸೆಗಳನ್ನು ಡಿಎಂಕೆ ಕೂಡ ನೀಡಿತ್ತಾದರೂ, ಇದಕ್ಕಿಂತಲೂ ಮಿಗಿಲಾಗಿ ಜಯಲಲಿತಾ ಅವರು ತಮ್ಮ ಪ್ರಣಾಳಿಕೆಯಲ್ಲಿ ಅಧಿಕಾರಾವಧಿಯ ರಿಪೋರ್ಟ್ ಕಾರ್ಡ್ ಕೂಡ ಸೇರಿಸಿದ್ದರು. ತಾವು ಈ ಹಿಂದಿನ ಚುನಾವಣೆಯಲ್ಲಿ ನೀಡಲಾಗಿದ್ದ ಭರವಸೆಗಳು, ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಈಡೇರಿಸಿದ ಪರಿ ಹಾಗೂ ಅದಕ್ಕಾಗಿ ಹಣ ಎಲ್ಲಿಂದ ತರಲಾಗುತ್ತದೆ ಎಂಬ ವರದಿಯನ್ನು ಪ್ರಣಾಳಿಕೆಯೊಂದಿಗೆ ನೀಡಿದ್ದರು. ಇದು ತಮಿಳುನಾಡಿನ ಜನತೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು.

9.ಅಮ್ಮ ಬ್ರಾಂಡ್
ಜಯಲಲಿತಾ ಅವರ ಅತೀ ದೊಡ್ಡ ಯಶಸ್ಸುಗಳಲ್ಲಿ ಅಮ್ಮ ಬ್ರಾಂಡ್ ಪದಾರ್ಥಗಳು ಕೂಡ ಒಂದು. ಬಡಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಯಲಲಿತಾ ಸರ್ಕಾರ ಮಾಡಿದ ಅಮ್ಮ ಕ್ಯಾಂಟೀನ್, ಅಮ್ಮ ಮಿಲ್ಕ್, ಅಮ್ಮ ವಾಟರ್ ನಂತಹ ಸಾಕಷ್ಟು ಜನಪ್ರಿಯ ಯೋಜನೆಗಳು ಮತದಾರರನ್ನು ಓಲೈಸುವಲ್ಲಿ ಯಶಸ್ವಿಯಾಗಿದೆ.

Comments are closed.