ಕನ್ನಡ ವಾರ್ತೆಗಳು

ಮರುವಾಯಿ ಹೆಕ್ಕಲು ಹೋದ ಇಬ್ಬರ ಪ್ರಾಣ ತೆಗೆದ ಮರಳು ಗುಂಡಿ

Pinterest LinkedIn Tumblr

Two_Brother_drwonwater

ಬಜ್ಪೆ, ಮೇ 20: ಅದ್ಯಪಾಡಿ ಡ್ಯಾಂ ಬಳಿ ಮರುವಾಯಿ ಹೆಕ್ಕಲೆಂದು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ನಿನ್ನೆ  ನಡೆದಿದೆ.

ಮೃತ ದುರ್ದೈವಿಗಳನ್ನು ಮೂಡುಶೆಡ್ಡೆ ಶಿವನಗರ ನಿವಾಸಿಗಳಾದ ಸೋದರರಾದ ಸಂದೀಪ್(28) ಮತ್ತು ಪ್ರದೀಪ್(26) ಎಂದು ಗುರುತಿಸಲಾಗಿದೆ.ನಿನ್ನೆ ನೀರುಪಾಲಾದ ಯುವಕರ ಮೃತದೇಹವು ಇಂದು ಮುಂಜಾನೆ 10 ಗಂಟೆಯ ಸುಮಾರಿಗೆ ಘಟನೆ ನಡೆದ ಪ್ರದೇಶಕ್ಕೆ ಸಮೀಪದಲ್ಲೇ ಪತ್ತೆಯಾಗಿದೆ.

ಘಟನೆಯ ವಿವರ:
ದಕ್ಷಿಣ ಕನ್ನಡ ಜಿಲ್ಲೆ ಬಂದ್ ಹಿನ್ನೆಲೆಯಲ್ಲಿ ಸಂಜೆ 4.30ರ ಸುಮಾರಿಗೆ ಪ್ರದೀಪ್, ಸಂದೀಪ್ ಹಾಗೂ ಇನ್ನೊಬ್ಬ ಡ್ಯಾಂ ಬಳಿ ಮರುವಾಯಿ ಹೆಕ್ಕಲು ಹೋಗಿದ್ದರು. ಸಂದೀಪ್ ಮತ್ತು ಪ್ರದೀಪ್ ಬಟ್ಟೆಬರೆ ದಂಡೆಯಲ್ಲಿ ಕಳಚಿಟ್ಟು ನೀರಿಗಿಳಿದು ಮರುವಾಯಿ ಹೆಕ್ಕುತ್ತಾ ಮುಂದಕ್ಕೆ ಸಾಗುತ್ತಿದ್ದರು. ಅಷ್ಟರಲ್ಲಿ ಏಕಾಏಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾದರು ಎನ್ನಲಾಗಿದೆ. ಅವರಿಬ್ಬರೂ ಕೆಲಹೊತ್ತು ನೀರಿನಿಂದ ಮೇಲಕ್ಕೆ ಬಾರದ ಹಿನ್ನೆಲೆಯಲ್ಲಿ ದಡದಲ್ಲಿದ್ದ ಇನ್ನೊಬ್ಬ ಜೋರಾಗಿ ಬೊಬ್ಬೆ ಹೊಡೆದಿದ್ದಾನೆ. ಅಷ್ಟರಲ್ಲಿ ಸ್ಥಳೀಯರು ಸೇರಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.

ಕಾವೂರು ಮತ್ತು ಬಜ್ಪೆ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ರಾತ್ರಿಯಿಡೀ ಮೃತದೇಹಗಳಿಗಾಗಿ ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಇಂದು ಮುಂಜಾನೆ ಇಬ್ಬರ ಮೃತದೇಹಗಳೂ ಪತ್ತೆಯಾಗಿದ್ದು, ಬಜ್ಪೆ ಠಾಣಾಧಿಕಾರಿ ರಮೇಶ್ ಹಾನಾಪುರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಗುರುಪುರ ಫಲ್ಗುಣಿ ನದಿಯಲ್ಲಿ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಮರಳು ತೆಗೆದ ಜಾಗದಲ್ಲಿ ಆಳವಾದ ಗುಂಡಿ(ಕುಳಿ) ಹಾಗೆಯೇ ಉಳಿದುಬಿಡುತ್ತದೆ. ಈ ಗುಂಡಿ ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ನೀರಿನಲ್ಲಿ ಮುಳುಗಿದ ವೇಳೆ ಈ ಕುಳಿಗಳಲ್ಲಿನ ಸುಳಿ ಆಳಕ್ಕೆ ಎಳೆಯುವ ಕಾರಣ ಅನಾಹುತ ಸಂಭವಿಸುತ್ತದೆ. ಇದೇ ರೀತಿ ನದಿ ನೀರಿಗಿಳಿದ ಅನೇಕ ಮಂದಿ ದಾರುಣ ಸಾವನ್ನಪ್ಪುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ಪ್ರದೀಪ್ ಹಾಗೂ ಸಂದೀಪ್ ಉತ್ತಮ ಈಜುಪಟುವಾಗಿದ್ದು, ಆಗಾಗ ಮರುವಾಯಿ ಹೆಕ್ಕಲು ತೆರಳುತ್ತಿದ್ದರು. ಆದರೆ ನಿನ್ನೆಯ ದಿನ ಮರುವಾಯಿ ಹೆಕ್ಕಿ ತರುತ್ತೇವೆ ಎಂದು ಮನೆಯಿಂದ ತೆರಳಿದ್ದ ಸೋದರರ ಅನಿರೀಕ್ಷಿತ ಸಾವು ಮನೆಮಂದಿಯನ್ನು ಶೋಕದಲ್ಲಿ ಮುಳುಗಿಸಿದೆ.

Comments are closed.