ರಾಷ್ಟ್ರೀಯ

ಕೇರಳದ ಮುಖ್ಯಮಂತ್ರಿ ಸ್ಥಾನಕ್ಕೆ ಪಿಣರಾಯಿ ವಿಜಯನ್

Pinterest LinkedIn Tumblr

pinarayi_vijayan

ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಸ್ಥಾನಕ್ಕೆ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಪಿಣರಾಯಿ ವಿಜಯನ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಶುಕ್ರವಾರ ಬೆಳಗ್ಗೆ ಸಿಪಿಐ (ಎಂ) ಕೇರಳ ರಾಜ್ಯ ಸದಸ್ಯರ ಸಭೆ ಸೇರಿತ್ತು. ಈ ಸಭೆಯಲ್ಲಿ ಪಿಣರಾಯಿ ವಿಜಯನ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸಿಪಿಎಂ ಮೂಲಗಳು ಹೇಳಿವೆ.

ಪ್ರಸ್ತುತ ಸಭೆಯಲ್ಲಿ ಸಿಪಿಎಂ ಜನರಲ್ ಸೆಕ್ರಟರಿ ಸೀತಾರಾಂ ಯೆಚೂರಿ ಮತ್ತು ಪಾಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಾಟ್ ಉಪಸ್ಥಿತರಿದ್ದರು. ಮುಖ್ಯಮಂತ್ರಿ ಗಾದಿಗೆ ವಿಎಸ್ ಅಚ್ಯುತಾನಂದನ್ ಮತ್ತು ಪಿಣರಾಯಿ ವಿಜಯನ್ ಅವರ ಹೆಸರು ಕೇಳಿ ಬಂದಿದ್ದರೂ ಕೇರಳದ ಮುಖ್ಯಮಂತ್ರಿ ಸ್ಥಾನ ಪಿಣರಾಯಿ ವಿಜಯನ್‌ಗೆ ಒಲಿಯುವ ಸಾಧ್ಯತೆಯೇ ಹೆಚ್ಚಿತ್ತು.

ಇದೀಗ ನಿರ್ಣಾಯಕ ಸಭೆಯಲ್ಲಿ ಪಿಣರಾಯಿ ವಿಜಯನ್ ರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದು, ಈ ಆಯ್ಕೆಗೆ ಅಚ್ಯುತಾನಂದನ್ ಸಹಮತ ಸೂಚಿಸಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ. ಅದೇ ವೇಳೆ ಎಲ್‌ಡಿಎಫ್‌ನ್ನ ನೇತೃತ್ವ ವಹಿಸಿ, ಚುನಾವಣೆ ಗೆದ್ದಿರುವ ಹಿರಿಯ ನೇತಾರ, ಕೇರಳದ ಮಾಜಿ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಅವರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನವನ್ನು ನೀಡಲು ತೀರ್ಮಾನಿಸಲಾಗಿದೆ.

ಮಧ್ಯಾಹ್ನ ನಂತರ ಸಿಪಿಐ (ಎಂ) ರಾಜ್ಯ ಸಮಿತಿ ಇನ್ನೊಂದು ಸಭೆ ಸೇರಿದ ನಂತರ ರಾಜ್ಯ ಕಾರ್ಯದರ್ಶಿಯವರ ತೀರ್ಮಾನವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಮೂಲಗಳು ಹೇಳಿವೆ.

Comments are closed.