ಮನೋರಂಜನೆ

ಪುಣೆ ವಿರುದ್ಧ ಸೋತು ಸಂಕಷ್ಟಕ್ಕೆ ಸಿಲುಕಿದ ಡೇರ್‌ಡೆವಿಲ್ಸ್‌ ! ಪ್ಲೇ ಆಫ್‌ ಹಾದಿ ಕಠಿಣ

Pinterest LinkedIn Tumblr

dinda

ವಿಶಾಖಪಟ್ಟಣ : ಬಿಗುವಿನ ದಾಳಿಯ ಮೂಲಕ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ್ದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ಮಂಗಳ ವಾರದ ಐಪಿಎಲ್‌ ಪಂದ್ಯದಲ್ಲಿ 19 ರನ್‌ಗಳ ಗೆಲುವು ಒಲಿಯಿತು. ಪ್ಲೇ ಆಫ್‌ ಪ್ರವೇಶಿಸುವ ನಿಟ್ಟಿನಲ್ಲಿ ಮಹತ್ವದೆನಿಸಿದ್ದ ಪಂದ್ಯದಲ್ಲಿ ಸೋಲು ಕಂಡ ಕಾರಣ ಡೆಲ್ಲಿ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಾಯಿತು.

ಆ್ಯಡಮ್‌ ಜಂಪಾ (21ಕ್ಕೆ3) ಮತ್ತು ಅಶೋಕ್‌ ದಿಂಡಾ (20ಕ್ಕೆ3) ಚುರುಕಿನ ಬೌಲಿಂಗ್ ಮಾಡಿ ಡೆಲ್ಲಿ ತಂಡವನ್ನು 121 ರನ್‌ಗೆ ಕಟ್ಟಿ ಹಾಕಿದರು.

ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ರೈಸಿಂಗ್ ತಂಡಕ್ಕೆ ಪದೇ ಪದೇ ಮಳೆ ಕಾಡಿತು. ಈ ತಂಡ 11 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದ್ದ ವೇಳೆ ಮಳೆ ಸುರಿಯಿತು. ರಾತ್ರಿ 11.50 ಆದರೂ ಮಳೆ ನಿಲ್ಲಲಿಲ್ಲ.

ಆದ್ದರಿಂದ ಡಕ್ವರ್ಥ್‌್ ಲೂಯಿಸ್‌ ನಿಯಮದ ಅನ್ವಯ ಫಲಿತಾಂಶ ವನ್ನು ನಿರ್ಧರಿಸಲಾಯಿತು. ಪುಣೆ ತಂಡದ ಅಜಿಂಕ್ಯ ರಹಾನೆ (ಔಟಾಗದೆ 42, 36ಎಸೆತ, 5 ಬೌಂಡರಿ, 1 ಸಿಕ್ಸರ್‌) ವೇಗವಾಗಿ ರನ್ ಕಲೆ ಹಾಕಿ ಉತ್ತಮ ರನ್‌ರೇಟ್‌ಗೆ ಕಾರಣರಾದರು.

ಪ್ಲೇ ಆಫ್‌ ಹಂತ ಪ್ರವೇಶಿಸುವ ಪೈಪೋಟಿಯಿಂದ ಪುಣೆ ಈಗಾಗಲೇ ಹೊರಬಿದ್ದಿರುವ ಕಾರಣ ಈ ಗೆಲುವು ಹೆಚ್ಚು ಖುಷಿಕೊಡಲಿಲ್ಲ.
ಡೆಲ್ಲಿ ತಂಡದ ಉತ್ತಮ ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್ (2 ರನ್) ಮತ್ತು ಶ್ರೇಯಸ್ ಅಯ್ಯರ್ (8ರನ್) ಅವರ ವಿಕೆಟ್‌ಗಳನ್ನು ಬೇಗನೆ ಕಬಳಿಸಿದ ದಿಂಡಾ ಪುಣೆ ತಂಡದ ಉತ್ಸಾಹ ಹೆಚ್ಚಿಸಿದರು.

ನಂತರ ಬಂದ ಕರ್ನಾಟಕದ ಕರುಣ್ ನಾಯರ್ (41 ರನ್) ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಬಲ ಮೆರೆದರು. ಸಂಜು ಸ್ಯಾಮ್ಸನ್ ಮತ್ತು ಜೆ.ಪಿ. ಡುಮಿನಿ ಅಲ್ಪ ಕಾಣಿಕೆ ನೀಡಿದರು. ಆದರೆ, ಲೆಗ್‌ಸ್ಪಿನ್ನರ್ ಆ್ಯಡಮ್ ಜಂಪಾ ಅವರ ದಾಳಿಗೆ ಸ್ಯಾಮ್ಸನ್ ಮತ್ತು ಡುಮಿನಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಸಂಕ್ಷಿಪ್ತ ಸ್ಕೋರು: ಡೆಲ್ಲಿ ಡೇರ್‌ಡೆವಿಲ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 121 (ಕರುಣ್ ನಾಯರ್ 41, ಕ್ರಿಸ್ ಮೊರಿಸ್ 38, ಅಶೋಕ್ ದಿಂಡಾ 20ಕ್ಕೆ3, ಆ್ಯಡಂ ಜಂಪಾ 21ಕ್ಕೆ3).

ರೈಸಿಂಗ್ ಪುಣೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 76 (ಅಜಿಂಕ್ಯ ರಹಾನೆ ಔಟಾಗದೆ 42, ಉಸ್ಮಾನ್‌ ಕವಾಜ 19; ಕ್ರಿಸ್‌ ಮಾರಿಸ್‌ 12ಕ್ಕೆ1).

ಫಲಿತಾಂಶ: ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ ರೈಸಿಂಗ್ ಪುಣೆ ತಂಡಕ್ಕೆ 19 ರನ್ ಜಯ.
ಪಂದ್ಯ ಶ್ರೇಷ್ಠ: ಅಶೋಕ್‌ ದಿಂಡಾ.

Comments are closed.