ಕರ್ನಾಟಕ

ಚಲನಚಿತ್ರ ಪ್ರಶಸ್ತಿ: ವಿಜಯ್ ರಾಘವೇಂದ್ರ, ಮಾಲಾಶ್ರೀ ಶ್ರೇಷ್ಠ ನಟ, ನಟಿ; ‘ತಿಥಿ’ ಪ್ರಥಮ ಅತ್ಯುತ್ತಮ ಚಿತ್ರ

Pinterest LinkedIn Tumblr

vijaya-mala

ಬೆಂಗಳೂರು: 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ರಾಮ್ ರೆಡ್ಡಿ ನಿರ್ದೇಶನದ ‘ತಿಥಿ’ ಪ್ರಥಮ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿ ಪಡೆದಿದೆ. ಕೆ. ಶಿವರುದ್ರಯ್ಯ ನಿರ್ದೇಶನದ ‘ಮಾರಿಕೊಂಡವರು’ ದ್ವಿತೀಯ ಹಾಗೂ ಬಿ.ಎಂ.ಗಿರಿರಾಜ್ ನಿರ್ದೇಶನದ ‘ಮೈತ್ರಿ’ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ.

ಪ್ರಥಮ ಅತ್ಯುತ್ತಮ ಚಿತ್ರದ ನಿರ್ಮಾಪಕ– ನಿರ್ದೇಶಕರಿಗೆ ತಲಾ ಒಂದು ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕ, ದ್ವಿತೀಯ ಚಿತ್ರದ ನಿರ್ಮಾಪಕ– ನಿರ್ದೇಶಕರಿಗೆ ತಲಾ 75,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಮತ್ತು ತೃತೀಯ ಅತ್ಯುತ್ತಮ ಚಿತ್ರದ ನಿರ್ಮಾಪಕ– ನಿರ್ದೇಶಕರಿಗೆ ತಲಾ 50,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ದೊರೆಯಲಿದೆ. ವೈಯಕ್ತಿಕ ವಿಭಾಗದ ಪ್ರಶಸ್ತಿಗಳಿಗೆ ತಲಾ 20,000 ನಗದು ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಲಾಗುವುದು.

‘ಶಿವಯೋಗಿ ಶ್ರೀ ಪುಟ್ಟಯ್ಯಜ್ಜ’ ಚಿತ್ರದ ಅಭಿನಯಕ್ಕಾಗಿ ವಿಜಯ್ ರಾಘವೇಂದ್ರ ಅತ್ಯುತ್ತಮ ನಟ ಹಾಗೂ ‘ಗಂಗಾ’ ಚಿತ್ರದಲ್ಲಿನ ನಟನೆಗಾಗಿ ಮಾಲಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಒಟ್ಟು 25 ವಿಭಾಗಗಳಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.

ಹಿರಿಯ ನಿರ್ದೇಶಕ ನಾಗಣ್ಣ ನೇತೃತ್ವದಲ್ಲಿ ರಚಿಸಿದ್ದ ಒಂಬತ್ತು ಸದಸ್ಯರ ಸಮಿತಿಯು ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದು, ವಾರ್ತಾ ಸಚಿವ ಆರ್. ರೋಷನ್ ಬೇಗ್ ಮಂಗಳವಾರ ಇಲ್ಲಿ ವಿವರಗಳನ್ನು ಪ್ರಕಟಿಸಿದರು. ಸಮಿತಿಯು ಒಟ್ಟು 98 ಚಿತ್ರಗಳನ್ನು ವೀಕ್ಷಿಸಿ, ಈ ಆಯ್ಕೆ ಮಾಡಿದೆ.

ಜೀವಮಾನ ಸಾಧನೆ ಪ್ರಶಸ್ತಿಗೆ ಪ್ರತ್ಯೇಕ ಸಮಿತಿ
ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ಸಲ್ಲಿಸಿದವರಿಗೆ ಜೀವಮಾನ ಸಾಧನೆಗಾಗಿ ನೀಡುವ ಡಾ. ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿ ಆಯ್ಕೆಗೆ ಸಮಿತಿಯೊಂದನ್ನು ರಚಿಸಲಾಗಿದೆ.

‘ಹಿರಿಯ ನಿರ್ದೇಶಕ ಭಗವಾನ್ ನೇತೃತ್ವದ ಸಮಿತಿಯು ಈ ಮೂರು ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡಲಿದೆ. ಇಷ್ಟರಲ್ಲೇ ಆ ಪ್ರಶಸ್ತಿಗಳನ್ನೂ ಪ್ರಕಟಿಸಲಾಗುವುದು’ ಎಂದು ಸಚಿವರು ತಿಳಿಸಿದರು. ಈವರೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಜತೆಗೇ ಈ ಮೂರು ಮಹತ್ವದ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತಿತ್ತು.

ಈ ಖುಷಿ ನಿಜಕ್ಕೂ ಭಿನ್ನ
ಬೆಂಗಳೂರು: ವಿದೇಶಗಳಲ್ಲಿ ಪ್ರಶಸ್ತಿ ಪಡೆದಿದ್ದರೂ ರಾಜ್ಯ ಪ್ರಶಸ್ತಿ ಬಗ್ಗೆ ನಿರೀಕ್ಷೆ ಇರಲಿಲ್ಲ. ಯಾಕೆಂದರೆ ಪ್ರತಿ ತೀರ್ಪುಗಾರರ ಅಭಿರುಚಿಯೂ ಬೇರೆಯೇ ಆಗಿರುತ್ತದೆ. ಆದರೆ ಈಗ ಪ್ರಶಸ್ತಿ ಬಂದಿದ್ದರಿಂದ ಖುಷಿಯಂತೂ ಆಗಿದೆ. ಸದ್ಯ ಸಿನಿಮಾ ಚಿತ್ರಮಂದಿರಗಳಲ್ಲಿದೆ.

** ** **
ಅದೇ ಸಂದರ್ಭದಲ್ಲಿ ಈ ಪ್ರಶಸ್ತಿ ಬಂದಿದ್ದು ಜನರಿಗೆ ಸಿನಿಮಾ ತಲುಪಲು ಇನ್ನಷ್ಟು ಸಹಾಯ ಆಗಬಹುದು. ಇದು ಬೇರೆ ದೇಶಗಳಲ್ಲಿ ಸಿಕ್ಕ ಹತ್ತು ಪ್ರಶಸ್ತಿಗಳಂತೆ ಅಲ್ಲ. ಈ ಖುಷಿ ನಿಜಕ್ಕೂ ಭಿನ್ನ. ಈ ಸಿನಿಮಾ ಹುಟ್ಟಿದ್ದು ಕರ್ನಾಟಕದಲ್ಲಿ. ಹಾಗಾಗಿ ಇಲ್ಲಿನ ಪ್ರೇಕ್ಷಕ ಸಂತಸದಿಂದ ಸಿನಿಮಾ ಒಪ್ಪಿಕೊಂಡ ಸಂಭ್ರಮ ಈ ಪ್ರಶಸ್ತಿಯಲ್ಲಿದೆ.
-ರಾಮ್ ರೆಡ್ಡಿ, ‘ತಿಥಿ’ ನಿರ್ದೇಶಕ

** ** **
ಅಚ್ಚರಿ ಹಾಗೂ ಖುಷಿ ಎರಡೂ ಆಗಿದೆ. ಜನರು ನನ್ನನ್ನು ನಂಬಿ, ಕೊಟ್ಟಿರುವ ಕೊಡುಗೆಗೆ ಈ ಪ್ರಶಸ್ತಿ ಇನ್ನೊಂದು ಸೇರ್ಪಡೆ. ಈ ಸಿನಿಮಾದ ಚಿತ್ರೀಕರಣ ಆರಂಭದ ದಿನದಿಂದ ತೆರೆ ಕಾಣುವವರೆಗೆ ಪುಟ್ಟರಾಜ ಗವಾಯಿಗಳ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡಿದ್ದೆ. ಈಗ ಈ ಚಿತ್ರದ ಅಭಿನಯಕ್ಕೆ ಪ್ರಶಸ್ತಿ ಬಂದಿರುವುದಕ್ಕೆ ಗವಾಯಿಗಳ ಆಶೀರ್ವಾದವೇ ಕಾರಣ ಎಂದು ನಾನು ನಂಬಿದ್ದೇನೆ.
-ವಿಜಯ್ ರಾಘವೇಂದ್ರ, ಅತ್ಯುತ್ತಮ ನಟ (ಶಿವಯೋಗಿ ಶ್ರೀ ಪುಟ್ಟಯ್ಯಜ್ಜ)

** ** **
ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷಗಳಾದ ನಂತರ ರಾಜ್ಯ ಪ್ರಶಸ್ತಿ ಬಂದಿದೆ. ತುಂಬಾ ಖುಷಿಯಾಗಿದೆ. ನಾನು ಜನರ ಪ್ರೀತಿ–ಆಶೀರ್ವಾದವೇ ಪ್ರಶಸ್ತಿ ಅಂದುಕೊಂಡವಳು. ಆದರೆ ಈಗ ಈ ಪ್ರಶಸ್ತಿ ಬಂದಿದ್ದರಿಂದ ನನಗೆ ಇನ್ನೂ ಹೆಚ್ಚಿನದನ್ನು ಸಾಧಿಸಲು, ಭಿನ್ನ ಪಾತ್ರಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ಸಿಕ್ಕಂತಾಗಿದೆ.
-ಮಾಲಾಶ್ರೀ, ಅತ್ಯುತ್ತಮ ನಟಿ (ಗಂಗಾ)

** ** **
ಪ್ರಶಸ್ತಿಗಳ ವಿವರ:
ಮೊದಲನೇ ಅತ್ಯುತ್ತಮ ಚಿತ್ರ: ತಿಥಿ
ಎರಡನೇ ಅತ್ಯುತ್ತಮ ಚಿತ್ರ: ಮಾರಿಕೊಂಡವರು
ಮೂರನೇ ಅತ್ಯುತ್ತಮ ಚಿತ್ರ: ಮೈತ್ರಿ

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಶಿವಯೋಗಿ ಶ್ರೀ ಪುಟ್ಟಯ್ಯಜ್ಜ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕೃಷ್ಣ ಲೀಲಾ
ಅತ್ಯುತ್ತಮ ಮಕ್ಕಳ ಚಿತ್ರ: ಮನೆ ಮೊದಲ ಪಾಠಶಾಲೆ
ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ರಂಗಿತರಂಗ
ಅತ್ಯುತ್ತಮ ಪ್ರಾದೇಶಿಕ ಚಿತ್ರ: ತಳಂಗ ನೀರ್ (ಕೊಡವ ಭಾಷೆ)

ಅತ್ಯುತ್ತಮ ನಟ: ವಿಜಯ್ ರಾಘವೇಂದ್ರ (ಶಿವಯೋಗಿ ಶ್ರೀ ಪುಟ್ಟಯ್ಯಜ್ಜ)
ಅತ್ಯುತ್ತಮ ನಟಿ: ಮಾಲಾಶ್ರೀ (ಗಂಗಾ)
ಅತ್ಯುತ್ತಮ ಪೋಷಕ ನಟ: ರಮೇಶ ಭಟ್ (ಮನ ಮಂಥನ)
ಅತ್ಯುತ್ತಮ ಪೋಷಕ ನಟಿ: ಪೂಜಾ ಎಸ್.ಎಂ. (ತಿಥಿ)

ಅತ್ಯುತ್ತಮ ಕತೆ: ಸರಜೂ ಕಾಟ್ಕರ್ (ಜುಲೈ 22, 1947)
ಅತ್ಯುತ್ತಮ ಚಿತ್ರಕತೆ: ಶಶಾಂಕ್, ರಘು ಕೋವಿ (ಕೃಷ್ಣ ಲೀಲಾ)
ಅತ್ಯುತ್ತಮ ಸಂಭಾಷಣೆ: ಈರೇಗೌಡ (ತಿಥಿ)
ಅತ್ಯುತ್ತಮ ಛಾಯಾಗ್ರಹಣ: ಅನಂತ ಅರಸು (ಲಾಸ್ಟ್ ಬಸ್)
ಅತ್ಯುತ್ತಮ ಸಂಗೀತ ನಿರ್ದೇಶನ: ಶ್ರೀಧರ್ ವಿ. ಸಂಭ್ರಮ್ (ಕೃಷ್ಣ ಲೀಲಾ)
ಅತ್ಯುತ್ತಮ ಸಂಕಲನ: ಸೃಜಿತ್ ನಾಯಕ್ (ಚಂಡಿಕೋರಿ– ತುಳು ಚಿತ್ರ)

ಅತ್ಯುತ್ತಮ ಬಾಲನಟ: ಲಿಖಿತ್ ಶರ್ಮಾ (ಅಷ್ಟಾವಕ್ರ)
ಅತ್ಯುತ್ತಮ ಬಾಲನಟಿ: ಮೇವಿಷ್ (ಸವಿ ನಿಲಯ)
ಅತ್ಯುತ್ತಮ ಕಲಾ ನಿರ್ದೇಶನ: ಅವಿನಾಶ್ ನರಸಿಂಹರಾಜು (ಲಾಸ್ಟ್ ಬಸ್)

ಅತ್ಯುತ್ತಮ ಗೀತರಚನೆ: ನಾಗೇಂದ್ರ ಪ್ರಸಾದ್ (ಮುದ್ದು ಮನಸೇ)
ಅತ್ಯುತ್ತಮ ಹಿನ್ನೆಲೆ ಗಾಯಕ: ಸಂತೋಷ್ ವೆಂಕಿ (ಪ್ರೀತಿಯಲ್ಲಿ ಸಹಜ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಡಾ. ಶಮಿತಾ ಮಲ್ನಾಡ್ (ಬೆಕ್ಕು)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಜೂಪಿಟರ್ ಅನಿಮೇಶನ್ (ಶಿವಲಿಂಗ)

Comments are closed.