ರಾಷ್ಟ್ರೀಯ

ಪತ್ರಕರ್ತರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ; ಭಾರತಕ್ಕೆ 3ನೇ ಸ್ಥಾನ

Pinterest LinkedIn Tumblr

journalist

ನವದೆಹಲಿ: ಪತ್ರಕರ್ತರ ಪಾಲಿಗೆ ಭಾರತ ಸೇಫ್ ಅಲ್ಲ ಎಂದು ನೂತನ ಸಮೀಕ್ಷಾ ವರದಿ ಹೇಳುತ್ತಿದ್ದು, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕಿಂತಲೂ ಭಾರತದಲ್ಲಿ ಹೆಚ್ಚು ಮಂದಿ ಪತ್ರಕರ್ತರು ಸಾವಿಗೀಡಾಗುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.

ಪತ್ರಕರ್ತರ ಸಾವಿನ ಕುರಿತಂತೆ 2015ರ ಅಂತಾರಾಷ್ಟ್ರೀಯ ವರದಿ ಬಿಡುಗಡೆಯಾಗಿದ್ದು, ವರದಿಯಲ್ಲಿ ಭಾರತಕ್ಕೆ 3ನೇ ಅತ್ಯಂತ ಅಪಾಯಕಾರಿ ದೇಶ ಎಂದು ಹೇಳಲಾಗಿದೆ. ಭಾರತೀಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಇಲ್ಲ. ಇದರಿಂದಾಗಿ ಭಾರತದಲ್ಲಿ ಪತ್ರಕರ್ತರ ಹತ್ಯೆ ಅಧಿಕವಾಗುತ್ತಿದೆ ಎಂದು 2015ರ ಅಂತಾರಾಷ್ಟ್ರೀಯ ವರದಿ ತಿಳಿಸಿದೆ.

ಇತ್ತೀಚೆಗಷ್ಟೇ ಕೇವಲ 24 ಗಂಟೆಗಳ ಅವಧಿಯಲ್ಲಿ ಬಿಹಾರ ಮೂಲದ ರಾಜ್ದೇವ್ ರಂಜನ್ ಹಾಗೂ ಜಾರ್ಖಂಡ್ ಮೂಲದ ಅಖಿಲೇಶ್ ಪ್ರತಾಪ್ ಎಂಬ ಪತ್ರಕರ್ತರ ಕೊಲೆಯಿಂದಾಗಿ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಈ ಪ್ರಕರಣಗಳಿಂದಾಗಿ ದೇಶದಲ್ಲಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಇದೀಗ 2015ರ ಅಂತಾರಾಷ್ಟ್ರೀಯ ವರದಿ ಬಹಿರಂಗವಾಗಿದ್ದು, ಭಾರತೀಯ ಪತ್ರಕರ್ತರಿಗೆ ರಕ್ಷಣೆ ಇಲ್ಲ ಎಂದು ಹೇಳಿದೆ.

ಈ ವಿಚಾರದಲ್ಲಿ ಭಾರತಕ್ಕಿಂತಲೂ ಇರಾಕ್ ಹಾಗೂ ಸಿರಿಯಾ ದೇಶಗಳು ಹೆಚ್ಚು ಅಪಾಯಕಾರಿಯಾಗಿದ್ದು, ಮೊದಲೆರಡು ಸ್ಥಾನವನ್ನು ಈ ಎರಡು ದೇಶಗಳು ಅಲಂಕರಿಸಿದರೆ, ಭಾರತ ಮೂರನೇ ಸ್ಥಾನದಲ್ಲಿದೆ. ಉಗ್ರರ ಕಪಿಮುಷ್ಟಿಯಲ್ಲಿ ಸಿಲುಕಿರುವ ಇರಾಕ್ ಹಾಗೂ ಸಿರಿಯಾದಲ್ಲಿ ಪತ್ರಕರ್ತರನ್ನು ನಡು ಬೀದಿಯಲ್ಲಿ ವಿನಾ ಕಾರಣ ಕೊಲೆಗೈಯಲಾಗುತ್ತದೆ.

ಭಾರತದಲ್ಲಿ 1992ರಿಂದ ಇಲ್ಲಿಯವರೆಗೆ ಬರೋಬ್ಬರಿ 64 ಪತ್ರಕರ್ತರ ಕೊಲೆ ಮಾಡಲಾಗಿದ್ದು, ಬಹುತೇಕ ಪತ್ರಕರ್ತರು ಭ್ರಷ್ಟಾಚಾರ ಪ್ರಕರಣಗಳನ್ನು ಭೇದಿಸಲು ಹೋಗುವ ಮೂಲಕ ಸಾವಿಗೆ ಕೊರಳಡ್ಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಹಿಂದೆ ರಾಜಕಾರಣಿಗಳು ಹಾಗೂ ಉದ್ಯಮಿಗಳ ಕುಮ್ಮಕ್ಕಿದೆ ಎಂದು ವರದಿ ತಿಳಿಸಿದೆ. ಪತ್ರಕರ್ತರ ಹತ್ಯೆ ವಿಚಾರದಲ್ಲಿ ಭಾರತ ಏಷ್ಯಾದಲ್ಲೇ ನಂಬರ್ 1 ಸ್ಥಾನದಲ್ಲಿದ್ದು, ಭಾರತದಲ್ಲಿ ಸಾವಿಗೀಡಾದ ಪತ್ರಕರ್ತರ ಪೈಕಿ ಶೇ 96ರಷ್ಟು ಪತ್ರಕರ್ತರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಪತ್ರಕರ್ತ ಹತ್ಯೆ ಪ್ರಮಾಣ ಭಾರತಕ್ಕಿಂತ ಕಡಿಮೆಯಂತೆ.

Write A Comment