ಮನೋರಂಜನೆ

ಡಿವಿಲಿಯರ್ಸ್‌-ವಿರಾಟ್‌ಕೊಹ್ಲಿ ಸೃಷ್ಟಿಸಿದ ರನ್‌ನ ಅಲೆಯಲ್ಲಿ ಕೊಚ್ಚಿ ಹೋದ ಗುಜರಾತ್‌ಲಯನ್ಸ್‌! ಆರ್‌ಸಿಬಿಗೆ 144 ರನ್​ಗಳ ಭರ್ಜರಿ ಜಯ

Pinterest LinkedIn Tumblr

3

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಲಯನ್ಸ್ ವಿರುದ್ಧ 144 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಆ ಮೂಲಕ ಅತೀ ಹೆಚ್ಚು ಅಂತರದಿಂದ ಜಯ ಗಳಿಸಿದ ದಾಖಲೆ ಬರೆಯಿತು.

ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಶನಿವಾರ ಡಿವಿಲಿಯರ್ಸ್‌ಮತ್ತು ವಿರಾಟ್‌ಕೊಹ್ಲಿ ಅವರು ಸೃಷ್ಟಿಸಿದ ರನ್‌ಅಲೆಯಲ್ಲಿ ಗುಜರಾತ್‌ಲಯನ್ಸ್‌ತಂಡ ಕೊಚ್ಚಿ ಹೋಯಿತು.

ab-de-villiers-virat-kohli

3333333

2

1

ಸಿಡಿಲಬ್ಬರದ ಆಟದ ಮೂಲಕ ಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆಗೂ ಅಟ್ಟಿದ ಈ ಜೋಡಿ ಚುಟುಕು ಮಾದರಿಯಲ್ಲಿ ದಾಖಲೆಗಳ ಸೌಧ ನಿರ್ಮಿಸಿತು. ಇವರಿಬ್ಬರು ಸುರಿಸಿದ ರನ್‌ಮಳೆಯಲ್ಲಿ ಉದ್ಯಾನ ನಗರಿಯ ಅಭಿಮಾನಿಗಳು ಅಕ್ಷರಶಃ ತೋಯ್ದು ಹೋದರು.

ಪರಿಣಾಮ ಐಪಿಎಲ್‌ಒಂಬತ್ತನೇ ಆವೃತ್ತಿಯ ತನ್ನ 11ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ಬೆಂಗಳೂರು ತಂಡ ಗುಜರಾತ್ ಲಯನ್ಸ್‌ವಿರುದ್ಧ 144ರನ್‌ಗಳ ಭರ್ಜರಿ ಗೆಲುವು ಗಳಿಸಿತು. ಇದರೊಂದಿಗೆ ಈ ಬಾರಿ ‘ಪ್ಲೇ ಆಫ್‌’ ಪ್ರವೇಶಿಸಲು ನಡೆಯುತ್ತಿರುವ ಸ್ಪರ್ಧೆಯಲ್ಲಿ ಉಳಿದುಕೊಂಡಿತು.
ಟಾಸ್‌ಗೆದ್ದ ಲಯನ್ಸ್‌ತಂಡದ ನಾಯಕ ಬ್ರೆಂಡನ್‌ಮೆಕ್ಲಮ್‌ ಎದುರಾಳಿಗಳನ್ನು ಬೇಗನೆ ಕಟ್ಟಿಹಾಕುವ ಲೆಕ್ಕಾಚಾರದೊಂದಿಗೆ ಫೀಲ್ಡಿಂಗ್‌ಮಾಡಲು ನಿರ್ಧರಿಸಿದರು. ಆದರೆ ಕೊಹ್ಲಿ ಮತ್ತು ಡಿವಿಲಿಯರ್ಸ್‌ದಾಖಲೆಯ ಜತೆಯಾಟವಾಡುವ ಮೂಲಕ ಎದುರಾಳಿ ನಾಯಕನ ನಿರ್ಧಾರವನ್ನು ತಲೆಕೆಳಗಾಗಿಸಿದರು.

ಇವರಿಬ್ಬರ ಸ್ಫೋಟಕ ಆಟದಿಂದಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 248ರನ್‌ಗಳ ಬೃಹತ್‌ಮೊತ್ತ ಪೇರಿಸಿತು. ಲಯನ್ಸ್‌18.4 ಓವರ್‌ಗಳಲ್ಲಿ 104ರನ್‌ಗಳಿಗೆ ಆಲೌಟ್‌ಆಯಿತು.

ಮತ್ತೆ ಕೈಕೊಟ್ಟ ಗೇಲ್‌: ಬ್ಯಾಟಿಂಗ್‌ಆರಂಭಿಸಿದ ಬೆಂಗಳೂರಿನ ತಂಡಕ್ಕೆ ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಕ್ರಿಸ್‌ಗೇಲ್‌ಮತ್ತೊಮ್ಮೆ ಕೈಕೊಟ್ಟರು. ಮುಂಬೈ ಇಂಡಿಯನ್ಸ್‌ವಿರುದ್ಧದ ಹಿಂದಿನ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟಾಗಿದ್ದ ಗೇಲ್‌6ರನ್‌ಗಳಿಗೆ ವಿಕೆಟ್‌ಒಪ್ಪಿಸಿದರು.
ಹೀಗಾಗಿ ತವರಿನ ಅಭಿಮಾನಿಗಳಲ್ಲಿ ಆತಿಥೇಯ ತಂಡ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಕುಸಿಯಬಹುದೆಂಬ ಭೀತಿ ಮನೆ ಮಾಡಿತ್ತು. ಆದರೆ ಹಾಗಾಗಲು ಕೊಹ್ಲಿ ಮತ್ತು ಎಬಿಡಿ ಬಿಡಲಿಲ್ಲ.

ದಾಖಲೆಯ ಜತೆಯಾಟ: ಗೇಲ್‌ಔಟಾದ ಬಳಿಕ ಡಿವಿಲಿಯರ್ಸ್‌ಕ್ರೀಸ್‌ಗೆ ಬಂದರು. ಆಗ ಅಭಿಮಾನಿಗಳು ‘ಎಬಿಡಿ.. ಎಬಿಡಿ…’ ಎಂದು ಹರ್ಷೋದ್ಗಾರ ಮೊಳಗಿಸುತ್ತಾ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಅನ್ನು ಬರಮಾಡಿಕೊಂಡರು. ತವರಿನ ಅಭಿಮಾನಿಗಳು ತಮ್ಮ ಮೇಲೆ ಇಟ್ಟಿದ್ದ ನಿರೀಕ್ಷೆಯನ್ನು ಡಿವಿಲಿ ಯರ್ಸ್‌ಹುಸಿ ಮಾಡಲಿಲ್ಲ. ತಾವೆದುರಿಸಿದ ಎರಡನೇ ಎಸೆತದಲ್ಲಿಯೇ ಚೆಂಡನ್ನು ಸಿಕ್ಸರ್‌ಗಟ್ಟಿದ ಅವರು ಮೈದಾನದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದರು.

ಪ್ರವೀಣ್‌ತಾಂಬೆ ಬೌಲ್‌ ಮಾಡಿದ ಆರನೇ ಓವರ್‌ನ ನಾಲ್ಕು ಮತ್ತು ಐದನೇ ಎಸೆತಗಳನ್ನು ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಿದಾಗಲಂತೂ ಅಭಿಮಾನಿ ಗಳ ಸಂಭ್ರಮ ಹೇಳತೀರದು. ಗ್ಯಾಲರಿ ಯಲ್ಲಿ ಆರ್‌ಸಿಬಿ ಧ್ವಜ ರಾರಾಜಿಸಿದವು. ಮತ್ತೊಂದು ತುದಿಯಲ್ಲಿದ್ದ ಕೊಹ್ಲಿ ಕೂಡಾ ಸುಮ್ಮನಾಗಲಿಲ್ಲ. ಅವರೂ ಬೌಂಡರಿ, ಸಿಕ್ಸರ್‌ಗಳ ಮೂಲಕ ಲಯನ್ಸ್‌ಬೌಲರ್‌ಗಳ ಬೆವರಿಳಿಸಿದರು. ಇದರ ಪರಿಣಾಮ ಎಂಟನೇ ಓವರ್‌ನ ಅಂತ್ಯಕ್ಕೆ ತಂಡದ ಖಾತೆಯಲ್ಲಿ 59ರನ್‌ಗಳು ಜಮೆಯಾದವು. ಮೊದಲ 10 ಓವರ್‌ಗಳು ಮುಗಿದಾಗ ವಿರಾಟ್‌ಪಡೆ ಒಂದು ವಿಕೆಟ್‌ಗೆ 76ರನ್‌ಕಲೆಹಾಕಿತ್ತು.

ರಂಗೇರಿದ ಆಟ: 11ನೇ ಓವರ್‌ನ ಬಳಿಕ ಆತಿಥೇಯ ತಂಡದ ಆಟ ಕಳೆಗಟ್ಟಿತು. ಕೊಹ್ಲಿ , ಧವಳ್‌ಕುಲಕರ್ಣಿ ಬೌಲ್‌ಮಾಡಿದ ಇನಿಂಗ್ಸ್‌ನ 12ನೇ ಓವರ್‌ನ ಮೊದಲ ಮತ್ತು ಮೂರನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿದರೆ, ನಾಲ್ಕು ಮತ್ತು ಐದನೇ ಎಸೆತಗಳನ್ನು ಡಿವಿಲಿಯರ್ಸ್‌ಬೌಂಡರಿಗಟ್ಟಿದರು.
ಇದರೊಂದಿಗೆ ಡಿವಿಲಿಯರ್ಸ್‌ಅರ್ಧಶತಕ ಪೂರೈಸಿ ಸಂಭ್ರಮಿಸಿದರು. ಅದಕ್ಕಾಗಿ ಅವರು ತೆಗೆದುಕೊಂಡಿದ್ದು 25 ಎಸೆತ. ಈ ಓವರ್‌ನಲ್ಲಿ ಇಬ್ಬರ ಬ್ಯಾಟಿನಿಂದ 22ರನ್‌ಗಳು ಹರಿದುಬಂದವು. ತಂಡದ ಮೊತ್ತವೂ 100ರ ಗಡಿ ದಾಟಿತು.

14ನೇ ಓವರ್‌ಕೊನೆಗೊಂಡಾಗ ಆರ್‌ಸಿಬಿ ತಂಡ ಒಂದು ವಿಕೆಟ್‌ಗೆ 8.71ರ ಸರಾಸರಿಯಲ್ಲಿ 122ರನ್‌ಪೇರಿಸಿತ್ತು. ತಾಂಬೆ ಎಸೆತದ 15ನೇ ಓವರ್‌ನ ಮೊದಲ ಎಸೆತವನ್ನು ಲಾಂಗ್‌ಆಫ್‌ನತ್ತ ಬಾರಿಸಿದ ಕೊಹ್ಲಿ ಒಂದು ರನ್‌ಗಳಿಸಿ ಅರ್ಧಶತಕ ಪೂರೈಸಿದರು. 59 ಎಸೆತಗಳಲ್ಲಿ 100ರನ್‌ಗಳಿಸಿದ ಈ ಜೋಡಿ 79 ಎಸೆತಗಳಲ್ಲಿ 150ರನ್ ಪೂರೈಸಿ ಲಯನ್ಸ್‌ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿತು. 15ನೇ ಓವರ್‌ನ ಅಂತ್ಯಕ್ಕೆ 136ರನ್‌ಪೇರಿಸಿದ್ದ ತಂಡ ಕೊನೆಯ ಐದು ಓವರ್‌ಗಳಲ್ಲಿ 112ರನ್‌ಕಲೆಹಾಕಿತು. ಇದಕ್ಕೆ ಕಾರಣವಾಗಿದ್ದು ಡಿವಿಲಿಯರ್ಸ್‌ಮತ್ತು ಕೊಹ್ಲಿ.

ಪ್ರವೀಣ್‌ಕುಮಾರ್‌ಬೌಲ್‌ಮಾಡಿದ 16ನೇ ಓವರ್‌ನಲ್ಲಿ ಡಿವಿಲಿಯರ್ಸ್‌ಮೂರು ಸಿಕ್ಸರ್‌ಮತ್ತು ಒಂದು ಬೌಂಡರಿ ಸಹಿತ 23ರನ್‌ಗಳಿಸಿದರು. ಬಲಗೈ ಬ್ಯಾಟ್ಸ್‌ಮನ್‌ಡಿವಿಲಿಯರ್ಸ್‌ 43 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದರು.ಇದರಲ್ಲಿ ಒಂಬತ್ತು ಬೌಂಡರಿ ಮತ್ತು 8 ಸಿಕ್ಸರ್‌ಸೇರಿದ್ದವು.
ಶತಕ ಸಿಡಿಸಿದ ಬಳಿಕ ಅವರು ಇನ್ನಷ್ಟು ಆಕ್ರಮಣಕಾರಿಯಾದರು. ಜಡೇಜ ಎಸೆದ 17ನೇ ಓವರ್‌ನ ಕೊನೆಯ ಎರಡು ಎಸೆತಗಳನ್ನು ಡಿವಿಲಿಯರ್ಸ್‌ಸಿಕ್ಸರ್‌ಗಟ್ಟಿದಾಗ ಮೈದಾನದಲ್ಲಿ ಮೆಕ್ಸಿಕನ್‌ಅಲೆ ಎದ್ದಿತು.

ಎರಡು ಓವರ್‌60 ರನ್‌: ಡಿವಿಲಿಯರ್ಸ್‌ಮತ್ತು ಕೊಹ್ಲಿ ಇನಿಂಗ್ಸ್‌ನ 18 ಮತ್ತು 19ನೇ ಓವರ್‌ಗಳಿಂದ 60ರನ್‌ಕೊಳ್ಳೆ ಹೊಡೆದರು. ಬ್ರಾವೊ ಮತ್ತು ಕರ್ನಾಟಕದ ಶಿವಿಲ್‌ಕೌಶಿಕ್‌ಎಸೆದ ಈ ಓವರ್‌ಗಳಲ್ಲಿ ತಲಾ 30 ರನ್‌ಗಳು ದಾಖಲಾದವು. 53 ಎಸೆತಗಳಲ್ಲಿ 5ಬೌಂಡರಿ ಮತ್ತು 7 ಸಿಕ್ಸರ್‌ಸಹಿತ ಶತಕ ಸಿಡಿಸಿದ ಕೊಹ್ಲಿ ಪ್ರವೀಣ್‌ಕುಮಾರ್‌ಎಸೆದ ಅಂತಿಮ ಓವರ್‌ನ ಐದನೇ ಎಸೆತದಲ್ಲಿ ಬ್ರಾವೊಗೆ ಕ್ಯಾಚ್‌ನೀಡಿದರು. ಇದರೊಂದಿಗೆ 229ರನ್‌ಗಳ ದಾಖಲೆಯ ಜತೆಯಾಟಕ್ಕೂ ತೆರೆಬಿತ್ತು. ಇದಕ್ಕಾಗಿ ಈ ಜೋಡಿ ತೆಗೆದುಕೊಂಡಿದ್ದು 97 ಎಸೆತ! 52 ಎಸೆತಗಳಲ್ಲಿ 10 ಬೌಂಡರಿ ಮತ್ತು 12 ಸಿಕ್ಸರ್‌ಸಹಿತ 129ರನ್‌ಗಳಿಸಿದ್ದ ಡಿವಿಲಿಯರ್ಸ್ ಅಜೇಯವಾಗುಳಿದರು.

ಬ್ಯಾಟಿಂಗ್‌ವೈಫಲ್ಯ: ಬೆಟ್ಟದಂತಹ ಗುರಿ ಮುಂದಿದ್ದ ಕಾರಣ ಲಯನ್ಸ್‌ತಂಡ ಇನಿಂಗ್ಸ್‌ಆರಂಭಕ್ಕೂ ಮುನ್ನವೇ ಅರ್ಧ ಸೋತು ಹೋಗಿತ್ತು.
ಸ್ಫೋಟಕ ಆಟಗಾರ ಡ್ವೇನ್‌ಸ್ಮಿತ್‌ಗೆ (7) ಕರ್ನಾಟಕದ ಎಸ್‌.ಅರವಿಂದ್‌ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಪೆವಿಲಿಯನ್‌ಹಾದಿ ತೋರಿಸಿದರು.
ರೈನಾ ಬದಲು ನಾಯಕತ್ವ ವಹಿಸಿದ್ದ ಬ್ರೆಂಡನ್‌ಮೆಕ್ಲಮ್‌(11) ಕೂಡಾ ವಿಫಲರಾದರು. ಇವರಿಬ್ಬರ ವಿಕೆಟ್‌ಪತನದ ಬಳಿಕ ಇತರ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಪರೆಡ್‌ನಡೆಸಿದರು.

ಇದಕ್ಕೆ ಕಾರಣವಾಗಿದ್ದು ಕ್ರಿಸ್‌ಜೋರ್ಡಾನ್‌ಮತ್ತು ಸಚಿನ್‌ಬೇಬಿ ಅವರ ಶಿಸ್ತಿನ ದಾಳಿ. ಹಿಂದಿನ ಪಂದ್ಯಗಳಲ್ಲಿ ದುಬಾರಿಯಾಗಿದ್ದ ಜೋರ್ಡಾನ್‌ನಾಲ್ಕು ವಿಕೆಟ್‌ಗಳಿಸಿ ಉದ್ಯಾನ ನಗರಿಯ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.

ಸ್ಕೋರ್‌ಕಾರ್ಡ್‌
ಆರ್‌ಸಿಬಿ 3ಕ್ಕೆ 248
(20 ಓವರ್‌ಗಳಲ್ಲಿ)

ಕ್ರಿಸ್‌ಗೇಲ್‌ಬಿ ಧವಳ್‌ಕುಲಕರ್ಣಿ 06
ವಿರಾಟ್‌ಕೊಹ್ಲಿ ಸಿ ಡ್ವೇನ್‌ಬ್ರಾವೊ ಬಿ ಪ್ರವೀಣ್‌ಕುಮಾರ್‌ 109
ಎಬಿ ಡಿವಿಲಿಯರ್ಸ್‌ಔಟಾಗದೆ 129
ಶೇನ್‌ವ್ಯಾಟ್ಸನ್‌ಸಿ ದಿನೇಶ್‌ಕಾರ್ತಿಕ್‌ಬಿ ಪ್ರವೀಣ್‌ಕುಮಾರ್‌ 00
ಇತರೆ: (ಬೈ 1, ಲೆಗ್‌ಬೈ 1, ವೈಡ್‌1, ನೋಬಾಲ್‌1) 04
ವಿಕೆಟ್‌ಪತನ: 1-19 (ಗೇಲ್‌; 3.5), 2-248 (ಕೊಹ್ಲಿ; 19.5), 3-248 (ವ್ಯಾಟ್ಸನ್‌; 19.6).
ಬೌಲಿಂಗ್‌: ಪ್ರವೀಣ್‌ಕುಮಾರ್‌4-1-45-2, ಧವಳ್‌ಕುಲಕರ್ಣಿ 3-0-33-1,ಶಿವಿಲ್‌ಕೌಶಿ್ 3-0-50-0, ಪ್ರವೀಣ್‌ತಾಂಬೆ 2-0-25-0, ಡ್ವೇನ್‌ಬ್ರಾವೊ 3-0-46-0, ರವೀಂದ್ರ ಜಡೇಜ 4-0-34-0, ಡ್ವೇನ್‌ಸ್ಮಿತ್‌1-0-13-0.

ಗುಜರಾತ್‌ಲಯನ್ಸ್‌ 104 (18.4ಓವರ್‌ಗಳಲ್ಲಿ)

ಡ್ವೇನ್‌ಸ್ಮಿತ್‌ಬಿ ಎಸ್‌. ಅರವಿಂದ್‌ 07
ಬ್ರೆಂಡನ್‌ಮೆಕ್ಲಮ್‌ಸಿ ಎಬಿ ಡಿವಿಲಿಯರ್ಸ್‌ಬಿ ಯಜುವೇಂದ್ರ ಚಾಹಲ್‌ 11
ರವೀಂದ್ರ ಜಡೇಜ ಸಿ ಮತ್ತು ಬಿ ಕ್ರಿಸ್‌ಜೋರ್ಡಾನ್‌ 21
ದಿನೇಶ್‌ಕಾರ್ತಿಕ್‌ಸಿ ಎಬಿ ಡಿವಿಲಿಯರ್ಸ್‌ಬಿ ಕ್ರಿಸ್‌ಜೋರ್ಡಾನ್‌ 02
ಆ್ಯರನ್‌ಫಿಂಚ್‌ಸಿ ಎಸ್‌. ಅರವಿಂದ್‌ ಬಿ ಸಚಿನ್‌ಬೇಬಿ 37
ಡ್ವೇನ್‌ಬ್ರಾವೊ ಎಲ್‌ಬಿಡಬ್ಲ್ಯು ಬಿ ಯಜುವೇಂದ್ರ ಚಾಹಲ್‌ 01
ಆಕಾಶ್‌ದೀಪ್‌ನಾಥ್‌ಬಿ ಯಜುವೇಂದ್ರ ಚಾಹಲ್‌ 03
ಪ್ರವೀಣ್‌ಕುಮಾರ್‌ಬಿ ಕ್ರಿಸ್‌ಜೋರ್ಡಾನ್‌ 01
ಧವಳ್‌ಕುಲಕರ್ಣಿ ಬಿ ಕ್ರಿಸ್‌ಜೋರ್ಡಾನ್‌ 02
ಪ್ರವೀಣ್‌ತಾಂಬೆ ಔಟಾಗದೆ 07
ಶಿವಿಲ್‌ಕೌಶಿಕ್‌ಸಿ ಎಸ್‌. ಅರವಿಂದ್‌ಬಿ ಸಚಿನ್‌ಬೇಬಿ 00
ಇತರೆ: (ಬೈ 1, ಲೆಗ್‌ಬೈ 3, ವೈಡ್‌5, ನೋಬಾಲ್‌3) 12
ವಿಕೆಟ್‌ಪತನ: 1-9 (ಸ್ಮಿತ್‌; 1.5), 2-37 (ಮೆಕ್ಲಮ್‌; 4.6), 3-44 (ಕಾರ್ತಿಕ್‌; 6.5), 4-44 (ಜಡೇಜ; 6.6), 5-47 (ಬ್ರಾವೊ; 7.5), 6-68 (ಆಕಾಶ್‌ದೀಪ್‌; 11.2), 7-69 (ಪ್ರವೀಣ್‌ಕುಮಾರ್‌; 12.1), 8-74 (ಧವಳ್‌; 12.5), 9-104 (ಫಿಂಚ್‌; 18.3), 10-104 (ಕೌಶಿಕ್‌; 18.4).
ಬೌಲಿಂಗ್‌: ಸ್ಟುವರ್ಟ್‌ಬಿನ್ನಿ 2-0-13-0, ಎಸ್‌.ಅರವಿಂದ್‌3-0-15-1, ಯಜುವೇಂದ್ರ ಚಾಹಲ್‌4-0-19-3, ಶೇನ್‌ವ್ಯಾಟ್ಸನ್‌1-0-3-0, ಕ್ರಿಸ್‌ಜೋರ್ಡಾನ್‌3-0-11-4, ವರುಣ್‌ಆ್ಯರನ್‌2-0-19-0, ವಿರಾಟ್‌ಕೊಹ್ಲಿ 1-0-13-0, ಕ್ರಿಸ್‌ಗೇಲ್‌2-0-3-0, ಸಚಿನ್‌ಬೇಬಿ 0.4-0-4-2.

ಫಲಿತಾಂಶ: ಆರ್‌ಸಿಬಿ ತಂಡಕ್ಕೆ 144ರನ್‌ಗಳ ಗೆಲುವು.
ಪಂದ್ಯಶ್ರೇಷ್ಠ: ಎಬಿ ಡಿವಿಲಿಯರ್ಸ್‌.

Write A Comment