ರಾಷ್ಟ್ರೀಯ

ಮಲ್ಯಗೆ ಗೇಟ್‌ಪಾಸ್ : ರಾಜ್ಯಸಭೆ ಸದಸ್ಯತ್ವದಿಂದ ಉಚ್ಛಾಟನೆಗೆ ಶಿಫಾರಸು

Pinterest LinkedIn Tumblr

VijayMallya_PTI_b

ನವದೆಹಲಿ, ಮೇ ೪ – ದೇಶಬಿಟ್ಟು ಪಲಾಯನಗೈದಿರುವ ಹೆಂಡದ ಉದ್ಯಮಿ ವಿಜಯ್ ಮಲ್ಯ ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ, ರಾಜ್ಯಸಭೆ ಸದಸ್ಯತ್ವದಿಂದ ಉಚ್ಛಾಟಿಸುವಂತೆ ರಾಜ್ಯಸಭೆಯ ನೈತಿಕ ಸಮಿತಿ ಶಿಫಾರಸು ಮಾಡಿದೆ.
ಕರಣ್ ಸಿಂಗ್ ನೇತೃತ್ವದ ಸಮಿತಿಯು ಇಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿರುವ ತನ್ನ ಹತ್ತನೇ ವರದಿಯಲ್ಲಿ ಇಂಥ ಕಠೋರ ಕ್ರಮವನ್ನು ಶಿಫಾರಸು ಮಾಡಲಾಗಿದೆ.
ಜನರಿಗೆ ಸಂದೇಶ ಹೋಗಲಿ
ತಪ್ಪು ಮಾಡುವ ಸದಸ್ಯರ ವಿರುದ್ಧ ಇಂಥ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಂಸತ್ತು ಬದ್ಧವಾಗಿದೆ ಎಂಬ ಸಂದೇಶ ಜನ ಸಾಮಾನ್ಯರಿಗೆ ರವಾನೆಯಾಗಬೇಕಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
ದುರ್ನಡತೆಯ ಪ್ರಮಾಣ ಯಾವ ಮಟ್ಟ ಮುಟ್ಟಿದೆ ಎಂದರೆ, ಸದ್ಯದ ಪರಿಸ್ಥಿಯಲ್ಲಿ ಸದಸ್ಯತ್ವ ರದ್ದು ಮಾ‌ಡುವ ಕ್ರಮವನ್ನೂ ಹೊರತುಪಡಿಸಿ ಬೇರೆ ಇನ್ನಾವ ಕ್ರಮವೂ ತೋಚುತ್ತಿಲ್ಲ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
ಸರ್ವಾನುಮತದ ತೀರ್ಮಾನ
ಮಲ್ಯ ಬರೆದಿರುವ ಪತ್ರವನ್ನು ಗಮನಿಸಿ ಹಾಗೂ ಇಡೀ ಪ್ರಕರಣವನ್ನು ಆಮೂಲಾಗ್ರವಾಗಿ ಅವಲೋಕಿಸಿದ ನಂತರ ಮಲ್ಯ ಸದಸ್ಯತ್ವವನ್ನೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಉಚ್ಛಾಟಿಸಬೇಕೆಂದು ಸಮಿತಿ ಸಭೆ ನಿನ್ನೆ ಸರ್ವಾನುಮತದಿಂದ ತೀರ್ಮಾನಿಸಿತು ಎಂದು ಕರಣ್ ಸಿಂಗ್ ತಿಳಿಸಿದರು.

ಇಂಥ ಕಠಿಣ ಕ್ರಮವನ್ನು ಕೈಗೊಳ್ಳುವ ಮೂಲಕ, ಅಗತ್ಯ ಎನಿಸಿದಾಗಲೆಲ್ಲ ತಪ್ಪಿತಸ್ಥ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಸತ್ತು ಬದ್ಧವಾಗಿದೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಹೋಗಬೇಕಾಗಿದೆ ಎಂದು ಕರಣ್ ಸಿಂಗ್ ಅಭಿಪ್ರಾಯಪಟ್ಟರು.
ಗೌರವ ಎತ್ತಿಹಿಡಿಯಲು
ಸಂಸತ್ತಿನಂಥ ಮಹಾನ್ ಸಂಸ್ಥೆಯ ಘನತೆ, ಗೌರವವನ್ನು ಎತ್ತಿ ಹಿ‌ಡಿಯುವುದಕ್ಕಾಗಿ ಇಂಥ ಕ್ರಮಗಳು ಅಗತ್ಯವಾಗಿವೆ ಎಂದೂ ಅವರು ಪ್ರತಿಪಾದಿಸಿದರು.
ನೈತಿಕ ಸಮಿತಿಯ ಶಿಫಾರಸಿಗೆ ಸಂಬಂಧಿಸಿದಂತೆ ಇದೀಗ ಮೇಲ್ಮನೆಯು ಒಂದು ತೀರ್ಮಾನವನ್ನೂ ತೆಗೆದುಕೊಳ್ಳಬೇಕಾಗಿದೆ.
ರಾಜೀನಾಮೆ ತಿರಸ್ಕಾರ
ರಾಜ್ಯಸಭೆ ಸದಸ್ಯತ್ವಕ್ಕೆ ವಿಜಯ್ ಮಲ್ಯ ಅವರು ನೀಡಿರುವ ರಾಜೀನಾಮೆಯನ್ನು ಸಭಾಪತಿ ಹಮೀದ್ ಅನ್ಸಾರಿ ಅವರು ಈಗಾಗಲೇ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಿರುವುದನ್ನೂ ಇಲ್ಲಿ ಸ್ಮರಿಸಬಹುದು.

ಜುಲೈಗೆ ಮುಕ್ತಾಯ
ಪಕ್ಷೇತರ ಸದಸ್ಯ ವಿಜಯ್ ಮಲ್ಯ ಅವರ ಸದಸ್ಯತ್ವದ ಎರಡನೇ ಅವಧಿಯು ಬರುವ ಜುಲೈ ಒಂದರಂದು ಮುಕ್ತಾಯವಾಗಲಿದೆ.
9,400 ಕೋಟಿ ರೂಪಾಯಿ ಸಾಲ ಬಾಕಿ ಪ್ರಕರಣಗಳ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ ನಾನಾ ಬ್ಯಾಂಕುಗಳ ಕೂಟ ಸಾಲ ವಸೂಲಾತಿಗೆ ಮಲ್ಯ ವಿರುದ್ಧ ಹಲವಾರು ಕಾನೂನು ಕ್ರಮಗಳಿಗೆ ಮುಂದಾಗಿರುವುದನ್ನು ಇಲ್ಲಿ ನೆನೆಯಬಹುದು.
ಅವಕಾಶ ನೀಡಿಲ್ಲ
ಭಾರತ ಬಿಟ್ಟು ಲಂಡನ್‌ಗೆ ಪರಾರಿಯಾಗಿರುವ ಸುಸ್ತಿದಾರ ಮಲ್ಯ, ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರಿ ಆಡಳಿತ ಯಂತ್ರ ತಮಗೆ ನ್ಯಾಯೋಚಿತ ರೀತಿಯಲ್ಲಿ ಅವಕಾಶವನ್ನು ಒದಗಿಸಲಿಲ್ಲ ಎಂದು ಅಲ್ಲಿ ಅಲುವತ್ತುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಸಾಲಗಾರ, ಸುಸ್ತಿದಾರ ಅಲ್ಲ
9,400 ಕೋಟಿ ರೂಪಾಯಿ ಸಾಲ ಬಾಕಿ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ತಮ್ಮ ಹೇಳಿಕೆಗಳನ್ನು ಬದಲಿಸಿಕೊಂಡು ಬರುತ್ತಿರುವ ವಿಜಯ್ ಮಲ್ಯ, ತಾವು ಸಾಲಗಾರನೂ ಅಲ್ಲ, ಸುಸ್ತಿದಾರನೂ ಅಲ್ಲ ಎಂದೂ ಹೇಳಿಕೊಂಡಿದ್ದು ಉಂಟು.
ಸಾಲದ ಸುಳಿಯಿಂದ ಪಾರಾಗಲು 4,500 ಕೋಟಿ ರೂಪಾಯಿಗಳನ್ನು ಮೊದಲ ಕಂತಿನಲ್ಲಿ ಪಾವತಿಸಲು ಅವಕಾಶ ನೀಡ‌ಬೇಕೆಂದು ಕೋರಿಕೆ ಸಲ್ಲಿಸಿದ್ದರು. ಆದರೆ, ಬ್ಯಾಂಕುಗಳ ಕೂಟ ಈ ಕೋರಿಕೆಯನ್ನೂ ತಳ್ಳಿ ಹಾಕಿತ್ತು.

Write A Comment