ಕರ್ನಾಟಕ

ಮೋದಿ ಸರ್ಕಾರದ ಮೇಲೆ ಆಕ್ರೋಶ

Pinterest LinkedIn Tumblr

4a5ಬೆಂಗಳೂರು, ಮೇ ೪ – ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದ ನಂತರ ಕಪ್ಪು ಪಟ್ಟಿಗೆ ಸೇರಿಸಲಾಗಿದ್ದ ಆಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ಮತ್ತೆ ದೇಶ ಪ್ರವೇಶಿಸಲು ಅವಕಾಶ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಬೆಂಗಳೂರು ಮಹಾನಗರ ಹಾಗೂ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಜಂಟಿಯಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಬೆಂಬಲಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ಬೆಳಕಿಗೆ ಬರುತ್ತಿದ್ದಂತೆ ಆಗಿನ ರಕ್ಷಣಾ ಸಚಿವ ಆಂಟನಿ ಅವರು ಹೆಲಿಕಾಪ್ಟರ್ ಖರೀದಿಯ ಗುತ್ತಿಗೆಯನ್ನು ರದ್ದು ಮಾಡಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದರು ಎಂದರು.
ಆದರೆ, ಮೋದಿ ಪ್ರಧಾನಿಯಾದ ಬಳಿಕ ಮೇಕ್ ಇನ್ ಇಂಡಿಯಾದಲ್ಲಿ ಭಾಗವಹಿಸಲು ಈ ಕಂಪನಿಗೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದು, ಟಾಟಾ ಸಂಸ್ಥೆಯ ಪಾಲುದಾರಿಕೆಗೆ ಹಾಗೂ ಹೆಲಿಕಾಪ್ಟರ್ ಉತ್ಪಾದನಾ ಘಟಕದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿದರು.
ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ, ಬಡತನ ನಿವಾರಣೆಯಾಗಿಲ್ಲ ಇದಕ್ಕಾಗಿ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಯಕರ ಮೇಲೆ ಇಲ್ಲ ಸಲ್ಲದ ಆರೋಪ ಎಸಗಲಾಗುತ್ತಿದೆ ಎಂದು ದೂರಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಚುನಾವಣಾ ವೇಳೆ ಬಿಜೆಪಿ ನೀಡಿದ್ದ ಯಾವ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ ಎಂದು ದೂರಿದ ಅವರು, ಬಿಜೆಪಿ ಅವರು ಹತಾಶರಾಗಿ ಕಾಂಗ್ರೆಸ್ಸಿಗರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಎಐಸಿಸಿ ಕಾರ್ಯದರ್ಶಿ ಚೆಲ್ಲ ಕುಮಾರ್, ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ, ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಸ್.ಟಿ. ಸೋಮಶೇಖರ್, ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ. ಶೇಖರ್, ಶಾಸಕ ಮುನಿರತ್ನ, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್, ಕೆಪಿಸಿಸಿ ಕಾರ್ಯದರ್ಶಿ ಡಾ. ಬಿ. ಗುರಪ್ಪ ನಾಯ್ಡು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Write A Comment