ರಾಷ್ಟ್ರೀಯ

ಕೇವಲ 24 ಗಂಟೆಗಳಲ್ಲಿ ನಾಲ್ಕು ಪಟ್ಟು ಹೆಚ್ಚಳವಾದ ಕಾಡ್ಗಿಚ್ಚು!

Pinterest LinkedIn Tumblr

uttarakhand-fire01ಡೆಹ್ರಾಡೂನ್: ಉತ್ತರಾಖಂಡದ ನೈನಿಟಾಲ್ ಜಿಲ್ಲೆಯ ವ್ಯಾಪ್ತಿಯಲ್ಲಿ ಹಬ್ಬಿರುವ ಭೀಕರ ಕಾಡ್ಗಿಚ್ಚು ಕೇವಲ 24 ಗಂಟೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿರುವ ಆಘಾತಕಾರಿ ಅಂಶವನ್ನು ಇಸ್ರೋ  ಹೊರಹಾಕಿದೆ.

ಇಸ್ರೋ ಬಿಡುಗಡೆ ಮಾಡಿರುವ ಸ್ಯಾಟಲೈಟ್ ಚಿತ್ರಗಳು ನೀಡಿರುವ ಮಾಹಿತಿಯಂತೆ ಸಮಯ ಕಳೆಯುತ್ತಿದ್ದಂತೆಯೇ ಕಾಡ್ಗಿಚ್ಚು ವ್ಯಾಪಕವಾಗಿ ಹರಡುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ  ಕಾಡ್ಗಿಚ್ಚು ತನ್ನ ಕೆನ್ನಾಲಿಗೆಯನ್ನು ನಾಲ್ಕು ಪಟ್ಟು ಹೆಚ್ಚಳ ಮಾಡಿದೆ ಎಂದು ತಿಳಿದುಬಂದಿದೆ. ಹೈದರಾಬಾದಿನಲ್ಲಿರುವ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ  ಕನಿಷ್ಠ 200 ಪ್ರದೇಶಗಳಲ್ಲಿ ಕಾಡ್ಗಿಚ್ಚು ಸಕ್ರಿಯವಾಗಿದ್ದು, ಕೂಡಲೇ ಇದನ್ನು ನಿಯಂತ್ರಿಸದೇ ಹೋದರೆ ಕಾಡ್ಗಿಚ್ಚು ಇಡೀ ಉತ್ತರ ಭಾರತಕ್ಕೆ ಹಬ್ಬುವ ಅಪಾಯವಿದೆ ಎಂದು ಹೇಳಿದೆ.

ಅಂತೆಯೆ ಕಾಡ್ಗಿಚ್ಚು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳು ಉತ್ತಮವಾದದ್ದೇ ಆದರೂ ಕಾಡ್ಗಿಚ್ಚು ನಿಯಂತ್ರಿಸುವ ನಿಟ್ಟಿನಲ್ಲಿ ಇದೂ  ಸಾಲದು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಾಡ್ಗಿಚ್ಚಿನ ಬೆಂಕಿಯ ಅಲೆಗಳು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು  ಉತ್ತರ ಪ್ರದೇಶದ ಕಾಡುಗಳಿಗೂ ವ್ಯಾಪಿಸಿದರೂ ಅಚ್ಚರಿಯಿಲ್ಲ ಎಂದು ಎಚ್ಚರಿಕೆ ನೀಡಿದೆ.

ಈ ಕುರಿತು ತನ್ನ ಸ್ಯಾಟಲೈಟ್ ಚಿತ್ರಗಳನ್ನು ಇಂದು ಮಧ್ಯಾಹ್ನ ಬಿಡುಗಡೆ ಮಾಡಿರುವ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ, ಉತ್ತರ ಭಾರತದಾದ್ಯಂತ ಸುಮಾರು 1, 300 ಸಕ್ರಿಯ  ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ.

ಇನ್ನು ಕಾಡ್ಗಿಚ್ಚಿನ ರುದ್ರ ನರ್ತನಕ್ಕೆ ಉತ್ತರಾಖಂಡದಲ್ಲಿ ಈಗಾಗಲೇ 7 ಮಂದಿ ಸಾವನ್ನಪ್ಪಿದ್ದು ಈ ಪೈಕಿ ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದ್ದಾಳೆ ಎಂದು ತಿಳಿದುಬಂದಿದೆ.

Write A Comment