ಮನೋರಂಜನೆ

ಸೂಪರ್​ಜೈಂಟ್ಸ್ ನ್ನು ರೋಚಕವಾಗಿ ಮಣಿಸಿದ ಲಯನ್ಸ್​

Pinterest LinkedIn Tumblr

brendon-mccullum-dwayne-smith

ಪುಣೆ: ಕೊನೇ ಓವರ್ ತನಕ ಚಂಚಲೆಯಾಗಿದ್ದ ‘ವಿಜಯಲಕ್ಷಿ ್ಮ ಯನ್ನು ಅಂತಿಮ ಎಸೆತದಲ್ಲಿ ಒಲಿಸಿಕೊಂಡ ಗುಜರಾತ್ ಲಯನ್ಸ್ ತಂಡ ಐಪಿಎಲ್-9ರಲ್ಲಿ ಪುಣೆ ಸೂಪರ್​ಜೈಂಟ್ಸ್ ತಂಡಕ್ಕೆ ಮತ್ತೆ ಸೋಲಿನ ಶಾಕ್ ನೀಡಿತು. ಡ್ವೇನ್ ಸ್ಮಿತ್ (63 ರನ್, 37 ಎಸೆತ, 9ಬೌಂಡರಿ, 1 ಸಿಕ್ಸರ್) ಹಾಗೂ ಬ್ರೆಂಡನ್ ಮೆಕ್ಕಲಂ (43 ರನ್, 22 ಎಸೆತ, 5 ಬೌಂಡರಿ, 2 ಸಿಕ್ಸರ್) ಅಬ್ಬರದ ಆರಂಭದಿಂದ ಸುರೇಶ್ ರೈನಾ ಪಡೆ, ಎಂಎಸ್ ಧೋನಿ ಸಾರಥ್ಯದ ತಂಡದ ವಿರುದ್ಧ 3 ವಿಕೆಟ್​ಗಳಿಂದ ಜಯ ದಾಖಲಿಸಿತು. ಟೂರ್ನಿಯ 6 ಗೆಲುವುಗಳಲ್ಲಿ 5ರಲ್ಲಿ ಚೇಸಿಂಗ್ ಮೂಲಕವೇ ಯಶ ಕಂಡಿರುವ ಲಯನ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಹೊಸ’ ತಂಡಗಳ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪುಣೆ ತಂಡ, ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ (101 ರನ್, 54 ಎಸೆತ, 8 ಬೌಂಡರಿ, 5 ಸಿಕ್ಸರ್) ಅಮೋಘ ಶತಕ ಹಾಗೂ ಅಜಿಂಕ್ಯ ರಹಾನೆ (53 ರನ್, 45 ಎಸೆತ, 5 ಬೌಂಡರಿ) ಸಹನೆಯ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್​ಗೆ 195 ರನ್ ಗಳಿಸಿತು. ಪ್ರತಿಯಾಗಿ ಗುಜರಾತ್ ಭರ್ಜರಿ ಆರಂಭದ ನೆರವಿನಿಂದ ಕೊನೇ ಎಸೆತದಲ್ಲಿ ಗೆಲುವಿನ ರನ್ ಕಸಿದು 7 ವಿಕೆಟ್​ಗೆ 196 ರನ್ ಗಳಿಸಿ ಸಂಭ್ರಮಿಸಿತು.

ಸ್ಮಿತ್-ರಹಾನೆ ಜುಗಲ್​ಬಂದಿ: ಈ ಮುನ್ನ ಬ್ಯಾಟಿಂಗ್ ಮಾಡಿದ ಪುಣೆ ಉತ್ತಮ ಆರಂಭ ಕಂಡಿರಲಿಲ್ಲ. ಸೌರಭ್ ತಿವಾರಿ (1) ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾದರು. ಬಳಿಕ ಎಚ್ಚರಿಕೆಯಿಂದ ಸಿಂಗಲ್ಸ್- ಡಬಲ್ಸ್ ರನ್ ಗಳಿಸುತ್ತಾ ಕ್ರೀಸಿಗಂಟಿಕೊಂಡ ರಹಾನೆ- ಸ್ಮಿತ್ ಜೋಡಿ ನಿಧಾನವಾಗಿ ಬಿರುಸಿನ ಹೊಡೆತಕ್ಕೆ ಕೈ ಹಾಕಿತು. ಈ ನಡುವೆ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಮಿತ್ ಅಬ್ಬರದಾಟಕ್ಕೆ ಇಳಿದೊಡನೆ ಅನಗತ್ಯ ರನ್​ಗಾಗಿ ಓಡಿದ ಅಜಿಂಕ್ಯ ರಹಾನೆ (53 ರನ್, 45 ಎಸೆತ, 5 ಬೌಂಡರಿ) ರನೌಟಾದರು. ಈ ಜೋಡಿ 2ನೇ ವಿಕೆಟ್ 111 ರನ್ ಜತೆಯಾಟವಾಡಿ ಬೃಹತ್ ಮೊತ್ತಕ್ಕೆ ನೆರವಾಯಿತು.

ಸ್ಮಿತ್-ಧೋನಿ ಬಿರುಸಿನ ಆಟ

ರಹಾನೆ ಔಟಾದ ನಂತರ ಕಣಕ್ಕಿಳಿದ ಧೋನಿ (30*ರನ್, 18 ಎಸೆತ, 2 ಬೌಂಡರಿ, 2 ಸಿಕ್ಸರ್), ಸ್ಟೀವನ್ ಸ್ಮಿತ್ ಜತೆ ಅಬ್ಬರದ ಬ್ಯಾಟಿಂಗ್ ನಿರ್ವಹಣೆ ತೋರಿ 3ನೇ ವಿಕೆಟ್​ಗೆ 35 ಎಸೆತಗಳಲ್ಲಿ ಬಿರುಸಿನ 64 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಸನಿಹ ತಂದರು. ಡ್ವೇನ್ ಬ್ರಾವೊ ಎಸೆದ ಇನಿಂಗ್ಸ್​ನ ಕಡೇ ಓವರ್​ನ 2ನೇ ಎಸೆತದಲ್ಲಿ ಬೌಂಡರಿ ಸಿಡಿಸಿ ಶತಕ ಪೂರೈಸಿದ ಸ್ಮಿತ್ ಮರು ಎಸೆತದಲ್ಲೇ ಔಟಾಗಿ ನಿರ್ಗಮಿಸಿದರು.

ಡ್ವೇನ್ ಸ್ಮಿತ್-ಮೆಕ್ಕಲಂ ಬ್ರೇಕಿಲ್ಲದ ಬ್ಯಾಟಿಂಗ್

ಲಯನ್ಸ್​ನ ಬಿಗ್ ಟ್ರಂಪ್ ಕಾರ್ಡ್ ಸ್ಮಿತ್- ಮೆಕ್ಕಲಂ ಜೋಡಿ ಬೃಹತ್ ಸವಾಲಿಗೆ ತಕ್ಕ ಬ್ಯಾಟಿಂಗ್ ಆರಂಭಿಸಿತು. ಮೊದಲೆರಡು ಓವರ್​ಗಳಲ್ಲಿ ಕೇವಲ 3 ರನ್ ದಾಖಲಿಸಿ ಶಾಂತಚಿತ್ತದಿಂದಿದ್ದ ಈ ಜೋಡಿ 3ನೇ ಓವರ್​ನಲ್ಲಿ ರೌದ್ರರೂಪ ತಾಳಿತು. ಮಾರ್ಕೆಲ್ ಎಸೆದ ಓವರ್​ನಲ್ಲಿ 3 ಬೌಂಡರಿ, 1 ಸಿಕ್ಸರ್ ಒಳಗೊಂಡಂತೆ 24 ರನ್ ಚಚ್ಚಿ ಅಬ್ಬರಕ್ಕೆ ಚಾಲನೆ ನೀಡಿತಲ್ಲದೆ ನೋಡ ನೋಡುತ್ತಿದ್ದಂತೆ 8 ಓವರ್​ಗಳಲ್ಲಿ 93 ರನ್ ಬಾರಿಸಿ ಪುಣೆ ಬೌಲರ್​ಗಳ ಬೆವರಿಸಿಳಿತು. ಏತನ್ಮಧ್ಯೆ 34 ರನ್ ಗಳಿಸಿದ್ದಾಗ ಸ್ಮಿತ್ ಕ್ಯಾಚ್ ಕೈಚೆಲ್ಲಿದ ಪೆರೇರಾ ಜೀವದಾನ ನೀಡಿದರು. ಗುಜರಾತ್ ತಂಡದ ಮೊತ್ತ 115ರೊಳಗೆ ಮೆಕ್ಕಲಂರನ್ನು ಭಾಟಿಯಾ ಹಾಗೂ ಸ್ಮಿತ್​ರನ್ನು ಪೆರೇರಾ ಡಗ್​ಔಟ್ ಸೇರಿಸಿದಾಗ ಪುಣೆ ನಿಟ್ಟುಸಿರುಬಿಟ್ಟಿತು. ಕಳೆದ ಪಂದ್ಯದಂತೆ ಇಲ್ಲೂ ಜತೆಯಾದ ರೈನಾ(34) ಮತ್ತು ದಿನೇಶ್ ಕಾರ್ತಿಕ್(33) ಸಾಧ್ಯವಾದಷ್ಟು ಡಬಲ್ಸ್-ಬೌಂಡರಿ ಬಾರಿಸಿ ಆರಂಭಿಕ ಜೋಡಿ ನೀಡಿದ್ದ 10 ರನ್ ಸರಾಸರಿ ಕಾಯ್ದುಕೊಂಡರು. ಅಶ್ವಿನ್ ಸ್ಪಿನ್​ದ್ವಯರೂ ವಿಕೆಟ್ ಪಡೆಯಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲವಾದರೂ, ಕಳೆದ ಪಂದ್ಯದ ಹೀರೋ ಅಶೋಕ್ ದಿಂಡಾ ಕಾರ್ತಿಕ್​ರನ್ನು ಡಗ್​ಔಟ್ ಸೇರಿಸಿ ಪುಣೆ ಪಾಳಯದಲ್ಲಿ ಗೆಲುವಿನ ಸಣ್ಣ ಆಸೆ ಮೂಡಿಸಿದರು.

ರೋಚಕ ಕೊನೇ ಓವರ್

ಕೊನೇ 2 ಓವರ್​ಗಳಲ್ಲಿ 20 ರನ್ ಅಗತ್ಯವಿದ್ದಾಗ ಬ್ರಾವೊ(7) ಮತ್ತು ಜಡೇಜಾ(0) 19ನೇ ಓವರ್​ನಲ್ಲಿ ಔಟಾದರು. ಈ ನಡುವೆ ಗುಜರಾತ್ ಒತ್ತಡಕ್ಕೆ ಸಿಲುಕಿದರೂ 11ರನ್ ಕಸಿಯಿತು. ನಿರ್ಣಾಯಕ ಓವರ್​ನಲ್ಲಿ 9 ರನ್ ಅಗತ್ಯವಿದ್ದಾಗ ದಾಳಿಗಿಳಿದ ವೇಗಿ ಪೆರೇರಾ ಮೊದಲ ಎಸೆತದಲ್ಲೇ ಬೌಂಡರಿ ಬಿಟ್ಟು ಕೊಟ್ಟರೆ, ನಂತರ ವೈಡ್ ಮತ್ತು ಸಿಂಗಲ್ ರನ್ ಹೋಯಿತು. 3 ಮತ್ತು 4ನೇ ಎಸೆತದಲ್ಲಿ ಕ್ರಮವಾಗಿ ರೈನಾ ಮತ್ತು ಕಿಶನ್(0) ಡಗ್​ಔಟ್ ಸೇರಿದರು. ಇದರಿಂದ 2 ಎಸೆತದಲ್ಲಿ 3 ರನ್ ಗಳಿಸಬೇಕಿದ್ದಾಗ ‘ಬರ್ತ್​ಡೇ ಬಾಯ್’ ಫೌಲ್ಕ್​ನರ್ 2 ರನ್ ಕಸಿದರು. ಕೊನೇ ಎಸೆತದಲ್ಲಿ ಸಿಂಗಲ್ ಮೂಲಕ ಗೆಲುವು ತಂದರು.

ಪುಣೆ ಸೂಪರ್​ಜೈಂಟ್ಸ್: 3 ವಿಕೆಟ್​ಗೆ 195

ರಹಾನೆ ರನೌಟ್ (ಬ್ರಾವೊ) 53

ಸೌರಭ್ ತಿವಾರಿ ರನೌಟ್ (ರೈನಾ) 1

ಸ್ಟೀವನ್ ಸ್ಮಿತ್ ಬಿ ಬ್ರಾವೊ 101

ಎಂಎಸ್ ಧೋನಿ ಅಜೇಯ 30

ಥಿಸ್ಸರ ಪೆರೇರಾ ಔಟಾಗದೆ 3

ಇತರೆ: 7. ವಿಕೆಟ್ ಪತನ: 1-13, 2-124, 3-188. ಬೌಲಿಂಗ್: ಪ್ರವೀಣ್​ಕುಮಾರ್ 4-0-37-0, ಧವಳ್ ಕುಲಕರ್ಣಿ 3-0-25-0, ಜಡೇಜಾ 4-0-37-0, ಶಿವಿಲ್ ಕೌಶಿಕ್ 3-0-32-0, ಫೌಲ್ಕ್​ನರ್ 2-0-22-0, ಡ್ವೇನ್ ಬ್ರಾವೊ 4-0-40-1.

ಗುಜರಾತ್ ಲಯನ್ಸ್: 7 ವಿಕೆಟ್​ಗೆ 196

ಡ್ವೇನ್ ಸ್ಮಿತ್ ಬಿ ಪೆರೇರಾ 63

ಮೆಕ್ಕಲಂ ಸಿ ಮಾರ್ಕೆಲ್ ಬಿ ಭಾಟಿಯಾ 43

ಸುರೇಶ್ ರೈನಾ ಬಿ ಪೆರೇರಾ 34

ದಿನೇಶ್ ಕಾರ್ತಿಕ್ ಸಿ ರಹಾನೆ ಬಿ ದಿಂಡಾ 33

ಡ್ವೇನ್ ಬ್ರಾವೊ ಸಿ ಧೋನಿ ಬಿ ದಿಂಡಾ 7

ರವೀಂದ್ರ ಜಡೇಜಾ ರನೌಟ್ 0

ಜೇಮ್್ಸ ಫೌಲ್ಕ್​ನರ್ ಔಟಾಗದೆ 9

ಇಶಾನ್ ಕಿಶನ್ ರನೌಟ್ 0

ಪ್ರವೀಣ್ ಕುಮಾರ್ ಔಟಾಗದೆ 0

ಇತರೆ: 7. ವಿಕೆಟ್ ಪತನ: 1-93, 2-115, 3-166, 4-180, 5-180, 6-193, 7-193. ಬೌಲಿಂಗ್: ಅಲ್ಬಿ ಮಾರ್ಕೆಲ್ 2-0-30-0, ಅಶೋಕ್ ದಿಂಡಾ 4-0-40-2, ಥಿಸ್ಸರ ಪೆರೇರಾ 4-0-41-2, ಆರ್ ಅಶ್ವಿನ್ 4-0-37-0, ರಜತ್ ಭಾಟಿಯಾ 3-0-26-1, ಎಂ ಅಶ್ವಿನ್ 3-0-22-0.

Write A Comment