ಅಂತರಾಷ್ಟ್ರೀಯ

ಔಷಧೀಯ ಗುಣಗಳನ್ನು ಒಳಗೊಂಡಿರುವ ರಸಂನಿಂದ ರೋಗ ಖತಂ

Pinterest LinkedIn Tumblr

rasam

ದಕ್ಷಿಣ ಭಾರತೀಯರ ಊಟದ ಪದ್ಧತಿಯಲ್ಲಿ `ರಸಂ’ಗೆ ಮಹತ್ವದ ಸ್ಥಾನವಿದೆ. ಊಟದ ಜತೆಗ ರಸಂ ಇದ್ದರೇನೆ ಅದು ಪರಿಪೂರ್ಣ ಎಂದು ಹೇಳಲಾಗುತ್ತದೆ. ನಾನಾ ಬಗೆಯಲ್ಲಿ ತಯಾರಿಸುವ ರಸಂ ಅತ್ಯಂತ ರುಚಿಕರ ಹಾಗೂ ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ.

ರಸಂ ಎಂದರೆ ಎಲ್ಲರಿಗೂ ಇಷ್ಟ. ಕೆಲವರಿಗೆ ಪಂಚಪ್ರಾಣ. ಕೇವಲ ಬಾಯಿ ರುಚಿಗೆ ರಸಂ ನೀಡಲಾಗುತ್ತದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಕಾರಣವೆಂದರೆ, ಅದರಲ್ಲಿನ ಹಲವು ಬಗೆಯ ಮಸಾಲೆ ಪದಾರ್ಥಗಳು ನಮ್ಮ ಆರೋಗ್ಯ ಸುಧಾರಿಸುವ ಗುಣಗಳನ್ನು ಹೊಂದಿವೆ.
ರಸಂ ತಯಾರಿಸಲು ಟೊಮೊಟೊ, ಹುಣಿಸೆಹುಳಿ, ಅರಿಶಿನ ಪುಡಿ, ಜೀರಿಗೆ, ಕರಿಬೇವು, ಕೊತ್ತಂಬರಿ ಸೊಪ್ಪು, ಮುಂತಾದವನ್ನು ಬಳಸುವುದರಿಂದ ಅವೆಲ್ಲದರಲ್ಲೂ ಔಷಧೀಯ ಗುಣಗಳಿವೆ.

ರಸಂ ತಯಾರಿಕೆ ಕುರಿತು ಎಲ್ಲರಿಗೂ ತಿಳಿದೇಇರುತ್ತದೆ. ತಯಾರಿಸುವ ಬಗೆಯಲ್ಲಿ ವಿಭಿನ್ನತೆ ಇರಬಹುದಷ್ಟೆ. ಕೆಲವರು ಇಂಗು ಬಳಸುವುದಿಲ್ಲ, ಮತ್ತೆ ಕೆಲವರಿಗೆ ರಸಂಗೆ ಇಂಗು ಹಾಕಿದರೇನೆ ತೃಪ್ತಿ.

ಅನ್ನದ ಜತೆ ರಸಂ ಮಿಶ್ರಣ ಮಾಡಿ ತಿನ್ನಲು ಬಯಸದ ಕೆಲವರು ಸೂಪ್‌ನಂತೆ ರಸಂ ಕುಡಿಯುವುದನ್ನು ನೋಡಿದ್ದೇವೆ. ನಮ್ಮ ಜೀರ್ಣಕ್ರಿಯೆಗೆ ರಸಂ ತುಂಬಾ ಉಪಕಾರಿಯಾಗಿದೆ.
ಅಜೀರ್ಣದ ಸಮಸ್ಯೆ ಇರುವವರು ನಿತ್ಯ ಒಂದು ಲೋಟ ರಸಂ ಕುಡಿದರೆ, ಅದರ ಪರಿಣಾಮವನ್ನು ತಿಳಿಯಬಹುದು.
ಹಸಿವು ಹೆಚ್ಚಳ

ರಸಂನಲ್ಲಿರುವ ಎಲ್ಲಾ ಮಸಾಲೆ ಪದಾರ್ಥಗಳು ನಮ್ಮ ಹಸಿವನ್ನು ಹೆಚ್ಚಿಸುತ್ತದೆ. ಊಟಕ್ಕೆ ಮೊದಲು ಒಂದು ಲೋಟ ರಸಂ ಕುಡಿದು ನೋಡಿ, ಆ ನಂತರದ ವ್ಯತ್ಯಾಸ ಅನುಭವಕ್ಕೆ ಬರುತ್ತದೆ.

ನಮ್ಮ ಆರೋಗ್ಯ ಸುಧಾರಿಸುವ ರಸಂನಲ್ಲಿ ವಿಟಮಿನ್ ಸಿ, ಥೈಮಿನ್, ನಿಯಾಸಿನ್ ರಿಬೋಫ್ಲಾವಿನ್ ಮತ್ತು ಫಾಲಿಕ್ ಆಸಿಡ್ ಇರುತ್ತದೆ. ರಸಂ ಸೇವನೆಯಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ.

ಪಚನಕ್ರಿಯೆಯನ್ನು ಸುಗಮಗೊಳಿಸುವುದರ ಜತೆಗೆ ದೇಹದ ತೂಕ ಇಳಿಸುವುದಕ್ಕೂ ರಸಂ ಸಹಕಾರಿ.

ಮತ್ತೊಂದು ಗಮನಾರ್ಹ ಅಂಶವೆಂದರೆ, ರಸಂನಲ್ಲಿ ಮ್ಯಾಗ್ನಿಷಿಯಂ, ಪೊಟಾಷಿಯಂ, ಸತು, ಕಬ್ಬಿಣ, ಕ್ಯಾಲ್ಸಿಯಂನಂತಹ ಖನಿಜಾಂಶಗಳೂ ಇರುತ್ತವೆ. ಇವೆಲ್ಲಾ ದೇಹಕ್ಕೆ ಆರೋಗ್ಯ ಸುಧಾರಣೆಗೆ ನೆರವಾಗುತ್ತವೆ.

ಇದರಲ್ಲಿನ ಪೋಷಕಾಂಶಗಳು ರಕ್ತ ಪರಿಚಲನೆಗೆ ಸಹಕಾರಿಯಾಗಿದ್ದು, ಇದರಿಂದ ನರ ವ್ಯವಸ್ಥೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ದಾರಿ ಮಾಡಿಕೊಡುತ್ತದೆ.

ರಸಂ ಅನ್ನು ನಿಯಮಿತ ಸೇವನೆ ಮಾಡುವುದರಿಂದ ಮಲಬದ್ಧತೆಯನ್ನು ದೂರ ಮಾಡುತ್ತದೆ.
ಹೀಗಾಗಿ ರಸಂ ಸೇವನೆಯಿಂದ ಹಲವು ಬಗೆಯ ಪ್ರಯೋಜನಗಳಿವೆ. ಅದನ್ನು ಅಚ್ಚುಕಟ್ಟಾಗಿ, ರುಚಿಕರವಾಗಿ ತಯಾರು ಮಾಡುವುದರಲ್ಲಿ ಕೈಚಳಕ ತೋರಬೇಕು. ಆ ಮೂಲಕ ಅದರ ಲಾಭವನ್ನು ಪಡೆಯಬೇಕು.

Write A Comment