ಕರ್ನಾಟಕ

ಟ್ರಾನ್ಸ್ ಫಾರ್ಮರ್‌ಮೇಲಿದ್ದ ಶವ ತೆಗೆಯಲು ವಿರೋಧ; ಮಂಡ್ಯ ಬಳಿ ಲಾಠಿ ಪ್ರಹಾರ, ಗುಂಡು

Pinterest LinkedIn Tumblr

lineman

ಮಂಡ್ಯ: ವಿದ್ಯುತ್‌ಪರಿವರ್ತಕ ದುರಸ್ತಿ ಮಾಡುವಾಗ ಮೃತಪಟ್ಟ ಲೈನ್‌ಮನ್‌ಶವವನ್ನು ಪರಿಹಾರ ಘೋಷಿಸದೇ ತೆಗೆದುಕೊಂಡು ಹೋಗುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದಾಗ ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ತಾಲ್ಲೂಕಿನ ಲೋಕಸರ ಗ್ರಾಮದ ಬಳಿ ಶುಕ್ರವಾರ ಸಂಜೆ ನಡೆದಿದೆ.

ವಿದ್ಯುತ್‌ಪರಿವರ್ತಕ ದುರಸ್ತಿ ಮಾಡುವಾಗ ‘ಸೆಸ್ಕ್‌’ ನೌಕರ, ತಾಲ್ಲೂಕಿನ ಪಣಕನಹಳ್ಳಿ ಗ್ರಾಮದ ಲಿಂಗರಾಜು (48) ಎಂಬುವವರು ಮೃತಪಟ್ಟಿದ್ದಾರೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸ್ಥಳಕ್ಕೆ ಬರಬೇಕು. ಮೃತ ನೌಕರನ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕು. ವಿದ್ಯುತ್‌ಪ್ರವಹಿಸಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರು.

ಈ ಸಂದರ್ಭದಲ್ಲಿ ಪೊಲೀಸರು ಶವ ಕೆಳಗಿಳಿಸಲು ಮುಂದಾದರು. ಆಗ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವಾಗ್ವಾದ ತೀವ್ರವಾದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಈ ವೇಳೆ ಹಲವು ಜನರಿಗೆ ಗಾಯಗಳಾದವು.

ಇದರಿಂದ ಸಿಟ್ಟಿಗೆದ್ದ ಜನರು, ಪೊಲೀಸರ ಮೂರು ಜೀಪು, ಎರಡು ಡಿಎಆರ್‌ವ್ಯಾನ್‌ಗಳ ಮೇಲೆ ಕಲ್ಲು ತೂರಿ ಜಖಂಗೊಳಿಸಿದರು. ಕಲ್ಲು ತೂರಾಟದಲ್ಲಿ ಡಿವೈಎಸ್ಪಿ ಉದೇಶ್‌, ಸಬ್‌ಇನ್‌ಸ್ಪೆಕ್ಟರ್ ಭವಿತಾ, ಕಾನ್‌ಸ್ಟೆಬಲ್‌ಗಳಾದ ಬಸವರಾಜು, ಕೃಷ್ಣ, ಗಂಗಾಧರ್‌, ಪಾಷ ಸೇರಿದಂತೆ ಹಲವರಿಗೆ ಗಾಯಗಳಾದವು.

ರೊಚ್ಚಿಗೆದ್ದಿದ್ದ ಜನತೆ ಪೊಲೀಸರನ್ನು ಬೆನ್ನಟ್ಟಿಕೊಂಡು ಹೋಗಲಾರಂಭಿಸಿದರು. ಪರಿಸ್ಥಿತಿ ಕೈ ಮೀರಲಾರಂಭಿಸಿತು. ಕೂಡಲೇ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಜನರನ್ನು ಚದುರಿಸಿದರು. ಘಟನಾ ಸ್ಥಳದಲ್ಲಿದ್ದ ‘ಸೆಸ್ಕ್‌’ ಅಧಿಕಾರಿಗಳಾದ ಅಯ್ಯಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತ ಪ್ರತಿಕ್ರಿಯೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

Write A Comment