ಮನೋರಂಜನೆ

ಪಂದ್ಯಾಟಕ್ಕೆ ಕೊನೆಯಲ್ಲಿ ಅಡ್ಡಿಪಡಿಸಿದ ಮಳೆ; ರೈಸಿಂಗ್ ಪುಣೆಗೆ ಸನ್‌ರೈಸರ್ಸ್ ವಿರುದ್ಧ ಗೆಲುವು

Pinterest LinkedIn Tumblr

dinda

ಹೈದರಾಬಾದ್‌ (ಪಿಟಿಐ): ಚುರುಕಿನ ಬೌಲಿಂಗ್ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ್ದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡ ಕೊನೆಗೂ ಗೆಲುವಿನ ಹಾದಿಗೆ ಮರಳಿದೆ.

ಐಪಿಎಲ್‌ ಒಂಬತ್ತನೇ ಆವೃತ್ತಿಯಲ್ಲಿ ಒಂದು ಪಂದ್ಯದಲ್ಲಷ್ಟೇ ಗೆಲುವು ಪಡೆದಿದ್ದ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸೋತಿತ್ತು.

ಆದ್ದರಿಂದ ನಾಯಕ ದೋನಿ ಒತ್ತಡಕ್ಕೆ ಒಳಗಾಗಿದ್ದರು. ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣ ದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸೂಪರ್‌ಜೈಂಟ್ಸ್‌ ತಂಡಕ್ಕೆ ಡಕ್ವರ್ಥ್‌ ಲೂಯಿಸ್‌ ನಿಯಮದ ಪ್ರಕಾರ 34 ರನ್‌ಗಳ ಗೆಲುವು ಲಭಿಸಿತು.

ಇದಕ್ಕೆ ಕಾರಣವಾಗಿದ್ದು ಸ್ಪಿನ್ನರ್ ಆರ್‌. ಅಶ್ವಿನ್‌ ಮತ್ತು ಮಿಷೆಲ್‌ ಮಾರ್ಷ್‌ ಅವರ ಕರಾರುವಾಕ್ಕಾದ ಬೌಲಿಂಗ್‌. ಟಾಸ್ ಸೋತ ಹೈದರಾಬಾದ್ ತಂಡ ಮೊದಲು ಬ್ಯಾಟ್ ಮಾಡಿತು.

ನಿಗದಿತ ಸಮಯದ ಪ್ರಕಾರ ಪಂದ್ಯ ರಾತ್ರಿ ಎಂಟು ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಮಳೆ ಅಡ್ಡಿಪಡಿಸಿದ ಕಾರಣ ಒಂದು ಗಂಟೆ ತಡವಾಗಿ ಆರಂಭ ವಾಯಿತು. ಒದ್ದೆಯಾದ ಮೈದಾನದಲ್ಲಿ ಸನ್‌ರೈಸರ್ಸ್ ರನ್ ಗಳಿಸಲು ಸಾಕಷ್ಟು ಪರದಾಡಿತು.

ಪ್ರಮುಖ ಬ್ಯಾಟ್ಸ್‌ಮನ್‌ ಗಳ ವೈಫಲ್ಯದಿಂದ ಸಂಕಷ್ಟ ಎದುರಿಸಿದ ತಂಡ ನಿಗದಿತ ಓವರ್‌ಗಳು ಕೊನೆ ಗೊಂಡಾಗ ಪ್ರಯಾಸ ಪಟ್ಟು 118 ರನ್‌ಗಳನ್ನಷ್ಟೇ ಕಲೆ ಹಾಕಿತು.

ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಸೂಪರ್‌ಜೈಂಟ್ಸ್‌ 11 ಓವರ್‌ ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 94 ರನ್ ಗಳಿಸಿತ್ತು. ಗೆಲುವಿಗೆ 25 ರನ್ ಅಗತ್ಯವಿದ್ದಾಗ ಮತ್ತೆ ಮಳೆ ಸುರಿಯಿತು. ಆದ್ದರಿಂದ ಫಲಿತಾಂಶ ನಿರ್ಧರಿಸಲು ಡಕ್ವರ್ಥ್‌ ಲೂಯಿಸ್‌ ನಿಯಮದ ಮೊರೆ ಹೋಗಲಾಯಿತು.

ಈ ನಿಯಮದ ಪ್ರಕಾರ ಸೂಪರ್‌ಜೈಂಟ್ಸ್‌ ತಂಡ ಹನ್ನೊಂದು ಓವರ್‌ಗಳಲ್ಲಿ 60 ರನ್ ಗಳಿಸಿರಬೇಕಿತ್ತು. ಇದಕ್ಕಿಂತಲೂ ಹೆಚ್ಚು ರನ್ ಕಲೆ ಹಾಕಿದ್ದರಿಂದ ದೋನಿ ಪಡೆಗೆ ಗೆಲುವು ಒಲಿಯಿತು.

ಪರದಾಟ: ಟೂರ್ನಿಯ ಆರಂಭದ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಶಿಖರ್ ಧವನ್‌ ಹಿಂದಿನ ಪಂದ್ಯದಿಂದ ಉತ್ತಮ ಲಯದಲ್ಲಿದ್ದಾರೆ. ಇಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈ ಕೊಟ್ಟರೂ ಧವನ್‌ ತಮ್ಮ ಸಾಮರ್ಥ್ಯ ತೋರಿಸುವಲ್ಲಿ ಎಡವಲಿಲ್ಲ. ಇವರು ಗಳಿಸಿದ ಅರ್ಧಶತಕದಿಂದಲೇ ಸನ್‌ ರೈಸರ್ಸ್‌ ತಂಡಕ್ಕೆ ನೂರು ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.

53 ಎಸೆತಗಳನ್ನು ಎದುರಿಸಿದ ಧವನ್‌ ಆರಂಭದಲ್ಲಿ ನಿಧಾನವಾಗಿ ರನ್ ಕಲೆ ಹಾಕಿದರು. ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 56 ರನ್ ಬಾರಿಸಿ ಔಟಾಗದೆ ಉಳಿದರು. ಆದರೆ ಇವರಿಗೆ ಆರಂಭದಿಂದ ಕೊನೆಯವರೆಗೂ ಒಬ್ಬ ಬ್ಯಾಟ್ಸ್‌ಮನ್‌ ನಿಂದಲೂ ಹೆಚ್ಚು ಹೊತ್ತು ಬೆಂಬಲ ಸಿಗಲಿಲ್ಲ.

ನಾಯಕ ಡೇವಿಡ್‌ ವಾರ್ನರ್‌ ಸೊನ್ನೆ ಸುತ್ತಿದರೆ, ಆದಿತ್ಯ ತಾರೆ ಗಳಿಸಿದ್ದು ಎಂಟು ರನ್ ಮಾತ್ರ. ಸನ್‌ರೈಸರ್ಸ್ ತಂಡ 32 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಮಾರ್ಗನ್‌ (0), ದೀಪಕ್‌ ಹೂಡಾ (1) ಮತ್ತು ಮೊಯ್ಸಿಸ್ ಹೆನ್ರಿಕ್ಸ್‌ (1) ಮತ್ತು ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ನಮನ್‌ ಓಜಾ (18) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

ಚುರುಕಿನ ಬೌಲಿಂಗ್: ಸಮರ್ಥ ಆಟಗಾರರನ್ನು ಹೊಂದಿದ್ದರೂ ಸೂಪರ್‌ ಜೈಂಟ್ಸ್‌ ತಂಡಕ್ಕೆ ತನ್ನ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಲು ಸಾಧ್ಯವಾಗಿರಲಿಲ್ಲ.

ಈ ತಂಡದ ಬೌಲರ್‌ಗಳು ಇಲ್ಲಿ ನಿಜವಾದ ಸಾಮರ್ಥ್ಯ ತೋರಿಸಿದರು. ಅದರಲ್ಲೂ ಮುಖ್ಯವಾಗಿ ಸ್ಪಿನ್ನರ್ ರವಿಚಂದ್ರನ್‌ ಅಶ್ವಿನ್‌ ಮತ್ತು ಮಿಷೆಲ್‌ ಮಾರ್ಷ್‌ ಚುರುಕಿನ ಬೌಲಿಂಗ್ ಮಾಡಿದರು. ನಾಲ್ಕು ಓವರ್ ಬೌಲಿಂಗ್ ಮಾಡಿದ ಮಾರ್ಷ್‌ ಎರಡು ವಿಕೆಟ್‌ ಪಡೆದು ಕೊಟ್ಟಿದ್ದು 14 ರನ್‌ಗಳನ್ನಷ್ಟೇ. ಅಶ್ವಿನ್ ಕೂಡ ಇಷ್ಟೇ ಓವರ್ ಬೌಲಿಂಗ್ ಮಾಡಿ 14 ರನ್‌ ಮಾತ್ರ ಕೊಟ್ಟರು. ಇವರ ಜೊತೆಗೆ ಅಶೋಕ್‌ ದಿಂಡಾ ಕೂಡ ಗಮನ ಸೆಳೆದರು.

ವೇಗದ ಆಟ: ಮತ್ತೆ ಮಳೆ ಬರುವ ಸೂಚನೆ ಇದ್ದ ಕಾರಣ ಸೂಪರ್‌ಜೈಂಟ್ಸ್‌ ತಂಡ ಆರಂಭದಿಂದಲೇ ವೇಗವಾಗಿ ರನ್ ಗಳಿಸಲು ಮುಂದಾಯಿತು. ಫಾಫ್‌ ಡು ಪ್ಲೆಸಿಸ್ (30) ಮತ್ತು ಸ್ಟೀವನ್‌ ಸ್ಮಿತ್‌ (ಔಟಾಗದೆ 46) ಈ ಗೆಲುವಿಗೆ ಕಾರಣರಾದರು. ಇವರು ವೇಗವಾಗಿ ರನ್ ಗಳಿಸಿದ್ದರಿಂದ ‘ಅದೃಷ್ಟ’ದ ಜಯ ಸುಲಭವಾಯಿತು.

** *** **
ಇಂದಿನ ಪಂದ್ಯ ಗೆದ್ದಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಬೌಲರ್‌ಗಳು ಉತ್ತಮವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದು ಗೆಲುವಿಗೆ ಕಾರಣ. ಸ್ಮಿತ್, ಫಾಫ್ ಫಾರ್ಮ್‌ಗೆ ಮರಳಿದ್ದಾರೆ.
-ಮಹೇಂದ್ರಸಿಂಗ್ ದೋನಿ, ಪುಣೆ ನಾಯಕ

ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್ ಹೈದರಾಬಾದ್‌ 8 ಕ್ಕೆ 118 (20 ಓವರ್‌ಗಳಲ್ಲಿ)
ಡೇವಿಡ್ ವಾರ್ನರ್‌ ಸಿ. ಅಜಿಂಕ್ಯ ರಹಾನೆ ಬಿ. ಅಶೋಕ್ ದಿಂಡಾ 00
ಶಿಖರ್ ಧವನ್ ಔಟಾಗದೆ 56
ಆದಿತ್ಯ ತಾರೆ ಸಿ. ತಿಸಾರ ಪೆರೆರಾ ಬಿ. ಅಶೋಕ್ ದಿಂಡಾ 08
ಎಯಾನ್ ಮಾರ್ಗನ್‌ ಸಿ. ಮಹೇಂದ್ರ ಸಿಂಗ್ ದೋನಿ ಬಿ. ಮಿಷೆಲ್‌ ಮಾರ್ಷ್‌00
ದೀಪಕ್‌ ಹೂಡಾ ಸಿ. ಮಹೇಂದ್ರ ಸಿಂಗ್ ದೋನಿ ಬಿ ಅಶ್ವಿನ್ 01
ಮೊಯ್ಸಿಸ್‌ ಹೆನ್ಸಿಕ್ಸ್‌ ಸಿ. ಮಹೇಂದ್ರ ಸಿಂಗ್ ದೋನಿ ಬಿ. ಮಿಷೆಲ್‌ ಮಾರ್ಷ್‌ 01
ನಮನ್‌ ಓಜಾ ಬಿ. ಅಶೋಕ್ ದಿಂಡಾ 18
ಬಿಪುಲ್‌ ಶರ್ಮಾ ರನ್ ಔಟ್‌ (ತಿಸಾರ ಪೆರೆರಾ) 05
ಭುವನೇಶ್ವರ್ ಕುಮಾರ್‌ ಸಿ. ಫಾಫ್‌ ಡು ಪ್ಲೆಸಿಸ್ ಬಿ. ತಿಸಾರ ಪೆರೆರಾ 21
ಆಶಿಶ್‌ ನೆಹ್ರಾ ಔಟಾಗದೆ 00

ಇತರೆ: (ಲೆಗ್‌ ಬೈ–5, ವೈಡ್‌–3) 08

ವಿಕೆಟ್‌ ಪತನ: 1–0 (ವಾರ್ನರ್‌; 0.), 2–26 (ತಾರೆ; 4.6), 3–27 (ಮಾರ್ಗನ್‌; 5.3), 4–29 (ಹೂಡಾ; 7.1), 5–32 (ಹೆನ್ಸಿಕ್ಸ್‌; 8.1), 6–79 (ನಮನ್‌; 16.4), 7–92 (ಬಿಪುಲ್‌; 18.1), 8–115 (ಭುವನೇಶ್ವರ್‌; 19.4).

ಬೌಲಿಂಗ್‌: ಅಶೋಕ್‌ ದಿಂಡಾ 4–1–23–3, ಮಿಷೆಲ್ ಮಾರ್ಷ್‌ 4–0–14–2, ತಿಸಾರ ಪೆರೆರಾ 4–0–32–1, ರವಿಚಂದ್ರನ್‌ ಅಶ್ವಿನ್ 4–0–14–1, ರಜತ್ ಭಾಟಿಯಾ 3–0–24–0, ಮುರುಗನ್‌ ಅಶ್ವಿನ್‌ 1–0–6–0.

ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ 3 ಕ್ಕೆ 94 (11 ಓವರ್‌ಗಳಲ್ಲಿ)
ಅಜಿಂಕ್ಯ ರಹಾನೆ ಸಿ ಎಯಾನ್ ಮಾರ್ಗನ್ ಬಿ ಭುವನೇಶ್ವರ್ ಕುಮಾರ್ 00
ಫಾಫ್ ಡು ಪ್ಲೆಸಿ ಸಿ ನಮನ್ ಓಜಾ ಬಿ ಮೊಯಿಸೆಸ್ ಹೆನ್ರಿಕ್ಸ್ 30
ಸ್ಟೀವನ್ ಸ್ಮಿತ್ ಔಟಾಗದೆ 46
ಮಹೇಂದ್ರಸಿಂಗ್ ದೋನಿ ಸಿ ಆದಿತ್ಯ ತಾರೆ ಬಿ ಆಶಿಶ್ ನೆಹ್ರಾ 05

ಇತರೆ: (ಲೆಗ್‌ಬೈ 2, ವೈಡ್ 11) 13

ವಿಕೆಟ್‌ ಪತನ: 1–0 (ರಹಾನೆ; 0.5), 2–80 (ಡುಪ್ಲೆಸಿ; 9.1), 3–94 (ದೋನಿ; 10.6)

ಬೌಲಿಂಗ್‌: ಭುವನೇಶ್ವರ್ ಕುಮಾರ್ 3–1–17–1 (ವೈಡ್ 1), ಆಶಿಶ್ ನೆಹ್ರಾ 3–0–21–1 (ವೈಡ್ 4), ಮುಸ್ತಫಿಜರ್ ರೆಹಮಾನ್ 2–0–21–0 (ವೈಡ್ 2), ಬಿಪುಲ್ ಶರ್ಮಾ 1–0–17–0, ಮೊಯಿಸೆಸ್ ಹೆನ್ರಿಕ್ಸ್ 2–0–16–1

ಫಲಿತಾಂಶ: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ಗೆ 34 ರನ್‌ಗಳಿಂದ ಜಯ (ಡಕ್ವರ್ಥ್–ಲೂಯಿಸ್ ನಿಯಮದ ಪ್ರಕಾರ)

ಪಂದ್ಯಶ್ರೇಷ್ಠ: ಅಶೋಕ್ ದಿಂಡಾ (ರೈಸಿಂಗ್ ಪುಣೆ ಸೂಪರ್ ಜೈಂಟ್ಸ್)

Write A Comment