ಕನ್ನಡ ವಾರ್ತೆಗಳು

ಮಂಗಳೂರಿನ ಉಪನ್ಯಾಸಕಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಾರಿಂಜ ಗುಡ್ಡದಲ್ಲಿ ಪತ್ತೆ.

Pinterest LinkedIn Tumblr

lecture_susied_pic

ಬಂಟ್ವಾಳ, ಎ.27: ಮಂಗಳೂರಿನಿಂದ ನಾಪತ್ತೆಯಾಗಿದ್ದ ಉಪನ್ಯಾಸಕಿಯೊಬ್ಬರ ಮೃತದೇಹ ಬಂಟ್ವಾಳ ಸಮೀಪದ ಕಾರಿಂಜ ಗುಡ್ಡದಲ್ಲಿ ಚೂಡಿದಾರದ ಶಾಲಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಮೃತ ಉಪನ್ಯಾಸಕಿಯನ್ನು ಮೂಲತಃ ಸವಣೂರು ಪುಣಚ್ಚಪಾಡಿಯ ಗಿರೀಶ್ ರೈ ಎಂಬವರ ಪುತ್ರಿ ಚೈತ್ರಾ (26) ಎಂದು ಗುರುತಿಸಲಾಗಿದೆ. ಚೈತ್ರಾರ ವಿವಾಹ ಮುಲ್ಕಿಯ ಚೇತನ್ ಎಂಬವರೊಂದಿಗೆ 8 ತಿಂಗಳ ಹಿಂದೆಯಷ್ಟೇ ನಡೆದಿತ್ತು.

ಉಪನ್ಯಾಸಕಿಯಾಗಿದ್ದ ಚೈತ್ರಾ, ಮಂಗಳೂರಿನ ಜಲ್ಲಿಗುಡ್ಡೆಯಲ್ಲಿರುವ ತನ್ನ ಗಂಡನ ಮನೆಯಲ್ಲಿ ವಾಸ್ತವ್ಯವಿದ್ದರು. ಆಕೆಯ ಗಂಡ ಚೇತನ್ ಕೆಲಸದ ನಿಮಿತ್ತ ಸದ್ಯ ವಿದೇಶದಲ್ಲಿದ್ದಾರೆಂದು ತಿಳಿದು ಬಂದಿದೆ.

ರವಿವಾರ ಚೈತ್ರಾ ಬಂಟ್ವಾಳ ಸಮೀಪದ ಕಾರಿಂಜೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದರು ಎಂದು ಹೇಳಲಾಗಿದ್ದು, ಸೋಮವಾರ ಮಧ್ಯಾಹ್ನ ಪಾರ್ವತಿ ದೇವಸ್ಥಾನದ ಬಳಿ ಇರುವ ದೈವೀವನದ ಪಕ್ಕ ಅವರ ಬ್ಯಾಗ್, ಮೊಬೈಲ್ ಮತ್ತು ಚಪ್ಪಲಿ ಪತ್ತೆಯಾಗಿತ್ತು. ಅದನ್ನು ಕಂಡ ಯಾತ್ರಾರ್ಥಿಗಳು ಬ್ಯಾಗ್ ಮತ್ತು ಮೊಬೈಲನ್ನು ದೇವಸ್ಥಾನದ ಕಚೇರಿಗೆ ಒಪ್ಪಿಸಿದ್ದರು. ಮೊಬೈಲ್ ಮೂಲಕ ಚೈತ್ರಾರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿತ್ತು.

ಅವರು ನಾಪತ್ತೆಯಾದ ಬಗ್ಗೆ ಮಂಗಳೂರು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ರವಿವಾರ ದೂರು ದಾಖಲಿಸಲಾಗಿತ್ತು. ಮಂಗಳವಾರ ಪೊಲೀಸರು ಹಾಗೂ ಮನೆಮಂದಿ ಸ್ಥಳೀಯರ ಸಹಕಾರದೊಂದಿಗೆ ಹುಡುಕಾಟ ನಡೆಸಿದಾಗ ದೇವಸ್ಥಾನದ ಪಕ್ಕದ ಬಂಡೆಯ ಇಳಿಜಾರು ಪ್ರದೇಶದಲ್ಲಿ ಚೂಡಿದಾರದ ಶಾಲನ್ನು ಕುತ್ತಿಗೆಗೆ ಕುಣಿಕೆಯನ್ನಾಗಿಸಿ ನೇಣು ಬಿಗಿದ ಸ್ಥಿತಿಯಲ್ಲಿ ಚೈತ್ರಾರ ಮೃತದೇಹ ಪತ್ತೆಯಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Write A Comment