ಮನೋರಂಜನೆ

ಪಾರ್ಥಿವ್, ಅಂಬಟಿ ಅಬ್ಬರಕ್ಕೆ ಮುಂಬೈ ತಂಡಕ್ಕೆ ಒಲಿದ ಜಯ; ಸೋಲಿನಿಂದ ಹೊರಬರದ ಕಿಂಗ್ಸ್‌

Pinterest LinkedIn Tumblr

rayudu-parthiv

ಮೊಹಾಲಿ (ಪಿಟಿಐ): ಹಿಂದಿನ ಪಂದ್ಯ ದಲ್ಲಿ ಸೋತು ನಿರಾಸೆಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಒಂಬತ್ತನೇ ಆವೃತ್ತಿಯ ಕಿಂಗ್ಸ್‌ ಇಲೆವೆನ್ ಪಂಜಾಬ್ ಎದುರಿನ ಪಂದ್ಯದಲ್ಲಿ 25 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

ಇಲ್ಲಿನ ಪಂಜಾಬ್ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್‌ ಮಾಡಲು ಮುಂದಾಯಿತು. ಬಲಿಷ್ಠ ಬ್ಯಾಟ್ಸ್‌ಮನ್‌ ಗಳನ್ನು ಹೊಂದಿರುವ ಹಾಲಿ ಚಾಂಪಿಯನ್‌ ಮುಂಬೈ ಮೊದಲು ಬ್ಯಾಟ್ ಮಾಡಲು ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿತು.

ನಾಯಕ ರೋಹಿತ್ ಶರ್ಮಾ ರನ್ ಖಾತೆ ತೆರೆಯುವ ಮೊದಲೇ ಪೆವಿಲಿ ಯನ್ ಸೇರಿದರೂ ಚಾಂಪಿಯನ್ನರ ಅಬ್ಬರದ ಆಟಕ್ಕೆ ತಡೆಯೊಡ್ಡಲು ಪಂಜಾಬ್ ತಂಡಕ್ಕೆ ಸಾಧ್ಯವಾಗಲಿಲ್ಲ. ಮುಂಬೈ ನಿಗದಿತ 20 ಓವರ್‌ಗಳು ಮುಗಿದಾಗ ಆರು ವಿಕೆಟ್‌ ಕಳೆದು ಕೊಂಡು 189 ರನ್ ಕಲೆ ಹಾಕಿತು.

ಸತತ ಸೋಲುಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಡೇವಿಡ್‌ ಮಿಲ್ಲರ್ ನಾಯಕತ್ವದ ಪಂಜಾಬ್ 20 ಓವರ್‌ ಮುಗಿದಾಗ ಏಳು ವಿಕೆಟ್‌ ನಷ್ಟಕ್ಕೆ 164 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.

2014ರ ಟೂರ್ನಿಯಲ್ಲಿ ಫೈನಲ್‌ ಬಂದು ನಿರಾಸೆ ಕಂಡಿದ್ದ ಪಂಜಾಬ್‌ ತಂಡ ಆರು ಪಂದ್ಯಗಳಲ್ಲಿ ಐದರಲ್ಲಿ ಸೋತಿದೆ. ಜಯದ ಸವಿ ಕಂಡಿದ್ದು ಒಂದೇ ಪಂದ್ಯದಲ್ಲಿ ಮಾತ್ರ.
ಅಬ್ಬರ: ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರೂ ಪಾರ್ಥಿವ್ ವೇಗವಾಗಿ ರನ್ ಗಳಿಸಲು ಹಿಂಜರಿಯಲಿಲ್ಲ.

ಒಟ್ಟು 58 ಎಸೆತಗಳನ್ನು ಎದುರಿಸಿದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ಪಾರ್ಥಿವ್ 81 ರನ್ ಬಾರಿಸಿದರು. ಗುಜರಾತ್‌ನ ಬ್ಯಾಟ್ಸ್‌ಮನ್‌ ಬಾರಿಸಿದ ಎರಡನೇ ವೈಯಕ್ತಿಕ ಗರಿಷ್ಠ ಮೊತ್ತ ಇದಾಗಿದೆ.

ಆರಂಭದಿಂದಲೇ ಅಬ್ಬರಿಸಿದ ಪಾರ್ಥಿವ್ ಒಟ್ಟು ಬೌಂಡರಿ (10) ಮತ್ತು ಸಿಕ್ಸರ್‌ಗಳ (2) ಮಳೆ ಸುರಿಸಿದರು. ಇವುಗಳಿಂದಲೇ 52 ರನ್ ಬಾರಿಸಿದರು.
ಪಾರ್ಥಿವ್ ಆಟಕ್ಕೆ ಅಂಬಟಿ ರಾಯುಡು ಉತ್ತಮ ಬೆಂಬಲ ನೀಡಿದರು. ರಾಯುಡು ಕೇವಲ 37 ಎಸೆತಗಳಿಂದ 65 ರನ್ ಬಾರಿಸಿದರು. ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಕೂಡ ಸಿಡಿಸಿದರು. ಈ ಮೂಲಕ ರಾಯುಡು ಅವರು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಒಟ್ಟು ಮೂರು ಸಾವಿರ ರನ್ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಭಾರತದ 15ನೇ ಆಟಗಾರ ರಹಾನೆ.

ಇವರಿಬ್ಬರು ಸೇರಿ 137 ರನ್ ಕಲೆ ಹಾಕಿದರು. ಇದು ಐಪಿಎಲ್‌ನಲ್ಲಿ ಎರಡನೇ ವಿಕೆಟ್‌ಗೆ ದಾಖಲಾದ ಗರಿಷ್ಠ ರನ್ ಜೊತೆಯಾಟವೆನಿಸಿತು. ಮೊದಲ ಐದು ಓವರ್‌ಗಳು ಪೂರ್ಣಗೊಂಡಾಗ ಮುಂಬೈ ತಂಡ ಒಂದು ವಿಕೆಟ್‌ ನಷ್ಟಕ್ಕೆ 25 ರನ್‌ಗಳನ್ನಷ್ಟೇ ಕಲೆ ಹಾಕಿತು.

ಹಿಂದಿನ ಪಂದ್ಯಗಳಲ್ಲಿ ಸೋತು ಗೆಲುವಿನ ಅನಿವಾರ್ಯತೆಗೆ ಸಿಲುಕಿದ್ದ ರೋಹಿತ್ ಪಡೆ ನಂತರದ ಐದು ಓವರ್‌ಗಳಲ್ಲಿ 52 ರನ್ ಕಲೆ ಹಾಕಿತು. ಮುಂಬೈ ಮೊದಲ ಹತ್ತು ಓವರ್‌ಗಳು ಮುಗಿದಾಗ 77 ರನ್ ಗಳಿಸಿತ್ತು. ಕೊನೆಯ 60 ಎಸೆತಗಳಲ್ಲಿ ರನ್ ಹೊಳೆಯನ್ನೇ ಹರಿಸಿತು. ಈ ಹತ್ತು ಓವರ್‌ಗಳಲ್ಲಿ ಬಂದ 112 ರನ್‌ಗಳೇ ಇದಕ್ಕೆ ಸಾಕ್ಷಿ.
ಪಾರ್ಥಿವ್ ಮತ್ತು ರಾಯುಡು ಕಟ್ಟಿದ ಸುಂದರ ಇನಿಂಗ್ಸ್ ಮೇಲೆ ಜಾಸ್‌ ಬಟ್ಲರ್ ಕೊನೆಯಲ್ಲಿ ರನ್ ಸೌಧ ನಿರ್ಮಿಸಿದರು.

13 ಎಸೆತಗಳನ್ನು ಎದುರಿಸಿದ ಬಟ್ಲರ್‌ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 24 ರನ್ ಕಲೆ ಹಾಕಿದರು. ಕೊನೆಯ ಐದು ಓವರ್‌ಗಳಲ್ಲಿ ಮುಂಬೈಗೆ ಮೊದಲಿನಷ್ಟು ವೇಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ.

ಪರದಾಟ: ಆರಂಭದಲ್ಲಿ ರೋಹಿತ್ ವಿಕೆಟ್‌ ಪಡೆದು ಹಿಗ್ಗಿದ ಕಿಂಗ್ಸ್‌ ತಂಡದ ಬೌಲರ್‌ಗಳು ನಂತರ ಪರದಾಡಿ ಹೋದರು. ವೇಗಿ ಮಿಷೆಲ್‌ ಜಾನ್ಸನ್‌ ನಾಲ್ಕು ಓವರ್‌ಗಳಲ್ಲಿ 43 ರನ್ ಕೊಟ್ಟರೆ, ಅಕ್ಷರ್ ಪಟೇಲ್‌ ಇಷ್ಟೇ ಓವರ್‌ಗಳಲ್ಲಿ ನೀಡಿದ್ದು 41 ರನ್. ಮೋಹಿತ್ ಶರ್ಮಾ ಮೂರು ವಿಕೆಟ್‌ ಪಡೆದರಾದರೂ ಮುಂಬೈ ಬ್ಯಾಟ್ಸ್‌ಮನ್‌ಗಳ ದಂಡನೆಗೆ ಒಳಗಾದರು.

ದಿಟ್ಟ ಹೋರಾಟ: ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡಕ್ಕೆ ಗೆಲುವು ತಂದುಕೊಡಲು ಶಾನ್ ಮಾರ್ಷ್‌ (45), ಗ್ಲೆನ್‌ ಮ್ಯಾಕ್ಸ್‌ವೆಲ್‌ (56, 39 ಎಸೆತ, 5 ಬೌಂಡರಿ, 1 ಸಿಕ್ಸರ್) ಭಾರಿ ಹೋರಾಟ ನಡೆಸಿದರು.

ಇವರು ಮೂರನೇ ವಿಕೆಟ್‌ಗೆ 61 ಎಸೆತಗಳಲ್ಲಿ 89 ರನ್ ಕಲೆ ಹಾಕಿದರು. ಡೇವಿಡ್‌ ಮಿಲ್ಲರ್‌ (ಔಟಾಗದೆ 30) ಜಯಕ್ಕಾಗಿ ಕೊನೆಯವರೆಗೂ ಯತ್ನಿಸಿ ದರೂ ಸಾಧ್ಯವಾಗಲಿಲಲ್ಲ. ಇನ್ನುಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ರನ್ ವೇಗ ಹೆಚ್ಚಿಸುವಲ್ಲಿ ವಿಫಲವಾದರು.

ಸ್ಕೋರ್‌ಕಾರ್ಡ್‌

ಮುಂಬೈ ಇಂಡಿಯನ್ಸ್‌ 6 ಕ್ಕೆ 189 (20 ಓವರ್‌ಗಳಲ್ಲಿ)

ರೋಹಿತ್‌ ಶರ್ಮಾ ಸಿ. ನಿಖಿಲ್‌ ನಾಯ್ಕ್‌ ಬಿ. ಸಂದೀಪ್‌ ಶರ್ಮಾ 00
ಪಾರ್ಥಿವ್ ಪಟೇಲ್‌ ಸಿ. ಶಾನ್ ಮಾರ್ಷ್‌ ಬಿ. ಮಿಷೆಲ್‌ ಜಾನ್ಸನ್‌ 81
ಅಂಬಟಿ ರಾಯುಡು ಸಿ. ಮನನ್‌ ವೊಹ್ರಾ ಬಿ. ಅಕ್ಷರ್‌ ಪಟೇಲ್‌ 65
ಜಾಸ್ ಬಟ್ಲರ್‌ ಬಿ. ಮೋಹಿತ್‌ ಶರ್ಮಾ 24
ಕೀರನ್ ಪೊಲಾರ್ಡ್‌ ಸಿ. ಸಂದೀಪ್‌ ಶರ್ಮಾ ಬಿ. ಮೋಹಿತ್‌ ಶರ್ಮಾ 10
ಹಾರ್ದಿಕ್‌ ಪಾಂಡ್ಯ ಸಿ. ಡೇವಿಡ್ ಮಿಲ್ಲರ್ ಬಿ. ಮೋಹಿತ್ ಶರ್ಮಾ 04
ಕೃಣಾಲ್‌ ಪಾಂಡ್ಯ ಔಟಾಗದೆ 00
ಇತರೆ: (ಲೆಗ್ ಬೈ–1, ವೈಡ್‌–3, ನೋ ಬಾಲ್‌–1) 05
ವಿಕೆಟ್‌ ಪತನ: 1–0 (ರೋಹಿತ್‌; 0.2), 2–137 (ರಾಯುಡು; 14.3), 3–174 (ಬಟ್ಲರ್‌; 17.5), 4–180 (ಪಾರ್ಥಿವ್‌; 18.4), 5–189 (ಕೀರನ್‌; 19.5), 6–189 (ಹಾರ್ದಿಕ್‌; 19.6).
ಬೌಲಿಂಗ್‌: ಸಂದೀಪ್ ಶರ್ಮಾ 4–0–20–1, ಮಿಷೆಲ್‌ ಜಾನ್ಸನ್‌ 4–0–43–1, ಅಕ್ಷರ್ ಪಟೇಲ್‌ 4–0–41–1,ಮೋಹಿತ್ ಶರ್ಮಾ 4–0–38–3, ಗ್ಲೆನ್‌ ಮ್ಯಾಕ್ಸ್‌ವೆಲ್‌ 1–0–11–0, ಪ್ರದೀಪ್‌ ಸಾಹು 3–0–35–0.

ಕಿಂಗ್ಸ್ ಇಲೆವನ್ ಪಂಜಾಬ್ 7 ಕ್ಕೆ 164 (20 ಓವರ್‌ಗಳಲ್ಲಿ)

ಮುರಳಿ ವಿಜಯ್ ಸಿ ಜಾಸ್ ಬಟ್ಲರ್‌ ಬಿ ಟಿಮ್ ಶೌಥಿ 19
ಮನನ್ ವೊಹ್ರಾ ಸಿ ಜಾಸ್ ಬಟ್ಲರ್ ಬಿ ಜಸ್‌ಪ್ರೀತ್ ಬೂಮ್ರಾ 07
ಶಾನ್‌ ಮಾರ್ಷ್ ಸಿ ಅಂಬಟಿ ರಾಯುಡು ಬಿ ಟಿಮ್ ಸೌಥಿ 45
ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಜಸ್‌ಪ್ರೀತ್ ಬೂಮ್ರಾ 56
ಡೇವಿಡ್ ಮಿಲ್ಲರ್ ಔಟಾಗದೆ 30
ನಿಖಿಲ್ ನಾಯಕ್ ಬಿ ಜಸ್‌ಪ್ರೀತ್ ಬೂಮ್ರಾ 01
ಅಕ್ಷರ್ ಪಟೇಲ್ ಬಿ ಮಿಷೆಲ್ ಮೆಕ್‌ಲೆಂಗಾನ್ 00
ಮಿಷೆಲ್ ಜಾನ್ಸನ್ ಬಿ ಮಿಷೆಲ್ ಮೆಕ್‌ಲೆಂಗಾನ್ 01
ಮೋಹಿತ್ ಶರ್ಮಾ ಔಟಾಗದೆ 00
ಇತರೆ: (ಲೆಗ್‌ಬೈ 1, ವೈಡ್ 2, ನೋಬಾಲ್ 1) 05
ವಿಕೆಟ್‌ ಪತನ: 1–20 (ವಿಜಯ್; 2.5), 2–32 (ವೊಹ್ರಾ; 4.5), 3–121 (ಮಾರ್ಷ್; 14.6), 4–139 (ಮ್ಯಾಕ್ಸ್‌ವೆಲ್; 17.1), 5–141 (ನಾಯಕ್; 17.5), 6–149 (ಪಟೇಲ್; 18.3), 7–151 (ಜಾನ್ಸನ್; 18.6)
ಬೌಲಿಂಗ್‌: ಟಿಮ್ ಸೌಥಿ 4–0–28–2, ಮಿಷೆಲ್ ಮೆಕ್‌ಲೆಂಗಾನ್ 4–0–32–2 (ನೋಬಾಲ್ 1, ವೈಡ್ 2), ಜಸ್‌ಪ್ರೀತ್ ಬೂಮ್ರಾ 4–0–26–3, ಕೃಣಾಲ್ ಪಾಂಡ್ಯ 2–0–20–0, ಹರಭಜನ್ ಸಿಂಗ್ 4–0–31–0, ಕೀರನ್ ಪೊಲಾರ್ಡ್ 2–0–25–0
ಫಲಿತಾಂಶ: ಮುಂಬೈ ಇಂಡಿಯನ್‌ಗೆ 25 ರನ್‌ ಜಯ.
ಪಂದ್ಯಶ್ರೇಷ್ಠ: ಪಾರ್ಥಿವ್ ಪಟೇಲ್

Write A Comment