ಮನೋರಂಜನೆ

ವಿಲಿಯರ್ಸ್–ವಿರಾಟ್ ಸುಂದರ ಜೊತೆಯಾಟ: ಆರ್‌ಸಿಬಿಗೆ ಜಯ-ರೈಸಿಂಗ್ ಪುಣೆಗೆ ಸೋಲು

Pinterest LinkedIn Tumblr

kohli

ಪುಣೆ: ಮತ್ತೊಮ್ಮೆ ಅಬ್ಬರಿಸಿದ ಎ.ಬಿ. ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್‌ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಕ್ರವಾರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ ಎದುರು ಗೆದ್ದಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು 13 ರನ್‌ಗಳಿಂದ ರೈಸಿಂಗ್ ಪುಣೆ ಸೂಪರ್‌ ಜೈಂಟ್ಸ್ ತಂಡವನ್ನು ಸೋಲಿಸಿತು.

ಟಾಸ್ ಗೆದ್ದು ಮಹೇಂದ್ರಸಿಂಗ್ ದೋನಿ ಬಳಗವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು ವಿರಾಟ್‌ ಕೊಹ್ಲಿ (80 ;63ಎ, 7ಬೌಂ, 2ಸಿ) ಮತ್ತು ಎ.ಬಿ. ಡಿವಿಲಿಯರ್ಸ್ (83; 46ಎ, 6ಬೌಂ, 4 ಸಿ) ಅವರ ಎರಡನೇ ವಿಕೆಟ್‌ ಜೊತೆಯಾಟದಿಂದಾಗಿ 20 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದು ಕೊಂಡು 185 ರನ್‌ಗಳ ಮೊತ್ತ ಗಳಿಸಿತು.

ಅಜಿಂಕ್ಯ ರಹಾನೆ (60; 46ಎ, 8ಬೌಂ) ಮತ್ತು ಮಹೇಂದ್ರಸಿಂಗ್ ದೋನಿ (41; 38ಎ, 3ಬೌಂ) ಅವರ ಆಕರ್ಷಕ ಬ್ಯಾಟಿಂಗ್‌ನ ಹೊರತಾಗಿಯೂ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 172 ರನ್ ಗಳಿಸಿತು.

ಮತ್ತೆ ಮಿಂಚಿದ ಕೊಹ್ಲಿ–ಎಬಿಡಿ
ಸನ್‌ರೈಸರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳ ಎದುರು ಆಡಿದ್ದ ಆರ್‌ಸಿಬಿಗೆ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಆಸರೆಯಾಗಿದ್ದ ಕೊಹ್ಲಿ ಮತ್ತು ಎಬಿಡಿ ಜೋಡಿಯು ಮತ್ತೊಮ್ಮೆ ಮಿಂಚಿತು.

ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಕೇವಲ 7 ರನ್ ಗಳಿಸಿ ಔಟಾದರು. ನಂತರ ಕೊಹ್ಲಿ ಜೊತೆಗೂಡಿದ ಎಬಿಡಿ ತಮ್ಮ ಬೀಸಾಟ ಆರಂಭಿಸಿದರು. ಅನುಭವಿ ವೇಗಿ ಇಶಾಂತ್ ಶರ್ಮಾ, ಅಂಕಿತ್ ಶರ್ಮಾ ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಎಸೆತಗಳನ್ನು ಲೀಲಾಜಾಲವಾಗಿ ಆಡಿದರು. ನಾಯಕ ದೋನಿ ಪದೇ ಪದೇ ಬೌಲರ್‌ಗಳನ್ನು ಬದಲಿಸಿ ಕಣಕ್ಕಿಳಿಸಿದ್ದು ಫಲ ನೀಡಲಿಲ್ಲ.
ಡಿವಿಲಿಯರ್ಸ್ ಕೇವಲ 25 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಟೂರ್ನಿಯಲ್ಲಿ ಇದು ಅವರ ಮೂರನೇ ಅರ್ಧಶತಕ. ಅದರಲ್ಲಿ 4 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು.

ಇನ್ನೊಂದೆಡೆ ಸ್ವಲ್ಪ ಎಚ್ಚರಿಕೆಯಿಂದ ಆಡಿದ ಕೊಹ್ಲಿ ಅದಕ್ಕಾಗಿ 47 ಎಸೆತಗಳ ಅರ್ಧಶತಕ ಪೂರೈಸಿದರು. ನಂತರ ಇಬ್ಬರೂ ಮತ್ತಷ್ಟು ಬಿರುಸಿನ ಆಟ ಆರಂಭಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ ಸೇರಿ 158 ರನ್‌ ಪೇರಿಸಿದರು. ಆದರೆ, ತಂಡಕ್ಕೆ 200 ರನ್‌ಗಳ ಮೊತ್ತವನ್ನು ಪೇರಿಸುವ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ತಿಸಾರ ಪೆರೆರಾ ಬೌಲಿಂಗ್ ಮಾಡಿದ 20ನೇ ಓವರ್‌ನಲ್ಲಿ ಇಬ್ಬರೂ ಔಟಾದರು.

ರಿಚರ್ಡ್ಸನ್‌ ಮಿಂಚು: ಕಳೆದ ಮೂರು ಪಂದ್ಯಗಳಲ್ಲಿಯೂ ಆರ್‌ಸಿಬಿ ತಂಡದ ಬೌಲಿಂಗ್‌ ಪರಿಣಾಮಕಾರಿಯಾಗಿರಲಿಲ್ಲ. ಅದರಲ್ಲೂ ಡೇರ್‌ಡೆವಿಲ್ಸ್‌ ಮತ್ತು ಮುಂಬೈ ತಂಡಗಳ ಎದುರಿನ ಪಂದ್ಯಗಳಲ್ಲಿ ಕಳಪೆ ಆಟವಾಡಿದ್ದರು. ಆದರೆ ಪುಣೆಯಲ್ಲಿ ಮಾತ್ರ ಬೌಲರ್‌ಗಳು ಉತ್ತಮವಾಗಿ ಆಡಿದರು.

ಅದರಲ್ಲೂ ಬಲಗೈ ವೇಗಿ ಕೇನ್ ರಿಚರ್ಡ್‌ಸನ್ (3–0–13–3) ಪ್ರಮುಖ ಹಂತಗಳಲ್ಲಿ ವಿಕೆಟ್‌ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಮಧ್ಯಮ ವೇಗಿ ಶೇನ್ ವ್ಯಾಟ್ಸನ್ ಕೂಡ (31ಕ್ಕೆ2) ಉತ್ತಮ ಬೌಲಿಂಗ್ ಮಾಡಿದರು. ಆದರೆ, ಸ್ಟುವರ್ಟ್‌ ಬಿನ್ನಿ ಮತ್ತು ಹರ್ಷಲ್ ಪಟೇಲ್ ಹೆಚ್ಚು ರನ್ ನೀಡಿದರು.

ಜೊತೆಯಾಟ: ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿ ಇರು ವವರೆಗೂ ಪುಣೆ ತಂಡದ ಗೆಲುವಿನ ನಿರೀಕ್ಷೆ ಇತ್ತು. ಎರಡನೇ ಓವರ್‌ ನಲ್ಲಿಯೇ ಪ್ಲೆಸಿ ಅವರು ಔಟಾದರು. ನಂತರ ಗಾಯಗೊಂಡ ಪೀಟರ್ಸನ್‌ ವಿಶ್ರಾಂತಿಗಾಗಿ ಮರಳಿದರು. ನಂತರ ಬಂದ ಸ್ಟೀವ್ ಸ್ಮಿತ್‌ ಅವರು ಕೊಹ್ಲಿ ಚುರುಕಿನ ಫೀಲ್ಡಿಂಗ್ ಮತ್ತು ನಿಖರ ಥ್ರೋಗೆ ರನ್‌ಔಟ್ ಆದರು. ಅಜಿಂಕ್ಯ ಜೊತೆಗೂಡಿದ ದೋನಿ ಮೂರನೇ ವಿಕೆಟ್‌ಗೆ 91 ರನ್‌ಗಳನ್ನು ಸೇರಿಸಿದರು.

ಇದರಿಂದಾಗಿ ತಂಡವು 14.4 ಓವರ್‌ಗಳಲ್ಲಿ 109 ರನ್ ಗಳಿಸಿತ್ತು. ಸ್ಯಾಮುಯೆಲ್ ಬದ್ರಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ತಬ್ರೇಜ್ ಶಮ್ಸಿ ಅವರ ಎಸೆತದಲ್ಲಿ ವಿಕೆಟ್‌ಕೀಪರ್‌ ರಾಹುಲ್‌ಗೆ ಕ್ಯಾಚಿತ್ತ ರಹಾನೆ ನಿರ್ಗಮಿಸಿದರು. ನಂತರದ ಓವರ್‌ನಲ್ಲಿ ದೋನಿ ಕೂಡ ಔಟಾದರು. ತಿಸಾರ ಪೆರೆರಾ (34 ರನ್) ಮತ್ತು ರಜತ್ ಭಾಟಿಯಾ (21 ರನ್) ಅವರು ಸ್ವಲ್ಪ ಹೋರಾಟ ಮಾಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲಿಲ್ಲ. ಇದರಿಂದಾಗಿ ಪುಣೆ ತಂಡವು ಸೋಲನುಭವಿಸಿತು.

ಸ್ಕೋರ್‌ಕಾರ್ಡ್‌
ಆರ್‌ಸಿಬಿ 3 ಕ್ಕೆ 185 (20 ಓವರ್‌ಗಳಲ್ಲಿ)

ವಿರಾಟ್ ಕೊಹ್ಲಿ ಸಿ ಅಜಿಂಕ್ಯರಹಾನೆ ಬಿ ತಿಸಾರ ಪೆರೆರಾ 80
ಕೆ.ಎಲ್. ರಾಹುಲ್ ಸಿ ಇಶಾಂತ್ ಶರ್ಮಾ ಬಿ ತಿಸಾರ ಪೆರೆರಾ ಬಿ 07
ಎ.ಬಿ. ಡಿವಿಲಿಯರ್ಸ್ ಸಿ ಅಂಕಿತ್ ಶರ್ಮಾ ಬಿ ತಿಸಾರ ಪೆರೆರಾ 83
ಶೇನ್ ವ್ಯಾಟ್ಸನ್ ಔಟಾಗದೆ 01
ಸರ್ಫರಾಜ್ ಖಾನ್ ಔಟಾಗದೆ 02
ಇತರೆ: (ವೈಡ್ 11, ನೋಬಾಲ್ 1) 12
ವಿಕೆಟ್‌ ಪತನ: 1–27 (ರಾಹುಲ್; 3.4), 2–182 (ಕೊಹ್ಲಿ; 19.3), 3–182 (ಡಿವಿಲಿಯರ್ಸ್; 19.4)
ಬೌಲಿಂಗ್‌: ಇಶಾಂತ್ ಶರ್ಮಾ 4–0–47–0 (ನೋಬಾಲ್ 1, ವೈಡ್ 2), ತಿಸಾರ ಪೆರೆರಾ 4–0–34–3 (ವೈಡ್ 2), ಅಂಕಿತ್ ಶರ್ಮಾ 4–0–31–0 (ವೈಡ್ 1), ರಜತ್ ಭಾಟಿಯಾ 3–0–22–0, ಆರ್. ಅಶ್ವಿನ್ 3–0–22–0 (ವೈಡ್ 2), ಮುರುಗನ್ ಅಶ್ವಿನ್ 2–0–29–0

ಪುಣೆ ಸೂಪರ್‌ಜೈಂಟ್ಸ್‌ 8 ಕ್ಕೆ 172 (20 ಓವರ್‌ಗಳಲ್ಲಿ)

ಅಜಿಂಕ್ಯ ರಹಾನೆ ಸ್ಟಂಪ್ಡ್‌ ಕೆ.ಎಲ್‌. ರಾಹುಲ್‌ ಬಿ. ತಬ್ರೇಜ್‌ ಶಮ್ಸಿ 60
ಫಾಫ್‌ ಡು ಪ್ಲೆಸಿಸ್‌ ಸಿ. ಹರ್ಷಲ್‌ ಪಟೇಲ್‌ ಬಿ. ಕೇನ್ ರಿಚರ್ಡ್‌ಸನ್‌ 02
ಕೆವಿನ್ ಪೀಟರ್ಸನ್‌ ಗಾಯಗೊಂಡು ನಿವೃತ್ತಿ 00
ಸ್ಟೀವನ್ ಸ್ಮಿತ್‌ ರನ್‌ ಔಟ್‌ (ವಿರಾಟ್‌ ಕೊಹ್ಲಿ) 04
ಮಹೇಂದ್ರ ಸಿಂಗ್ ದೋನಿ ಸಿ. ಡಿವಿಲಿಯರ್ಸ್ ಬಿ. ಹರ್ಷಲ್‌ ಪಟೇಲ್‌ 41
ತಿಸಾರ ಪೆರೆರಾ ಸಿ. ಮನದೀಪ್‌ ಸಿಂಗ್ ಬಿ. ಶೇನ್‌ ವ್ಯಾಟ್ಸನ್‌ 34
ರಜತ್‌ ಭಾಟಿಯಾ ಸಿ. ಶೇನ್‌ ವ್ಯಾಟ್ಸನ್‌ ಬಿ. ಕೇನ್ ರಿಚರ್ಡ್‌ಸನ್‌ 21
ರವಿಚಂದ್ರನ್‌ ಅಶ್ವಿನ್‌ ಸಿ. ಹರ್ಷಲ್‌ ಪಟೇಲ್ ಬಿ. ಶೇನ್ ವ್ಯಾಟ್ಸನ್‌ 00
ಅಂಕಿತ್ ಶರ್ಮಾ ಔಟಾಗದೆ 03
ಮುರುಗನ್ ಅಶ್ವಿನ್‌ ಸಿ. ಡಿವಿಲಿಯರ್ಸ್‌ ಬಿ. ಕೇನ್ ರಿಚರ್ಡ್‌ಸನ್‌ 00
ಇಶಾಂತ್‌ ಶರ್ಮಾ ಔಟಾಗದೆ 00
ಇತರೆ: (ಬೈ–1, ವೈಡ್‌–6) 07
ವಿಕೆಟ್‌ ಪತನ: 1–2 (ಪ್ಲೆಸಿಸ್‌; 1.4), 2–18 (ಸ್ಮಿತ್‌; 2.3), 3–109 (ರಹಾನೆ; 14.4), 4–120 (ದೋನಿ; 15.5), 5–164 (ಪೆರೆರಾ; 18.3), 6–165 (ರವಿಚಂದ್ರನ್‌; 18.5), 7–169 (ಭಾಟಿಯಾ; 19.3), 8–169 (ಮುರುಗನ್‌; 19.4).
ಬೌಲಿಂಗ್‌: ಸ್ಟುವರ್ಟ್‌ ಬಿನ್ನಿ 2–0–23–0, ಕೇನ್‌ ರಿಚರ್ಡ್‌ಸನ್‌ 3–0–13–3, ಹರ್ಷಲ್‌ ಪಟೇಲ್ 4–0–46–1, ಶೇನ್‌ ವ್ಯಾಟ್ಸನ್‌ 4–0–31–2, ತಬ್ರೇಜ್‌ ಶಮ್ಸಿ 4–0–36–1, ಇಕ್ಬಾಲ್ ಅಬ್ದುಲ್ಲಾ 3–0–22–0.

ಫಲಿತಾಂಶ: ಆರ್‌ಸಿಬಿ ತಂಡಕ್ಕೆ 13 ರನ್ ಗೆಲುವು
ಪಂದ್ಯ ಶ್ರೇಷ್ಠ: ಡಿವಿಲಿಯರ್ಸ್‌

Write A Comment