ರಾಷ್ಟ್ರೀಯ

ಗುಡ್‌ಗಾಂವ್‌ ಜಿಲ್ಲೆ ಇನ್ನು ಮುಂದೆ ಗುರುಗ್ರಾಮ: ಹರಿಯಾಣ ಸರಕಾರ

Pinterest LinkedIn Tumblr

Gurgaon-700ಗುಡ್‌ಗಾಂವ್‌ : ಹರಿಯಾಣ ಸರಕಾರ ಗುಡ್‌ಗಾಂವ್‌ ಜಿಲ್ಲೆಗೆ ಗುರುಗ್ರಾಮ ಜಿಲ್ಲೆ ಎಂದು ಪುನರ್‌ ನಾಮಕರಣ ಮಾಡಲು ನಿರ್ಧರಿಸಿದೆ.

ಸರಕಾರದ ಅಧಿಕೃತ ವೆಬ್‌ಸೈಟ್‌ ಹೇಳುವಂತೆ ಗುಡ್‌ಗಾಂವ್‌ ಜಿಲ್ಲೆ ಪ್ರಾಚೀನ ಕಾಲದಲ್ಲಿ ಗುರು ಗ್ರಾಮ ಎಂದೇ ಕರೆಯಲ್ಪಡುತ್ತಿತ್ತು. ಕಾಲಕ್ರಮೇಣ ಅದು ಅಪಭ್ರಂಶಗೊಂಡು ಗುಡ್‌ಗಾಂವ್‌ ಎಂದಾಯಿತು.

ಗುಡ್‌ಗಾಂವ್‌ ಜಿಲ್ಲೆಗೆ ಆ ಹೆಸರು ಗುರು ದ್ರೋಣಾಚಾರ್ಯ ಅವರ ಹೆಸರಿನಿಂದ ಬಂದಿದೆ. ಪಾಂಡವರು ಗುಡ್‌ಗಾಂವ್‌ ಗ್ರಾಮವನ್ನು ತಮ್ಮ ಗುರುಗಳಾದ ದ್ರೋಣಾಚಾರ್ಯರಿಗೆ ಗುರು ದಕ್ಷಿಣೆಯಾಗಿ ನೀಡಿದ್ದರಂತೆ. ಅಂತೆಯೇ ಅದು ಗುರು ಗ್ರಾಮ ಎಂದೇ ಖ್ಯಾತವಾಯಿತು.

ಆದರೆ ಕಾಲಕ್ರಮದಲ್ಲಿ ಗುರುಗ್ರಾಮವು ಜನರ ಆಡುಭಾಷೆಯಲ್ಲಿ ಗುಡ್‌ಗಾಂವ್‌ ಎಂದು ಅಪಭ್ರಂಶಗೊಂಡಿತು. ಒಟ್ಟಿನಲ್ಲಿ ಗುಡ್‌ಗಾಂವ್‌ ಜಿಲ್ಲೆಯು ಮಹಾಭಾರತದ ಕಾಲದಿಂದಲೂ ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ಅದರ ಮೂಲ ಹೆಸರಾದ ಗುರುಗ್ರಾಮವೇ ಸಾಕ್ಷಿಯಾಗಿದೆ ಎಂದು ಸರಕಾರದ ಅಧಿಕೃತ ವೆಬ್‌ಸೈಟ್‌ ಹೇಳಿದೆ.

ಹರಿಯಾಣ ಸರಕಾರ ಗುಡ್‌ಗಾಂವ್‌ ಜಿಲ್ಲೆಯ ಹೆಸರನ್ನು ಗುರುಗ್ರಾಮವೆಂದು ಪುನರ್‌ ನಾಮಕರಣ ಮಾಡಲು ನಿರ್ಧರಿಸಿದೆಯಾದರೂ ಈಗ ಶರವೇಗದಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಗುಡ್‌ಗಾಂವ್‌ ನಗರದ ಹೆಸರನ್ನು ಅಂತೆಯೇ ಬದಲಾಯಿಸಲು ಉದ್ದೇಶಿಸಿದೆಯೇ ಇಲ್ಲವೇ ಎಂಬುದು ಈಗಿನ್ನೂ ಸ್ಪಷ್ಟವಾಗಿಲ್ಲ.

ಗುಡ್‌ಗಾಂವ್‌ ಜಿಲ್ಲೆಯು ಮೂರು ಉಪವಿಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಅವೆಂದರೆ ಗುಡ್‌ಗಾಂವ್‌ ಉತ್ತರ, ಗುಡ್‌ಗಾಂವ್‌ ದಕ್ಷಿಣ ಮತ್ತು ಪಟೌಡಿ. ಇವುಗಳು ಮತ್ತೆ ಐದು ತೆಹಶೀಲ್‌ಗ‌ಳಾಗಿ ವಿಭಜಿಸಲ್ಪಟ್ಟಿವೆ. ಅವೆಂದರೆ ಗುಡ್‌ಗಾಂವ್‌, ಸೊಹಾ°, ಪಟೌಡಿ, ಫಾರೂಕ್‌ ನಗರ್‌, ಮಾನೇಸರ್‌. ಇದು ನಾಲ್ಕು ಬ್ಲಾಕ್‌ಗಳನ್ನು ಒಳಗೊಂಡಿದೆ. ಅವೆಂದರೆ ಪಟೌಡಿ, ಸೊಹಾ°, ಗುಡ್‌ಗಾಂವ್‌ ಮತ್ತು ಫಾರೂಕ್‌ನಗರ್‌.

ಹರಿಯಾಣ ಸರಕಾರ ಇಂದು ಮೇವಾತ್‌ ಜಿಲ್ಲೆಯನ್ನು ನೂಹ್‌ ಎಂದು ಪುನರ್‌ ನಾಮಕರಣ ಮಾಡಲು ಕೂಡ ನಿರ್ಧರಿಸಿದೆ.
-ಉದಯವಾಣಿ

Write A Comment