ಅಂತರಾಷ್ಟ್ರೀಯ

ವಾಟ್ಸ್‌ಆ್ಯಪ್‌ ಸಂದೇಶಗಳೀಗ ಸುರಕ್ಷಿತ

Pinterest LinkedIn Tumblr

watsapp

ಸ್ಯಾನ್‌ ಫ್ರಾನ್ಸಿಸ್ಕೊ : ಜನಪ್ರಿಯ ಸಂದೇಶವಾಹಕ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುವ ಸಂದೇಶಗಳು ಇನ್ನು ಮುಂದೆ ಸಂಪೂರ್ಣ ಸುರಕ್ಷಿತವಾಗಿರಲಿದೆ.

ಸಂದೇಶ ರವಾನಿಸುವ ವ್ಯಕ್ತಿಯಿಂದ ಅದನ್ನು ಸ್ವೀಕರಿಸುವ ವ್ಯಕ್ತಿಯವರೆಗೆ ಬೇರೆಲ್ಲೂ ಸಂದೇಶ ಸೋರಿಕೆಯಾಗದಂತಹ (ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌) ಸೇವೆಯನ್ನು ವಾಟ್ಸ್‌ಆ್ಯಪ್‌ ಮಂಗಳವಾರದಿಂದ ಪ್ರಾರಂಭಿಸಿದೆ. ಈ ವ್ಯವಸ್ಥೆಯಲ್ಲಿ ಮೂರನೇ ವ್ಯಕ್ತಿಗೆ ಸಂದೇಶ ಓದಲು ಅವಕಾಶ ದೊರೆಯುವುದಿಲ್ಲ.

ಭಾರತ, ಬ್ರೆಜಿಲ್‌ ಮತ್ತು ಯುರೋಪ್‌ ಸೇರಿದಂತೆ ಜಗತ್ತಿನ 50ಕ್ಕೂ ಹೆಚ್ಚು ಭಾಷೆಗಳಲ್ಲಿ ರವಾನೆಯಾಗುವ ಚಿತ್ರಗಳು, ವಿಡಿಯೊಗಳು ಮತ್ತು ಸಮೂಹ ಬರಹ ಸಂದೇಶಗಳಿಗೆ ಇದು ಅನ್ವಯವಾಗಲಿದೆ. ಇದಕ್ಕೂ ಮುಂಚೆ ಒಬ್ಬರಿಂದ ಇನ್ನೊಬ್ಬರಿಗೆ ಕಳುಹಿಸಲಾಗುವ ಬರಹ ಸಂದೇಶಗಳನ್ನು ಮಾತ್ರ ಸಂಪೂರ್ಣ ಎನ್‌ಕ್ರಿಪ್ಟ್‌ ಮಾಡಲಾಗಿತ್ತು.

‘ಸೂಕ್ಷ್ಮವಾದ ಮಾಹಿತಿಗಳನ್ನು ಮೂರನೇ ವ್ಯಕ್ತಿಗಳು ನೋಡುವ ಮತ್ತು ಕಳವು ಮಾಡುವ ಪ್ರಕರಣಗಳನ್ನು ಪ್ರತಿನಿತ್ಯವೂ ನೋಡುತ್ತಿದ್ದೆವು. ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜನರ ಇನ್ನಷ್ಟು ಡಿಜಿಟಲ್‌ ಮಾಹಿತಿ ಮತ್ತು ಸಂವಹನದ ಮೇಲೆ ತೀವ್ರ ದಾಳಿ ನಡೆಯುವ ಅಪಾಯವಿದೆ’ ಎಂದು ವಾಟ್ಸ್‌ಆ್ಯಪ್‌ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

‘ಅದೃಷ್ಟವಶಾತ್‌ ಈ ಸೌಲಭ್ಯದಿಂದಾಗಿ ಆರಂಭದಿಂದ ಕೊನೆವರೆಗೆ ಸಂದೇಶಗಳನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗುತ್ತಿದೆ’ ಎಂದು ಹೇಳಿದೆ. ವಾಟ್ಸ್‌ಆ್ಯಪ್‌ನ ಈ ವ್ಯವಸ್ಥೆಗೆ ಕೆಲವೆಡೆ ವಿರೋಧ ವ್ಯಕ್ತವಾಗಿದೆ.

ಇದು ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡುವ ಸಾಧ್ಯತೆಯಿದೆ ಎಂಬ ಕಳವಳ ವ್ಯಕ್ತವಾಗಿದೆ. ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಅಪರಾಧ ಚಟುವಟಿಕೆಗಳ ಕುರಿತಾದ ಮಾಹಿತಿ ಸಂಗ್ರಹಕ್ಕೆ ಇದರಿಂದ ತೊಡಕಾಗಲಿದೆ ಎನ್ನಲಾಗಿದೆ.

Write A Comment