ಮನೋರಂಜನೆ

ನಟಿ ಪ್ರತ್ಯೂಷ ಸಾವಿನ ಸುತ್ತ ಅನುಮಾನಗಳ ಹುತ್ತ: ರಾಹುಲ್ ಬಂಧನ

Pinterest LinkedIn Tumblr

pratyusha

ನವದೆಹಲಿ: ಕಿರುತೆರೆ ಜನಪ್ರಿಯ ನಟಿ ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಗೆಳೆಯ ರಾಹುಲ್ ರಾಜ್ ಸಿಂಗ್ ನನ್ನು ಶನಿವಾರ ಬಂಧನಕ್ಕೊಳಪಡಿಸಿದ್ದಾರೆಂದು ಹೇಳಲಾಗುತ್ತಿದೆ.

ಪ್ರತ್ಯೂಷ ಅವರು ತಮ್ಮ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದರು. ಆತ್ಮಹತ್ಯೆ ಪ್ರಕರಣದ ಸುತ್ತ ಹಲವು ಅನುಮಾನಗಳು ಮೂಡಿದ್ದವು. ಇದರಂತೆ ಪ್ರತ್ಯೂಷ ಸಂಬಂಧಿಕರು ಹಾಗೂ ಆಕೆಯನ್ನು ಹತ್ತಿರದಲ್ಲಿ ನೋಡಿದ ಗೆಳೆಯರು ಇದು ಆತ್ಮಹತ್ಯೆಯಲ್ಲ ಯೋಜನೆ ರೂಪಿಸಿ ಮಾಡಿರುವ ಕೊಲೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ಹಲವರು ಪ್ರತ್ಯೂಷ ಸಾವಿನ ಹಿಂದೆ ರಾಹುಲ್ ಇರುವುದಾಗಿಯೂ ಅನುಮಾನ ವ್ಯಕ್ತಪಡಿಸಿದ್ದರು.

ಇದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈ ಪೊಲೀಸರು ತನಿಖೆ ನಡೆಸುವ ಸಲುವಾಗಿ ನಿನ್ನೆ ರಾಹುಲ್ ಗೆ ಸಮನ್ಸ್ ಜಾರಿ ಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ನಂತರ ಇದೀಗ ಪೊಲೀಸರು ರಾಹುಲ್ ನನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಪ್ರತ್ಯೂಷ ಅವರು ಈ ಹಿಂದೆ ಮಾರ್ಕಂಡ್ ಮಲ್ಹೋತ್ರಾ ಎಂಬ ಗೆಳೆಯನೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಈ ಸಂಬಂಧ ಕೆಲವೇ ದಿನಗಳಲ್ಲಿ ಹದಗೆಟ್ಟಿತ್ತು. ಮಲ್ಹೋತ್ರಾನಿಂದ ದೂರವಾಗಿದ್ದ ಪ್ರತ್ಯೂಷ ಈ ಬಗ್ಗೆ ಸುದ್ದಿಗೆ ಗ್ರಾಸವಾಗದಂತೆ ಮೌನವಹಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ನಟನಾಗಿರುವ ರಾಹುಲ್ ರಾಜ್ ಸಿಂಗ್ ಜೊತೆ ಕಾಣಿಸಿಕೊಳ್ಳಲು ಆರಂಭಿಸಿದ್ದರು.

ಈ ಇಬ್ಬರ ಜೋಡಿ ಸಾಕಷ್ಟು ಸುದ್ದಿಗಳನ್ನು ಮಾಡಿತ್ತು. ಇಬ್ಬರು ಪ್ರೀತಿ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆಂದು ಹೇಳಲಾಗುತ್ತಿತ್ತು. ಇದರಂತೆ ಇಬ್ಬರೂ ಜೋಡಿಗಳು ಖಾಸಗಿ ವಾಹಿನಿಯಲ್ಲಿ ಪ್ರೇಮಿಗಳು ಹಾಗೂ ದಂಪತಿಗಳಿಗಾಗಿಯೇ ನಡೆಸಿಕೊಡಲಾಗುವ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

ಇದಾಗ ಬಳಿಕ ರಾಹುಲ್, ಪ್ರತ್ಯೂಷ ಮದುವೆ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪುಷ್ಟಿ ನೀಡುಂತೆ ಪ್ರತ್ಯೂಷ ಕೂಡ ತನ್ನ ಮದುವೆಗಾಗಿ ಲೆಹಾಂಗ್ ಡಿಸೈನ್ ಮಾಡುವಂತೆ ವಸ್ತ್ರ ವಿನ್ಯಾಸಕಾರರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದರೆಂಬ ಸುದ್ದಿಗಳು ಹೊರಬಂದಿದ್ದವು. ಇದಾದ ಕೇವಲ 2 ದಿನದಲ್ಲೇ ಪ್ರತ್ಯೂಷ ನೇಣಿಗೆ ಶರಣಾಗಿದ್ದರು.

ಇನ್ನು ಮೂಲಗಳ ಪ್ರಕಾರ ಪ್ರತ್ಯೂಷ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ವರದಿಯಲ್ಲಿ ಪ್ರತ್ಯೂಷ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿದೆ. ಹೆಚ್ಚಿನ ಪರೀಕ್ಷೆಗಾಗಿ ದೇಹದ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ರಾಹುಲ್ ರಾಜ್ ಸಿಂಗ್ ಅವರು ನಟರಾಗಿದ್ದು, ಪ್ರತ್ಯೂಷ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನಂತರ ಮೊದಲು ನೋಡಿದ ವ್ಯಕ್ತಿಯಾಗಿದ್ದಾರೆ. ಪ್ರತ್ಯೂಷಳನ್ನು ಕಂಡ ಕೂಡಲೇ ರಾಹುಲ್ ಸ್ಥಳೀಯರಿಗೆ ಮಾಹಿತಿ ನೀಡಿ ಅವರ ಸಹಾಯದ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು.

Write A Comment