
ಮುಂಬೈ: ಕಿರುತೆರೆ ನಟಿ ಪ್ರತ್ಯೂಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನಟ ಹಾಗೂ ಪ್ರತ್ಯೂಷ ಗೆಳೆಯ ರಾಹುಲ್ ರಾಜ್ ಸಿಂಗ್ ಅವರಿಗೆ ಶನಿವಾರ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ರಾಹುಲ್ ನನ್ನು ಸಂಪರ್ಕಿಸಲಾಯಿತು. ಇದೀಗ ರಾಹುಲ್ ನನ್ನು ವಿಚಾರಣೆ ನಡೆಸಲಾಗುತ್ತಿದ್ದು. ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದು ಮುಂಬೈ ಪೊಲೀಸ್ ವಕ್ತಾರ ಉಪ ಪೊಲೀಸ್ ಆಯುಕ್ತ ಧನಂಜಯ್ ಕುಲಕರ್ಣಿಯವರು ಹೇಳಿದ್ದಾರೆ.
ರಾಹುಲ್ ರಾಜ್ ಸಿಂಗ್ ಅವರು ನಟರಾಗಿದ್ದು, ಪ್ರತ್ಯೂಷ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನಂತರ ಮೊದಲು ನೋಡಿದ ವ್ಯಕ್ತಿಯಾಗಿದ್ದಾರೆ. ಪ್ರತ್ಯೂಷಳನ್ನು ಕಂಡ ಕೂಡಲೇ ರಾಹುಲ್ ಸ್ಥಳೀಯರಿಗೆ ಮಾಹಿತಿ ನೀಡಿ ಅವರ ಸಹಾಯದ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ರಾಹುಲ್ ಗೆ ಸಮನ್ಸ್ ಜಾರಿ ಮಾಡಿರುವ ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.