ಕನ್ನಡ ವಾರ್ತೆಗಳು

ಪುತ್ತೂರು ಜಾತ್ರೋತ್ಸವ ಆಮಂತ್ರಣ ಪತ್ರಿಕೆ ವಿವಾದಕ್ಕೆ ತೆರೆ : ಜಿಲ್ಲಾಧಿಕಾರಿ ಹೆಸರು ಕೈಬಿಟ್ಟು ಪತ್ರಿಕೆ ಮರುಮುದ್ರಣ

Pinterest LinkedIn Tumblr

Invitation_New_Print

ಮರುಮುದ್ರಣವಾದ ಆಮಂತ್ರಣ ಪತ್ರಿಕೆ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರನ್ನು ಕೈ ಬಿಟ್ಟು ಆಮಂತ್ರಣ ಪತ್ರಿಕೆಯನ್ನು ಮರುಮುದ್ರಣಗೊಳಿಸಲಾಗಿದ್ದು, ಈ ಮೂಲಕ ಕಳೆದ ಕೆಲವು ದಿನಗಳಿಂದ ತಲೆದೋರಿದ್ದ ಆಮಂತ್ರಣ ಪತ್ರಿಕೆ ವಿವಾದಕ್ಕೆ ತೆರೆ ಬಿದ್ದಿದೆ.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಆಮಂತ್ರಣ ಪತ್ರದಲ್ಲಿ ಅನ್ಯಮತೀಯ ಜಿಲ್ಲಾಧಿಕಾರಿ ಹೆಸರನ್ನು ಮುದ್ರಿಸಿದ್ದರ ವಿರುದ್ಧ ಭಕ್ತರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಜಿಲ್ಲಾಧಿಕಾರಿಯವರ ಹೆಸರನ್ನು ವಿರಹಿತಗೊಳಿಸಿ ಆಮಂತ್ರಣವನ್ನು ಮರು ಮುದ್ರಣಮಾಡಬೇಕೆಂದು ನೀಡಿದ ಆದೇಶದ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಆಮಂತ್ರಣ ಪತ್ರಿಕೆಯನ್ನು ಮರು ಮುದ್ರಿಸಲಾಗಿದೆ.

Putturu_Invitation_Prob_1

ಮೊದಲು ಮುದ್ರಣವಾದ ಆಮಂತ್ರಣ ಪತ್ರಿಕೆ

ಈ ಹಿಂದಿನ ಆಮಂತ್ರಣದಲ್ಲಿ ಭಕ್ತರು ಶ್ರೀದೇವರ ಕೃಪಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ಎಂದು ಹಿಂದೂ ಧಾರ್ಮಿಕ ಹಾಗೂ ಧರ್ಮದಾಯಿ ದತ್ತಿ ಇಲಾಖೆ ಬೆಂಗಳೂರು, ಜಿಲ್ಲಾಧಿಖಾರಿ ಎ.ಬಿ.ಇಬ್ರಾಹಿಂ, ಆಡಳಿತಾಧಿಕಾರಿ ಜಗದೀಶ್ ಎಸ್, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂದು ಮುದ್ರಿಸಲಾಗಿತ್ತು.

ಇದರಿಂದ ರೊಚ್ಚಿಗೆದ್ದ ಹಿಂದೂ ಪರ ಸಂಘಟನೆಯ ಮುಖಂಡರು ಅನ್ಯಮತೀಯರಾದ ಇಬ್ರಾಹಿಂ ಹೆಸರು ಮುದ್ರಿಸಿರುವುದಕ್ಕೆ ಆಕ್ಷೇಪಿಸಿ ಜಿಲ್ಲಾಧಿಕಾರಿ ಹೆಸರನ್ನು ತೆಗೆದು ಆಮಂತ್ರಣ ಮರು ಮುದ್ರಿಸಲು ಆದೇಶ ನೀಡಬೇಕೆಂದು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಆಮಂತ್ರಣವನ್ನು ಮರುಮುದ್ರಣ ಮಾಡಲು ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯನ್ನು ಮರುಮುದ್ರಣಗೊಳಿಸಲಾಗಿದ್ದು, ಮರು ಮುದ್ರಣದಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೆಸರನ್ನು ವಿರಹಿತಗೊಳಿಸಲಾಗಿದ್ದು, ಇತರ ಅಧಿಕಾರಿಗಳ ಹೆಸರನ್ನು ಕೂಡ ನಮೂದಿಸದೇ ಕೇವಲ ಆಡಳಿತಾಧಿಕಾರಿ, ಕಾರ್ಯ ನಿರ್ವಹಣಾಧಿಕಾರಿ, ತಂತ್ರಿಗಳು, ಅರ್ಚಕರು, ನೌಕರ ವೃಂದ ಮತ್ತು ಊರಿನ ಸಮಸ್ತರು ಎಂದು ಮುದ್ರಿಸಲಾಗಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ತಲೆನೋವಾಗಿ ಪರಿಣಾಮಿಸಿದ ದೊಡ್ಡ ವಿವಾದವೊಂದು ಬಗೆಹರಿದು ಭಕ್ತಾಧಿಗಳು ನಿಟ್ಟುಸಿರು ಬಿಡುವಂತಾಗಿದೆ.

Write A Comment