
ವಾಷಿಂಗ್ಟನ್: ಭಯೋತ್ಪಾದನೆಯಿಂದ ಜಾಗತಿಕ ಪರಮಾಣು ಭದ್ರತೆಗೆ ಎಷ್ಟು ವಾಸ್ತವವಾದ ತಕ್ಷಣದ ಪರಿಣಾಮ ಬೀರುತ್ತದೆ ಎಂಬುದಕ್ಕೆ ಬ್ರುಸೆಲ್ ನ ದಾಳಿಯೇ ಒಂದು ಉತ್ತಮ ಉದಾಹರಣೆ. ಇನ್ನು ಮೇಲೆಯಾದರೂ ಭಯೋತ್ಪಾದನೆ ಬೇರೆ ದೇಶಗಳ ಸಮಸ್ಯೆ ಮತ್ತು ಬೇರೆ ದೇಶದ ಉಗ್ರಗಾಮಿಗಳು ನಮ್ಮ ದೇಶದ ಉಗ್ರರಲ್ಲ ಎಂಬ ಭಾವನೆ ಬಿಟ್ಟು ಸಂಘಟಿತರಾಗಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ವಾಷಿಂಗ್ಟನ್ ನಲ್ಲಿ ನಿನ್ನೆ ನಡೆದ ನಾಲ್ಕನೇ ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ತನ್ನ ಜಾಲವನ್ನು ವಿಸ್ತರಿಸಿಕೊಂಡಿದ್ದು ಒಂದು ದೇಶಕ್ಕೂ ಮತ್ತೊಂದು ದೇಶಕ್ಕೂ ಸಂಬಂಧವಿದೆ. ಆದರೆ ನಾವು ನಮ್ಮ ನಮ್ಮ ದೇಶಗಳ ಮಟ್ಟದಲ್ಲಿ ಮಾತ್ರ ಭಯೋತ್ಪಾದನೆ ವಿರುದ್ಧ ಕಾರ್ಯನಿರ್ವಹಿಸುವ ಧೋರಣೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.
” ಭಯೋತ್ಪಾದನೆ ಬೇರೆಯವರ ಸಮಸ್ಯೆ ಎಂಬ ಭಾವನೆಯನ್ನು ಮೊದಲು ಬಿಡಬೇಕು. ಬೇರೆ ದೇಶದ ಭಯೋತ್ಪಾದಕರು ನಮ್ಮ ದೇಶದ ಭಯೋತ್ಪಾದಕರಲ್ಲ ಎಂಬ ಭಾವನೆ ಹೊಂದಿರಬಾರದು. ಪರಮಾಣು ಭದ್ರತೆ ರಾಷ್ಟ್ರೀಯ ಆದ್ಯತೆಯಾಗಿದೆ. ಎಲ್ಲಾ ದೇಶಗಳು ಅಂತಾರಾಷ್ಟ್ರೀಯ ಹೊಣೆಗಾರಿಕೆಗೆ ಬದ್ಧರಾಗಿರಬೇಕು ಎಂದರು.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಶ್ಲಾಘಿಸಿದ ಮೋದಿ, ಜಾಗತಿಕ ಭದ್ರತೆಗೆ ಒಬಾಮಾರವರು ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದರು. ಬೆಲ್ಜಿಯನ್ ರಾಜಧಾನಿ ಬ್ರುಸೆಲ್ ನಲ್ಲಿ ಮೊನ್ನೆ ಮಾರ್ಚ್ 22ರಂದು ನಡೆದ ಉಗ್ರಗಾಮಿಗಳ ದಾಳಿಯಲ್ಲಿ 35 ಮಂದಿ ಸಾವನ್ನಪ್ಪಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.