ಮನೋರಂಜನೆ

ಗೇಯ್ಲ್ ವರ್ಸಸ್ ಕೊಹ್ಲಿ ಅಲ್ಲ; ಇದು ಗೇಯ್ಲ್ ವರ್ಸಸ್ ಅಶ್ವಿನ್; ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಭಾರತ-ವೆಸ್ಟ್ ಇಂಡೀಸ್ ನಡುವೆ 2ನೇ ಸೆಮಿ ಫೈನಲ್ ಪಂದ್ಯ

Pinterest LinkedIn Tumblr

ashwin-chris-gayle

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಇದೀಗ ನಿರ್ಣಾಯಕರ ಹಂತದ ಹೊಸ್ತಿಲಲ್ಲಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇಂದು ಸಂಜೆ 7 ಗಂಟೆಗೆ ಈ ಹೈವೋಲ್ಟೇಜ್ ಪಂದ್ಯ ಆರಂಭವಾಗಲಿದ್ದು, ತೀವ್ರ ಕುತೂಹಲ ಹುಟ್ಟಿಸಿರುವ ಈ ಪಂದ್ಯವನ್ನು ವಿಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಯ್ಲ್ ಮತ್ತು ಭಾರತ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ನಡುವಿನ ಯುದ್ಧ ಎಂದು ಬಿಂಬಿಸಲಾಗುತ್ತಿದೆ. ಐಪಿಎಲ್ ನಲ್ಲಿ ಇಬ್ಬರೂ ಆಟಗಾರರು ಆರ್ ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆಯಾದರೂ, ಇಂದಿನ ಹೋರಾಟ ವಾಸ್ತವವಾಗಿ ಗೇಯ್ಲ್ ಮತ್ತು ಕೊಹ್ಲಿ ನಡುವಿನ ಪಂದ್ಯವಲ್ಲ. ಬದಲಿಗೆ ಅದು ಗೇಯ್ಲ್ ಮತ್ತು ಆರ್ ಅಶ್ವಿನ್ ನಡುವಿನ ಸೆಣಸಾಟ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಗೇಯ್ಲ್ ವಿರುದ್ಧ ಅಶ್ವಿನ್ ಅಪೂವ೯ ದಾಖಲೆ
ಇನ್ನು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಕಾದಾಟಕ್ಕೆ ಸಂಬಂಧಿಸಿದಂತೆ ವಿಂಡೀಸ್ ದೈತ್ಯ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ಬಹುತೇಕ ಪಂದ್ಯಗಳಲ್ಲಿ ಆರ್ ಅಶ್ವಿನ್ ಅವರಿಗೆ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿರುವುದು ಇಂತಹ ವಾದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಭಾರತದ ಸ್ಪಿನ್ ಅಸ್ತ್ರವೆಂದೇ ಹೇಳಲಾಗುತ್ತಿರುವ ಆರ್.ಅಶ್ವಿನ್ ವಿಂಡೀಸ್ ವಿರುದ್ಧ ತಾವಾಡಿದ ಟಿ20 ಪಂದ್ಯಗಳ 9 ಇನಿಂಗ್ಸ್‌ನಲ್ಲಿ ಕ್ರಿಸ್ ಗೇಲ್‌ರನ್ನು 4 ಬಾರಿ ಔಟ್ ಮಾಡಿದ್ದಾರೆ.

ಮತ್ತೊಂದು ಪ್ರಮುಖ ವಿಚಾರವೆಂದರೆ ಅಶ್ವಿನ್ ಕ್ರಿಸ್ ಗೇಯ್ಲ್ ಗೆ ಎಸೆದಿರುವ 70 ಎಸೆತಗಳಿಂದ ಕೇವಲ 57 ರನ್ ನೀಡಿದ್ದಾರೆ. ಇದರಲ್ಲಿ 40 ಡಾಟ್ ಬಾಲ್‌ಗಳು ಎನ್ನುವುದು ವಿಶೇಷ. ಇನ್ನು ಅಶ್ವಿನ್ ತಮ್ಮ ಈ 70 ಎಸೆತಗಳಲ್ಲಿ 51 ಎಸೆತಗಳನ್ನು ಮೊದಲ ಆರು ಓವರ್‌ಗಳಲ್ಲೇ ಎಸೆದಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20ಯಲ್ಲಿ ಗೇಲ್ ಹಾಗೂ ಅಶ್ವಿನ್ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, 11 ಎಸೆತದಿಂದ ಕೇವಲ 8 ರನ್ ಬಾರಿಸಿದ್ದಾರೆ. ಇದರಲ್ಲಿ ಯಾವುದೇ ಬೌಂಡರಿಗಳಿಲ್ಲ. ಉಳಿದೆಲ್ಲಾ ಪಂದ್ಯಗಳು ಐಪಿಎಲ್ ನದ್ದು. ಈ ಅಂಕಿ ಅಂಶ ವಿಂಡೀಸ್ ವಿರುದ್ಧ ಪ್ರಮುಖವಾಗಿ ಕ್ರಿಸ್ ಗೇಯ್ಲ್ ವಿರುದ್ಧ ಆರ್. ಅಶ್ವಿನ್ ಭಾರತಕ್ಕೆ ಎಷ್ಟು ಪ್ರಮುಖ ಸ್ಪಿನ್ನರ್ ಆಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ.

ವಿಂಡೀಸ್ ತಂಡದ ವಿಚಾರಕ್ಕೆ ಬರುವುದಾದರೆ ಟಿ20 ವಿಶ್ವಕಪ್ ನಲ್ಲಿ ವಿಂಡೀಸ್ ತಂಡ ಉಪಾಂತ್ಯಕ್ಕೆ ಬರಲು ಪ್ರಮುಖ ಕಾರಣವೇ ದೈತ್ಯ ಬ್ಯಾಟಿಂಗ್ ಪಡೆ. ಈ ಪೈಕಿ ಕ್ರಿಸ್ ಗೇಯ್ಲ್ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿ ಜಯತಂದಿತ್ತಿದ್ದರೆ, ಮತ್ತೋರ್ವ ಆರಂಭಿಕ ಆಟಗಾರ ಆಂಡ್ರೆ ಫ್ಲೆಚರ್ ಶ್ರೀಲಂಕ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇನ್ನು ಪ್ರಬಲ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಮರ್ಲಾನ್ ಸ್ಯಾಮುಯೆಲ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ವಿಂಡೀಸ್ ಪಂದ್ಯ ಗೆದ್ದು ಸೆಮೀಸ್ ಲಗ್ಗೆ ಇಟ್ಟಿತ್ತು. ಹೀಗಾಗಿ ವಿಂಡೀಸ್ ತಂಡದ ದೊಡ್ಡ ಶಕ್ತಿಯೇ ಅದರ ದೈತ್ಯ ಬ್ಯಾಟಿಂಗ್ ಪಡೆ ಎನ್ನಬಹುದು.

ಹೀಗಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಹೈವೋಲ್ಟೇ ಜ್ ಪಂದ್ಯವನ್ನು ವೀಶ್ಲೇಷಕರು ವಿಂಡೀಸ್ ಬ್ಯಾಟಿಂಗ್ ವರ್ಸಸ್ ಭಾರತ ಬೌಲಿಂಗ್ ಎಂದು ವಿಶ್ಲೇಷಿಸುತ್ತಿದ್ದಾರೆ. ಒಟ್ಟಾರೆ ಎಲ್ಲ ವಿಭಾಗಗಳಲ್ಲಿಯೂ ಸಾಮರ್ಥ್ಯಕ್ಕೆ ತಕ್ಕ ಆಟವಾಡುವ ತಂಡಕ್ಕೆ ಗೆಲುವಿನ ಲಕ್ಷ್ಮಿ ಒಲಿಯುತ್ತಾಳೆ.

Write A Comment