ರಾಷ್ಟ್ರೀಯ

ಅಪಘಾತ ನೊಂದವರಿಗೆ ನೆರವು ತೊಂದರೆಯಾಗದ ಕಾನೂನು ಜಾರಿ

Pinterest LinkedIn Tumblr

accid

ನವದೆಹಲಿ: ಪರೋಪಕಾರಿಗಳ ರಕ್ಷಣೆ ಕುರಿತಂತೆ ಕೇಂದ್ರ ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದೆ.

ರಸ್ತೆ ಅಪಘಾತದ ವೇಳೆ ತೀರಾ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ಹೋಗುವ ಉಪಕಾರ ಬುದ್ಧಿಯವರನ್ನು ನಂತರದಲ್ಲಿ ಪೊಲೀಸರು ಮತ್ತು ಇತರೆ ಸಂಸ್ಥೆಗಳ ಕಿರುಕುಳದಿಂದ ಪಾರು ಮಾಡುವ ಕುರಿತಂತೆ ಕೇಂದ್ರ ಸರಕಾರ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಅದರ ಜಾರಿಗೆ ಸುಪ್ರೀಂಕೋರ್ಟಿಗೆ ಸಲ್ಲಿಸಿತ್ತು.

ಇವನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡ ಮತ್ತು ಅರುಣ್ ಮಿಶ್ರ ಅವರಿದ್ದ ನ್ಯಾಯಪೀಠ, ಇವಕ್ಕೆ ಅಂಗೀಕಾರ ನೀಡಿ ಈ ಮಾರ್ಗದರ್ಶಿ ಸೂತ್ರಗಳಿಗೆ ವ್ಯಾಪಕ ಪ್ರಚಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ರಸ್ತೆ ಅಪಘಾತದಂತಹ ಸಂಕಷ್ಟ ಸಂದರ್ಭದಲ್ಲಿ ಸಹಾಯಕ್ಕೆ ಧಾವಿಸುವ ಒಳ್ಳೆಯ ಪರೋಪಕಾರಿಗಳು, ನಂತರದಲ್ಲಿ ಪೊಲೀಸರು ಮತ್ತು ಇತರೆ ಸಂಸ್ಥೆಗಳಿಂದ ಕಿರುಕುಳ ಅನುಭವಿಸುತ್ತಾರೆ.

ಹೀಗಾಗಿ ಅನೇಕ ಸಂದರ್ಭಗಳಲ್ಲಿ ಸಂಕಷ್ಟದಲ್ಲಿರುವವರ ರಕ್ಷಣೆಗೆ ಹೋಗಲು ಹಿಂದೆ ಮುಂದೆ ನೋ‌ಡುವಂತಾಗಿದೆ.

ಈ ಹಿನ್ನೆಲೆಯಲ್ಲಿ ಅಂತಹ ಉಪಕಾರ ಮಾಡುವವರ ರಕ್ಷಣೆಗೆ ಸಂಬಂಧಿಸಿದಂತೆ ಕೆಲವು ನಿಯಮಾವಳಿ ರೂಪಿಸಲು ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ನೇತೃತ್ವದಲ್ಲಿ ಮೂರು ಸದಸ್ಯರ ಸಮಿತಿಯನ್ನು ಕೇಂದ್ರ ಸರಕಾರ ನೇಮಿಸಿತ್ತು.

ಆ ಸಮಿತಿ ನೀಡಿದ ವರದಿಯ ಆಧರಿಸಿದ ಮಾರ್ಗದರ್ಶಿ ನಿಯಮಾವಳಿಗಳನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವಾಲಯ ಸುಪ್ರೀಂಕೋರ್ಟಿಗೆ ಸಲ್ಲಿಸಿತ್ತು.

ಈ ನಿಯಮಾವಳಿಗಳು ಎಲ್ಲ ರಾಜ್ಯಗಳಲ್ಲೂ ಜಾರಿಗೆ ಬರುವಂತಾಗಲು, ಅದು ಸುಪ್ರೀಂಕೋರ್ಟಿನ ಆದೇಶದ ಮೂಲಕ ಬಂದರೆ ಸುಲಭವಾಗುತ್ತದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಅನ್ನು ಮನವಿ ಮಾಡಿತ್ತು.

Write A Comment