ಕರ್ನಾಟಕ

‘ಎಮ್ಮೆ ಕಾದು ಪಾತ್ರೆ ತೊಳೆದು ಓದಿ ಸಿಎಂ ಆದೆ’

Pinterest LinkedIn Tumblr

siddu111

ಬೆಂಗಳೂರು: ತಾವು ಓದುವ ಸಂದರ್ಭದಲ್ಲಿ ಅನುಭವಿಸಿದ ಕಷ್ಟದ ಹಿನ್ನೆಲೆಯಲ್ಲಿ ವಿದ್ಯಾಸಿರಿ ಯೋಜನೆಯನ್ನು ತಾವೇ ರೂಪಿಸಿ ಜಾರಿಗೆ ತಂದಿರುವುದಾಗಿ ವಿಧಾನಸಭೆಯಲ್ಲಿಂದು ಹೇಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿನ ಅನುಭವಗಳನ್ನು ಸದನದ ಮುಂದಿಟ್ಟರು.

ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಅವರು, ನಾನು ನನ್ನ ಗೆಳೆಯ ರೂಂ ಮಾಡಿಕೊಂಡು ನಾವೇ ಅಡುಗೆ ಮಾಡಿ ಹೋಟೆಲ್‌ನಿಂದ ಸಾಂಬಾರ್ ತರುತ್ತಿದ್ದೆವು. ನಮ್ಮ ಪಕ್ಕದ ಊರಿನ ಗೆಳೆಯ ರೂಂ ಮೇಟ್ ಆಗಿದ್ದ. ನನ್ನದು ಪಾತ್ರೆ ತೊಳೆಯುವ ಕೆಲಸ, ಅವನು ಅನ್ನ ಮಾಡುತ್ತಿದ್ದ. ನಾನು ಹಾಸ್ಟೆಲ್‌ನಲ್ಲಿ ಓದಲು ನಮ್ಮಪ್ಪ ಕಳುಹಿಸಿರಲಿಲ್ಲ. ಆಗ ಅನುಭವಿಸಿದ ಕಷ್ಟ ನಷ್ಟಗಳ ಆಧಾರದ ಮೇಲೆ ಈಗಿನ ಪೀಳಿಗೆ ವಿದ್ಯಾರ್ಥಿಗಳು ಅನುಭವಿಸಬಾರದು ಎಂದು ಈ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಹೇಳಿದರು.

ಪಕ್ಕದಲ್ಲೇ ಇದ್ದ ದೇಶಪಾಂಡೆ ಅವರತ್ತ ತಿರುಗಿ, ದೇಶಪಾಂಡೆ ಅವರಿಗೆ ಇಂತಹ ಅನುಭವಗಳಾಗಿಲ್ಲ. ಅವರಪ್ಪ ಲಾಯರ್ ಆಗಿದ್ದರು ಎಂದಾಗ, ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಅವರಪ್ಪ ಲಾಯರ್ ಮಾತ್ರವಲ್ಲ, ದೊಡ್ಡ ಲ್ಯಾಂಡ್ ಲಾರ್ಡ್ ಆಗಿದ್ದರು. ನಿಮ್ಮೂರಲ್ಲಿ (ಮೈಸೂರು) ಕುರುಬರ ಹಾಸ್ಟೆಲ್ ಇತ್ತು ನೀವು ಸೇರಲಿಲ್ವೇ ಎಂದರು.

ನಮ್ಮಪ್ಪ ಸೇರಿಸಲಿಲ್ಲ. ಅಡುಗೆ ಮಾಡಿ ತಿಂದು ಓದಬೇಕು ಅಂತ ಹಾಸ್ಟೆಲ್‌ಗೆ ಕಳುಹಿಸಿರಲಿಲ್ಲ ಎಂದ ಸಿದ್ಧರಾಮಯ್ಯ, ವಿದ್ಯಾಸಿರಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಹಿಂದುಳಿದ ವಿದ್ಯಾರ್ಥಿಗಳಿಗೆ 1500 ರೂ. ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವರ್ಷದ 10 ತಿಂಗಳಲ್ಲಿ 15 ಸಾವಿರ ರೂ. ಪಡೆದುಕೊಳ್ಳುತ್ತಾರೆ. ಹಾಸ್ಟೆಲ್ ಸಿಗದವರಿಗೂ ಊಟ-ತಿಂಡಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದರು.

ಇದೇ ರೀತಿ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡಲು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

2015-16 ರಲ್ಲಿ ವಿದ್ಯಾಸಿರಿ ಯೋಜನೆಯಡಿ 87 ಸಾವಿರ ವಿದ್ಯಾರ್ಥಿಗಳು ಲಾಭ ಪಡೆದುಕೊಂಡಿದ್ದಾರೆ. ಮುಂದಿನ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಬಹುದು ಎಂದರು.

ನಮ್ಮ ಕಾಲದಲ್ಲಿ ಕುಡಿಲಿಕ್ಕೆ ಮಜ್ಜಿಗೆನೂ ಸಿಕ್ತಾ ಇರಲಿಲ್ಲ. ಮಕ್ಕಳಿಗೆ ಹಾಲು ದೂರದ ಮಾತಾಗಿತ್ತು. ಆ ಹಿನ್ನೆಲೆಯಲ್ಲಿ ನಾವು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಮನೆ ಬಳಕೆಗೆ ಹಾಲನ್ನು ಇಟ್ಟುಕೊಂಡು ಹೆಚ್ಚುವರಿ ಹಾಲನ್ನು ಮಾರಾಟ ಮಾಡಿ ಎಂಬ ಉದ್ದೇಶದಿಂದ ಹಾಲು ಉತ್ಪಾದಕರ ಸಂಘಗಳನ್ನು ಎಲ್ಲ ಕಡೆ ತೆರೆಯಲಾಗಿದೆ. ಆದರೆ, ರೈತರು ಎಲ್ಲ ಹಾಲನ್ನು ಮಾರಾಟ ಮಾಡಿ ಮೊಸರು, ಬೆಣ್ಣೆ, ಮಜ್ಜಿಗೆ ಇಂತಹುಗಳಿಗೂ ಇಲ್ಲದಂಗೆ ಮಾಡಿಕೊಂಡಿದ್ದಾರೆ ಎಂದರು.

ನಾನು ಎಮ್ಮೆ ಕಾಯುತ್ತಿದ್ದೆ. 8-9 ಎಮ್ಮೆಗಳು ನಮ್ಮ ಮನೆಯಲ್ಲಿದ್ದವು. ಈಗ ಒಂದೂ ಇಲ್ಲ ಎಂದ ಅವರು, ಈಗ ಯಾವುದೇ ಮನೆಗಳಲ್ಲಿ ಮಜ್ಜಿಗೆ ಮಾಡಲಿಕ್ಕೆ ಕಡಗೋಲು ಇಲ್ಲ, ಮನೆಗಳಲ್ಲಿ ಬೀಸುವ ಕಲ್ಲು, ಒನಕೆ, ಒಳಕಲ್ಲು, ಹಿಟ್ಟಿನ ಕೋಲು ಇಲ್ಲ. ಈಗಿನ ಹೆಣ್ಣು ಮಕ್ಕಳಿಗೆ ಕಡಗೋಲು ಬಳಸುವುದೇ ಗೊತ್ತಿಲ್ಲ ಎಂದು ಅವರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

Write A Comment