ಅಂತರಾಷ್ಟ್ರೀಯ

ಅಜೇಯ ನ್ಯೂಜಿಲೆಂಡ್ ಗೆ ಇಂಗ್ಲೆಂಡ್ ಸವಾಲು; ಇಂದು ಕೋಟ್ಲಾದಲ್ಲಿ ಮೊದಲ ಸೆಮಿಫೈನಲ್, ಕುತೂಹಲ ಮೂಡಿಸಿದ ಹಣಾಹಣಿ…ಗೆಲುವು ಯಾರಿಗೆ ?

Pinterest LinkedIn Tumblr

england

ನವದೆಹಲಿ: ಆತ್ಮವಿಶ್ವಾಸದ ಉತ್ತುಂಗದಲ್ಲಿ ನಲಿದಾಡುತ್ತಿರುವ ನ್ಯೂಜಿಲೆಂಡ್ ತಂಡದ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟನರ್ ಮತ್ತು ಇಶ್ ಸೋಧಿ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ತಮ್ಮ ಕೈಚಳಕ ಮೆರೆಯಲು ಸಜ್ಜಾಗಿದ್ದಾರೆ.

ಬುಧವಾರ ಇಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ–20 ಚಾಂಪಿಯನ್‌ಷಿಪ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿರುವ ಇಂಗ್ಲೆಂಡ್ ತಂಡದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಬಿಸಿ ಮುಟ್ಟಿಸಲು ಕಿವೀಸ್ ಸ್ಪಿನ್ನರ್‌ಗಳು ಸಿದ್ಧವಾಗಿದ್ದಾರೆ.

ಟೂರ್ನಿಯಲ್ಲಿ ಒಟ್ಟು 9 ವಿಕೆಟ್ ಗಳಿಸಿರುವ ಎಡಗೈ ಸ್ಪಿನ್ನರ್ ಮಿಷೆಲ್ ಸ್ಯಾಂಟನರ್ ಮತ್ತು ಲೆಗ್‌ಸ್ಪಿನ್ನರ್ ಇಶ್ ಸೋಧಿ 8 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಸೇರಿಸಿಕೊಂಡಿದ್ದಾರೆ. ಸ್ಯಾಂಟನರ್ 15 ಓವರ್‌ ಬೌಲಿಂಗ್ ಮಾಡಿ ಕೇವಲ 86 ರನ್ ಕೊಟ್ಟಿದ್ದಾರೆ. ಸೋಧಿ 15.4 ಓವರ್ ಬೌಲ್ ಮಾಡಿ 78 ರನ್ ನೀಡಿದ್ದಾರೆ. ಕೋಟ್ಲಾ ಮೈದಾನವು ಮೊದಲಿನಿಂದಲೂ ಸ್ಪಿನ್ನರ್‌ ಸ್ನೇಹಿ ಪಿಚ್‌ ಆಗಿರುವುದರಿಂದ ಇಬ್ಬರೂ ಬೌಲರ್‌ಗಳು ಮಿಂಚುವ ನಿರೀಕ್ಷೆ ಇದೆ.

ಲೀಗ್ ಹಂತದಲ್ಲಿ (ಗುಂಪು–1) ನಾಲ್ಕು ಪಂದ್ಯಗಳಲ್ಲಿಯೂ ಜಯ ಸಾಧಿಸಿ ಸೆಮಿಫೈನಲ್ ಹಂತ ಪ್ರವೇಶಿಸುವಲ್ಲಿ ಈ ಸ್ಪಿನ್ನರ್‌ಗಳ ಪಾತ್ರ ದೊಡ್ಡದು. ಕೇನ್ ವಿಲಿಯಮ್ಸನ್ ನಾಯಕತ್ವದ ಬಳಗವು ಮೊದಲ ಲೀಗ್‌ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿತ್ತು. ಉಪಖಂಡದ ವಾತಾವರಣಕ್ಕೆ ಹೊಂದಿಕೊಳ್ಳುವುದರ ಜೊತೆಗೆ ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾ ತಂಡಗಳಿಗೂ ಸೋಲಿನ ಕಹಿ ಉಣಿಸಿತ್ತು.
ಟೂರ್ನಿಗೂ ಮುನ್ನ ನಿಧನರಾಗಿದ್ದ ನ್ಯೂಜಿಲೆಂಡ್ ಮಾಜಿ ನಾಯಕ ಮಾರ್ಟಿನ್ ಕ್ರೋವ್ ಅವರಿಗೆ ಅರ್ಪಿಸಲು ವಿಶ್ವ ಟ್ವೆಂಟಿ–20

ಚಾಂಪಿಯನ್‌ಷಿಪ್ ಟ್ರೋಫಿ ಜಯಿಸುವ ಗುರಿಯಲ್ಲಿ ಕಿವೀಸ್ ತಂಡವಿದೆ. ಕ್ರೋವ್ ಮಾರ್ಗದರ್ಶನದಲ್ಲಿ ಬೆಳೆದ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಗ್ರ್ಯಾಂಟ್ ಎಲಿಯಟ್ ಅದಕ್ಕಾಗಿ ಪಣ ತೊಟ್ಟಿದ್ದಾರೆ. ಆತ್ಮವಿಶ್ವಾಸದ ಗಣಿಯಾಗಿರುವ ತಂಡವು 2010ರಲ್ಲಿ ವಿಶ್ವ ಟ್ವೆಂಟಿ–20 ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡವನ್ನೂ ಮಣಿಸುವ ನೆಚ್ಚಿನ ತಂಡವಾಗಿ ಬೆಳೆದಿದೆ.
ಆದರೆ, ಎರಡನೇ ಪ್ರಶಸ್ತಿ ಗೆಲುವಿನ ಕನಸಿನಲ್ಲಿರುವ ಇಂಗ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ವೆಸ್ಟ್‌ ಇಂಡೀಸ್ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್‌ಗಳಿಂದ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಪುಟಿದೆದ್ದು ನಿಂತಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 230 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ಮುಟ್ಟಿತ್ತು. ಜೋ ರೂಟ್ (83 ರನ್) ಅವರ ಸ್ಫೋಟಕ ಬ್ಯಾಟಿಂಗ್ ಜಯಕ್ಕೆ ಕಾರಣವಾಗಿತ್ತು. ಹಾಲಿ ಚಾಂಪಿಯನ್ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಅರ್ಧಶತಕದಿಂದಾಗಿ ಜಯ ಒಲಿದಿತ್ತು. ಕ್ರಿಸ್ ಜಾರ್ಡನ್ ಮತ್ತು ಬೆನ್ ಸ್ಟೋಕ್ಸ್‌ ಬೌಲಿಂಗ್ ಕೂಡ ಪ್ರಮುಖ ಪಾತ್ರ ವಹಿಸಿತ್ತು.

ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೋಯಿನ್ ಅಲಿ ಅವರ ಬ್ಯಾಟಿಂಗ್ ಕಳೆಗಟ್ಟಿತ್ತು. ಈ ಮೂರು ಪಂದ್ಯಗಳ ಗೆಲುವಿನೊಂದಿಗೆ ಇಂಗ್ಲೆಂಡ್ ನಾಲ್ಕರ ಘಟ್ಟಕ್ಕೆ ತಲುಪಿದೆ. ಆಫ್‌ಸ್ಪಿನ್ನರ್ ಮೋಯಿನ್ ಅಲಿ ಮತ್ತು ಲೆಗ್‌ಸ್ಪಿನ್ನರ್ ಆದಿಲ್ ರಶೀದ್ ತಂಡದ ಪ್ರಮುಖ ಸ್ಪಿನ್ನರ್‌ಗಳಾಗಿದ್ದಾರೆ. ಇವರಿಬ್ಬರನ್ನೂ ಇಂಗ್ಲೆಂಡ್ ಕಣಕ್ಕಿಳಿಸುವ ಸಾಧ್ಯತೆ ಇದೆ. ಇವರೊಂದಿಗೆ ವೇಗಿಗಳಾದ ಡೇವಿಡ್ ವಿಲ್ಲಿ, ಕ್ರಿಸ್ ಜಾರ್ಡನ್ ಮತ್ತು ಏಯಾನ್ ಮಾರ್ಗನ್ ಕೂಡ ಬೌಲಿಂಗ್ ಜವಾಬ್ದಾರಿ ಹಂಚಿಕೊಳ್ಳುವ ನಿರೀಕ್ಷೆ ಇದೆ.

162.34ರ ಸ್ಟ್ರೇಕ್‌ರೇಟ್‌ನಲ್ಲಿ ಮೂರು ಪಂದ್ಯಗಳಿಂದ 125 ರನ್ ಗಳಿಸಿರುವ ಗುಪ್ಟಿಲ್ ಇಂಗ್ಲೆಂಡ್ ಬೌಲರ್‌ ಗಳ ಮುಂದಿರುವ ದೊಡ್ಡ ಸವಾಲು. ಕೋಟ್ಲಾ ಅಂಗಳದಲ್ಲಿ ಗೆದ್ದು ಫೈನಲ್‌ ಪಂದ್ಯಕ್ಕೆ ಲಗ್ಗೆ ಹಾಕುವ ಛಲ ಮತ್ತು ಅರ್ಹತೆ ಎರಡೂ ತಂಡಗಳಿಗೆ ಇದೆ. ಆದ್ದರಿಂದ ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿದ್ದಾರೆ.

Write A Comment