ಮನೋರಂಜನೆ

ದಯವಿಟ್ಟು ನಮ್ಮ ಎದುರು ಸ್ಫೋಟಿಸದಿರಿ ವಿರಾಟ್….ಹೀಗೆ ಮನವಿ ಮಾಡಿಕೊಂಡವರು ಕ್ರಿಸ್‌ ಗೇಲ್‌ !

Pinterest LinkedIn Tumblr

gayle

ಮುಂಬೈ: ‘ವಿರಾಟ್ ದಯವಿಟ್ಟು ನಮ್ಮ ಎದುರು ಸ್ಫೋಟಿಸಬೇಡಿ.. ’ಭಾರತದ ವಿರಾಟ್ ಕೊಹ್ಲಿಯವರಿಗೆ ಹೀಗೆ ಮನವಿ ಮಾಡಿಕೊಂಡವರು ಬೇರೆ ಯಾರೂ ಅಲ್ಲ. ಚುಟುಕು ಕ್ರಿಕೆಟ್ ಜಗತ್ತಿನ ಅಬ್ಬರದ ಬ್ಯಾಟ್ಸ್‌ಮನ್, ವಿಂಡೀಸ್‌ನ ಕ್ರಿಸ್ ಗೇಲ್.

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ವಿಶ್ವ ಟ್ವೆಂಟಿ–20 ಚಾಂಪಿ ಯನ್‌ಷಿಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಲಿವೆ.

ಮಂಗಳವಾರ ಅಭ್ಯಾಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೇಲ್, ‘ನಮ್ಮ ತಂಡದ ಎದುರು ವಿರಾಟ್‌ ಹೆಚ್ಚು ರನ್ ಗಳಿಸುವುದಿಲ್ಲ ಎಂಬ ವಿಶ್ವಾಸವಿದೆ. ಅವರು ರನ್ ಗಳಿಸಿದರೂ ತಮ್ಮ ತಂಡದ ಜಯಕ್ಕೆ ನೆರವು ನೀಡುವಷ್ಟು ಆಡದಿರಲಿ’ ಎಂದು ಚಟಾಕಿ ಹಾರಿಸಿದರು. ಗೇಲ್‌ ಹಾಗೂ ಕೊಹ್ಲಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿದ್ದಾರೆ.

‘ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಕಟ್ಟಿಹಾಕುವುದಷ್ಟೇ ನಮ್ಮ ಪ್ರಮುಖ ಗುರಿಯಲ್ಲ. ಭಾರತ ತಂಡದಲ್ಲಿ ಪಂದ್ಯ ಗೆಲ್ಲಿಸಬಲ್ಲ ಸಮರ್ಥ ಆಟಗಾರರು ಬಹಳಷ್ಟಿದ್ದಾರೆ. ಅವರನ್ನೂ ಕಟ್ಟಿಹಾಕು ವುದು ನಮ್ಮ ಆದ್ಯತೆ’ ಎಂದರು.

‘ವಿರಾಟ್ ಮೇಲೆ ಮಾತ್ರ ಗಮನ ಕೇಂದ್ರಿಕರಿಸಿ ಉಳಿದವರನ್ನು ನಿರ್ಲಕ್ಷಿಸು ವುದು ಅಪಾಯಕಾರಿ ಯಾಗಬಹುದು. ಆದ್ದರಿಂದ ನಾವು ಯಾರನ್ನೂ ಹಗುರ ವಾಗಿ ಪರಿಗಣಿಸಿಲ್ಲ’ ಎಂದು ಕೆರಬಿಯನ್ ಆಟಗಾರ ಹೇಳಿದ್ದಾರೆ. ‘ಲೀಗ್ ಹಂತದಲ್ಲಿ ಮೊದಲ ಪಂದ್ಯ ಸೋತರೂ ನಂತರ ಮೂರು ಪಂದ್ಯಗಳಲ್ಲಿ ಗೆದ್ದ ಭಾರತ ತಂಡವು ಸೆಮಿಗೆ ಲಗ್ಗೆ ಇಟ್ಟಿದೆ.

ಆತಿಥೇಯ ಬಳಗವು ಈಗ ಜಯದ ಲಯದಲ್ಲಿದೆ. ಅವರ ಆತ್ಮವಿಶ್ವಾಸವು ಉತ್ತುಂಗದಲ್ಲಿದೆ ಎನ್ನುವುದರಲ್ಲಿ ಯಾವುದೇ ಆನುಮಾನ ವಿಲ್ಲ. ಭಾರತ ತಂಡದ ಆಟಗಾರರು ಫೀಲ್ಡಿಂಗ್‌ನಲ್ಲಿಯೂ ಉತ್ತಮವಾಗಿ ದ್ದಾರೆ. ಹೆಚ್ಚು ಆಲ್‌ರೌಂಡರ್‌ಗಳಿರುವ ಶಕ್ತಿಶಾಲಿ ತಂಡ. ಆದ್ದರಿಂದ ನಾವು ಪ್ರತಿಯೊಬ್ಬ ಆಟಗಾರನ ಮೇಲೂ ಗಮನ ಇಟ್ಟಿದ್ದೇವೆ’ ಎಂದು ಹೇಳಿದರು.

‘ವಿರಾಟ್ ಸಫಲತೆಯ ಬಗ್ಗೆ ಅಚ್ಚರಿ ಇಲ್ಲ. ಹಲವು ವರ್ಷಗಳ ಹಿಂದೆಯೇ ನಾನು ಅವರ ಕುರಿತು ಹೇಳಿದ್ದೆ. ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಆಗುವ ಪ್ರತಿಭೆ ಎಂದು ಉಲ್ಲೇಖಿಸಿದ್ದೆ. ಅದನ್ನು ಈಗ ನಾವು ನೋಡುತ್ತಿದ್ದೇವೆ. ಅವರು ಇನ್ನೂ ಎತ್ತರಕ್ಕೆ ಬೆಳೆಯುತ್ತಾರೆ’ ಎಂದು ಹೇಳಿ ದರು. ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೇಲ್ ಅಬ್ಬರದ ಶತಕ ಸಿಡಿಸಿದ್ದರು.

ಪಂದ್ಯಕ್ಕೆ ಬ್ರಾಡ್‌ ರೆಫರಿ
ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಪಂದ್ಯಕ್ಕೆ ಕ್ರಿಸ್‌ ಬ್ರಾಡ್‌ ರೆಫರಿಯಾಗಿ ನೇಮಕವಾಗಿದ್ದಾರೆ.ರಿಚರ್ಡ್‌ ಕೆಟಲ್‌ಬರೊ ಮತ್ತು ಇಯಾನ್‌ ಗೌಲ್ಡ್‌ ಅವರು ಪಂದ್ಯದಲ್ಲಿ ಅಂಗಳದ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.ಮರೈಸ್‌ ಎರಾಸ್ಮಸ್‌ ಮೂರನೇ ಹಾಗೂ ಮೈಕಲ್‌ ಗೌ ನಾಲ್ಕನೇ ಅಂಪೈರ್‌ಗಳಾಗಿ ಕೆಲಸ ಮಾಡಲಿದ್ದಾರೆ.

ಬುಧವಾರ ದೆಹಲಿಯ ಫಿರೋಜ್‌ ಷಾ ಕೋಟ್ಲಾ ಅಂಗಳದಲ್ಲಿ ನಡೆಯುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವಣ ಮಹಿಳಾ ವಿಭಾಗದ ಪಂದ್ಯದ ಅಂಗಳದ ಅಂಪೈರ್‌ಗಳಾಗಿ ಕ್ರಿಸ್‌ ಗಫಾನೆ ಮತ್ತು ಎಸ್‌. ರವಿ ಕಾರ್ಯ ನಿರ್ವಹಿಸಲಿದ್ದಾರೆ. ಜೊಯೆಲ್‌ ವಿಲ್ಸನ್‌ ಮತ್ತು ರ್‍ಯಾನ್‌ಮೊರ್‌ ಮಾರ್ಟಿನೆಜ್‌ ಅವರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಅಂಪೈರ್‌ ಆಗಿ ಕೆಲಸ ಮಾಡಲಿದ್ದಾರೆ. ಜೆಫ್‌ ಕ್ರೊವ್‌ ಈ ಪಂದ್ಯದ ರೆಫರಿಯಾಗಿದ್ದಾರೆ.

ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ನಡುವಣ ಪುರುಷರ ವಿಭಾಗದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕುಮಾರ ಧರ್ಮಸೇನಾ ಮತ್ತು ರಾಡ್‌ ಟಕ್ಕರ್‌ ಅಂಗಳದ ಅಂಪೈರ್‌ ಆಗಿ, ಬ್ರೂಸ್‌ ಆ್ಯಕ್ಸೆನ್‌ಫೋರ್ಡ್‌ ಮತ್ತು ಜೊಯೆಲ್‌ ವಿಲ್ಸನ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಟೆಸ್ಟ್ ಸರಣಿ
ನವದೆಹಲಿ (ಪಿಟಿಐ): ಎರಡು ವರ್ಷಗಳ ಬಳಿಕ ಭಾರತ ತಂಡ ವೆಸ್ಟ್‌ಇಂಡೀಸ್‌ನಲ್ಲಿ ನಾಲ್ಕು ಟೆಸ್ಟ್‌ ಪಂದ್ಯಗಳ ದ್ವಿಪಕ್ಷೀಯ ಸರಣಿ ಆಡಲಿದೆ.

ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಭಾರತ–ವೆಸ್ಟ್ಇಂಡೀಸ್ ತಂಡಗಳ ನಡುವೆ ಟೆಸ್ಟ್‌ ಸರಣಿ ಆಯೋಜನೆಗೊಂಡಿದೆ. ದಿನಾಂಕ ಹಾಗೂ ಸ್ಥಳ ಇನ್ನೂ ನಿಗದಿಯಾಗಿಲ್ಲ. 2014ರಲ್ಲಿ ಭಾರತಕ್ಕೆ ಬಂದಿದ್ದ ವೆಸ್ಟ್ಇಂಡೀಸ್‌ ತಂಡ ಸರಣಿಯನ್ನು ಮಧ್ಯದಲ್ಲೇ ಮೊಟಕುಗೊಳಿಸಿತ್ತು. ಬಳಿಕ ವೆಸ್ಟ್ಇಂಡೀಸ್‌ ಹಾಗೂ ಭಾರತ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿರಲಿಲ್ಲ.

Write A Comment