ಬಾಲಿವುಡ್ ನಟ ರಣದೀಪ್ ಹೂಡ ಇದುವರೆಗೆ ಯಾರೂ ಉಹಿಸಲೂ ಸಾಧ್ಯವಾಗದಷ್ಟು ತಮ್ಮ ದೇಹಾಕೃತಿಯನ್ನು ಬದಲಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ‘ಸರಬ್ಜಿತ್’ ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್ಒಂದರಲ್ಲಿ ತಿಂಗಳುಗಟ್ಟಲೆ ಆಹಾರ ಸೇವಿಸದೆ ನಿರ್ಗತಿಕನಂತೆ ಕಾಣಿಸಿಕೊಂಡಿರುವ ಹೂಡ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಒಮುಂಗ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸರಬ್ಜಿತ್’ ಚಿತ್ರದಲ್ಲಿ ಅದೇ ಹೆಸರಿನ ಪಾತ್ರಕ್ಕಾಗಿ ಹೂಡ 28 ದಿನಗಳಲ್ಲಿ 18 ಕೆ.ಜಿ. ತೂಕ ಇಳಿಸಿಕೊಂಡು ತಮ್ಮ ವೃತ್ತಿಪರತೆಯನ್ನು ತೋರಿಸಿದ್ದಾರೆ. ಒಂದು ಪಾತ್ರಕ್ಕಾಗಿ ಬಾಲಿವುಡ್ನಲ್ಲಿ ಈ ಮಟ್ಟಿಗೆ ದೇಹಾಕೃತಿಯನ್ನು ಬದಲಿಸಿಕೊಂಡ ಕೀರ್ತಿ ಹೂಡ ಅವರ ಪಾಲಾಗಲಿದೆ ಎಂಬುದು ಸಿನಿ ಪಂಡಿತರ ವಿಶ್ಲೇಷಣೆ.
ಮಾಡದ ತಪ್ಪಿಗೆ ಪಾಕಿಸ್ತಾನಿ ಜೈಲಿನಲ್ಲೇ 23 ವರ್ಷ ಜೀವನ ಕಳೆದು ಅಲ್ಲೇ ದುರಂತ ಅಂತ್ಯ ಕಂಡ ರೈತ ಸರಬ್ಜಿತ್ ಕೌರ್ ಜೀವನ ಆಧರಿಸಿ ನಿರ್ಮಿಸಲಾಗುತ್ತಿರುವ ಚಿತ್ರದಲ್ಲಿ ಹೂಡ ಅವರು ಜೈಲು ಕೈದಿ ಸರಬ್ಜಿತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಐಶ್ವರ್ಯಾ ರೈ ಬಚ್ಚನ್ ಈ ಚಿತ್ರದ ಮುಖ್ಯಪಾತ್ರವೊಂದರಲ್ಲಿ ನಟಿಸಿದ್ದಾರೆ.
‘ಮೇರಿಕೋಮ್’ ಸಿನಿಮಾ ನಿರ್ಮಾಪಕರು ಬಂಡವಾಳ ಹೂಡಿರುವ ಈ ಚಿತ್ರಕ್ಕಾಗಿ ರಣದೀಪ್ ಹೂಡ ಪಟ್ಟಿರುವ ಶ್ರಮ ಶ್ಲಾಘನೀಯ ಎಂದು ಚಿತ್ರ ನಿರ್ದೇಶಕ ಒಮುಂಗ್ ಕುಮಾರ್ ಟ್ವಿಟರ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಚಿತ್ರವನ್ನು ಮೇ 19ರಂದು ಬಿಡುಗಡೆ ಮಾಡಲಾಗುವುದು ಎಂದು ಒಮುಂಗ್ ಹೇಳಿದ್ದಾರೆ.