ಮನೋರಂಜನೆ

ವೈರಲ್ ಆಯ್ತು ಅನುಷ್ಕಾ ಶರ್ಮಾ ಟ್ರೋಲ್ ಬಗ್ಗೆ ಕೊಹ್ಲಿ ಹಾಕಿದ ಪೋಸ್ಟ್ !

Pinterest LinkedIn Tumblr

virat-kohli-anushka-sharma

ನವದೆಹಲಿ: ಟಿ20 ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಪರಾಭವಗೊಳಿಸಿ ಟೀಂ ಇಂಡಿಯಾವನ್ನು ಸೆಮಿಫೈನಲ್‌ಗೆ ತಲುಪಿದ ಕೊಹ್ಲಿಗೆ ಸೋಷ್ಯಲ್ ಮೀಡಿಯಾ ಜೈಕಾರ ಹಾಕಿತ್ತು. ಅದರ ಜತೆಗೇ ಆತನ ಮಾಜಿ ಪ್ರೇಯಸಿ ಅನುಷ್ಕಾ ಶರ್ಮಾಳನ್ನು ಟ್ರೋಲ್ ಮಾಡಿದ ತಮಾಷೆ ಪೋಸ್ಟ್‌ಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದವು.ಕೊಹ್ಲಿಯ ಪ್ರದರ್ಶನ ಉತ್ತಮವಾಗಿದ್ದರೂ, ಕಳಪೆಯಾಗಿದ್ದರೂ ನೆಟಿಜನ್‌ಗಳು ಪದೇ ಪದೇ ಅನುಷ್ಕಾ ಶರ್ಮಾಳನ್ನೇ ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಇದೀಗ ಕೊಹ್ಲಿ ಸಿಟ್ಟಾಗಿದ್ದಾರೆ.

ಭಾನುವಾರ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ನಂತರ ಅನುಷ್ಕಾ ಶರ್ಮಾಳನ್ನು ಸೋಷ್ಯಲ್ ಮೀಡಿಯಾ ಟ್ರಾಲ್ ಮಾಡಿತ್ತು. ಇದಕ್ಕೆ ಸಿಟ್ಟಾದ ಕೊಹ್ಲಿ ಸೋಮವಾರ ತಮ್ಮ ಟ್ವಿಟರ್‌ನಲ್ಲಿಯೂ ಇನ್‌ಸ್ಟಾಗ್ರಾಂನಲ್ಲಿಯೂ ಪೋಸ್ಟ್ ಹಾಕಿ ಅನುಷ್ಕಾಳನ್ನು ಟ್ರೋಲ್ ಮಾಡಿದವರ ವಿರುದ್ಧ ಕಿಡಿ ಕಾರಿದ್ದಾರೆ.

ಅನುಷ್ಕಾ ಶರ್ಮಾಳನ್ನು ಟ್ರೋಲ್ ಮಾಡುತ್ತಿರುವ ನಿಮಗೆ ನಾಚಿಕೆಯಾಗಬೇಕು. ಸ್ವಲ್ಪವಾದರೂ ಸಹಾನುಭೂತಿ ಇರಲಿ. ಆಕೆ ನನಗೆ ಯಾವತ್ತೂ ಧನಾತ್ಮಕ ಸಹಕಾರವನ್ನೇ ನೀಡಿದ್ದಾಳೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದರು.

ಆದರೆ ಇನ್‌ಸ್ಟಾಗ್ರಾಂನಲ್ಲಿ ಕೊಹ್ಲಿ ಹಾಕಿದ ಪೋಸ್ಟ್ ಮಾರ್ಮಿಕವಾಗಿತ್ತು.
ಅನುಷ್ಕಾಳ ಮೇಲೆ ಗೂಬೆ ಕೂರಿಸಿ, ಸದಾ ನೆಗೆಟಿವ್ ವಿಷಯಗಳಿಗೆ ಆಕೆಯನ್ನು ಬಲಿಪಶು ಮಾಡುತ್ತಿರುವ ಜನರಿಗೆ ನಾಚಿಕೆಯಾಗಬೇಕು. ತಮ್ಮನ್ನು ವಿದ್ಯಾವಂತರೆಂದು ಅಂದು ಕೊಂಡಿರುವವರಿಗೆ ನಾಚಿಕೆಯಾಗಬೇಕು. ನನ್ನ ಆಟದಲ್ಲಿ ಆಕೆ ಯಾವತ್ತೂ ಮಧ್ಯಪ್ರವೇಶ ಮಾಡಿಲ್ಲ, ನಿಯಂತ್ರಣ ಹೇರಿಲ್ಲ. ಆದರೆ ಪ್ರತಿಯೊಂದಕ್ಕೂ ಆಕೆಯನ್ನೇ ಮೂದಲಿಸುವ, ಪರಿಹಾಸ್ಯ ಮಾಡುವ ಜನರಿಗೆ ನಾಚಿಕೆಯಾಗಬೇಕು. ಆಕೆ ನನಗೆ ಸದಾ ಹುರಿದುಂಬಿಸಿ, ಧನಾತ್ಮಕ ಭಾವವನ್ನೇ ನೀಡಿದ್ದಾಳೆ.

ಇದು ಹಲವಾರು ಕಾಲಗಳಿಂದ ನಡೆದು ಬರುತ್ತಿದೆ. ಮರೆಯಲ್ಲಿ ನಿಂತು ನನ್ನನ್ನು ಲೇವಡಿ ಮಾಡುವ ಜನರಿಗೆ ನಾಚಿಕೆಯಾಗಬೇಕು, ಅಂಥಾ ಪೋಸ್ಟ್‌ಗಳ ಬಗ್ಗೆ ನನಗೆ ಯಾವ ರೀತಿಯ ಗೌರವವೂ ಇಲ್ಲ. ಆಕೆಯ ಮೇಲೆ ಸ್ವಲ್ಪವಾದರೂ ಸಹಾನುಭೂತಿ ಮತ್ತು ಗೌರವವಿರಲಿ. ನಿಮ್ಮ ತಂಗಿಯನ್ನೋ, ಗರ್ಲ್‌ಫ್ರೆಂಡ್‌ನ್ನೋ ಅಥವಾ ಹೆಂಡತಿಯನ್ನೋ ಯಾರಾದರೂ ಈ ರೀತಿ ಟ್ರೋಲ್ ಮಾಡಿದರೆ ಮತ್ತು ಸಾರ್ವಜನಿಕವಾಗಿ ಲೇವಡಿ ಮಾಡಿದರೆ ನಿಮಗೆ ಏನು ಅನಿಸಬಹುದು ಎಂಬುದನ್ನು ಯೋಚಿಸಿ ನೋಡಿ ಎಂದು ಬರೆದು ಶೇಮ್ ಎಂದು ಬರೆದಿರುವ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಹಾಕಿದ ಅರ್ಧಗಂಟೆಯಲ್ಲೇ 50,000 ಜನರು ಈ ಪೋಸ್ಟ್‌ನ್ನು ಲೈಕ್ ಮಾಡಿದ್ದಾರೆ. ಟ್ವೀಟರ್‌ನಲ್ಲಿನ ಆ ಟ್ವೀಟ್ ಒಂದು ಗಂಟೆಯಲ್ಲಿ 10,000 ಬಾರಿ ರೀಟ್ವೀಟ್ ಆಗಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಕೊಹ್ಲಿ ಟ್ವೀಟ್ 35,000 ಬಾರಿ ರೀಟ್ವೀಟ್ ಆಗಿದ್ದರೆ, ಇನ್ ಸ್ಟಾಂ ಗ್ರಾಂ ಪೋಸ್ಟ್ ನ್ನು 191000 ಜನರು ಲೈಕ್ ಮಾಡಿದ್ದಾರೆ.

ಅದೇ ವೇಳೆ ಇನ್ನು ಕೆಲವರು ಟ್ವಿಟರ್‌ನಲ್ಲಿ ಕೊಹ್ಲಿ ಹಾಕಿದ ಟ್ವೀಟ್‌ನ್ನೇ ಟ್ರೋಲ್ ಮಾಡಿದ್ದಾರೆ. ಬಹುತೇಕ ಮಂದಿ ಕೊಹ್ಲಿಯ ಪೋಸ್ಟ್‌ಗೆ ಬೆಂಬಲ ನೀಡಿ, ಆತನ ಭಾವನೆಯನ್ನು ಗೌರವಿಸಿದ್ದಾರೆ.

Write A Comment